ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನ ಕೊನೆಯ ಅಧಿವೇಶನವಾಗಲಿದೆ : ವಿಜಯೇಂದ್ರ
ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನ ಕೊನೆಯ ಅಧಿವೇಶನವಾಗಲಿದೆ : ವಿಜಯೇಂದ್ರ
ಬೆಳಗಾವಿ : ಸಿಎಂ ಸಿದ್ದರಾಮಯ್ಯ ಅವರ ಪಾಲಿಗೆ ಬೆಳಗಾವಿ ಚಳಿಗಾಲದ ಅಧಿವೇಶನವು ಕೊನೆಯ ಅಧಿವೇಶನವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಭ್ರಷ್ಟಾಚಾರ ನಡೆಸಿ ಒಂದನೇ ಆರೋಪಿ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಹರಾಜಿಗಿದೆ. ಯಾರಾಗ್ತಾರಂತೆ ಗೊತ್ತಿಲ್ಲ ನೋಡೋಣ ಎಂದರು. ಸರಕಾರದಲ್ಲಿ ದುಡ್ಡು ಇಲ್ಲ. ಶಾಸಕರಿಗೆ ಅನುದಾನದ ಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಗುತ್ತಿಲ್ಲ ಎಂದು ಹರಿಹಾಯ್ದರು.
ನಮ್ಮ ಬಳಿ 66 ಶಾಸಕರಿದ್ದಾರೆ. ಕಾಂಗ್ರೆಸ್ ಪಕ್ಷ ನಮ್ಮ ಮೇಲೆ ವಿನಾಕಾರಣ ಆರೋಪ ಮಾಡುತ್ತಿದೆ. ಬಿಜೆಪಿಯವರು ಕಾಂಗ್ರೆಸ್ ಶಾಸಕರನ್ನು ಖರೀಸಲು 50 ಕೋಟಿ, 100 ಕೋಟಿ ರೂ. ಆಫರ್ ಎಂದು ಕಾಂಗ್ರೆಸ್‌ನವರು ಬಿಂಬಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಭೀತಿ ಇದೆ. ಆದ್ದರಿಂದ ಇಂಥ ಅಪಪ್ರಚಾರ ನಡೆಸಿದ್ದಾರೆ. ಸರಕಾರದಲ್ಲಿರುವ ಶಾಸಕರನ್ನು ನಾವು ಯಾರೂ ಸಂಪರ್ಕ ಮಾಡಿಲ್ಲ ಎಂದರು.
ಚಳಿಗಾಲದ ಅಧಿವೇಶನದಲ್ಲಿ ಸರಕಾರ ಇಕ್ಕಟ್ಟಿಗೆ ಸಿಲುಕಿಸಲು ನಾವು ಸನ್ನದ್ದರಾಗಿದ್ದೇವೆ. ರಾಜ್ಯ ಸರಕಾರ ಕಿತ್ತೂರು ಕರ್ನಾಟಕ, ಉತ್ತರ ಕರ್ನಾಟಕ ನಿರ್ಲಕ್ಷ್ಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿ ಬುಡಾ ಹಗರಣಕ್ಕಿಂತ ಮುಡಾ ಹಗರಣ ದೊಡ್ಡದಿದೆ. ಬೆಳಗಾವಿ ಬುಡಾ ಹಗರಣ ಕುರಿತು ಮಾಹಿತಿ ಇಲ್ಲ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ಮಾಜಿ ಶಾಸಕ ಸಂಜಯ ಪಾಟೀಲ್, ಮುರುಗೇಂದ್ರಗೌಡ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.