ಬೆಳಗಾವಿ ಕಾಂಗ್ರೆಸ್ ಅಧಿವೇಶನ ಶತಮಾನದ ಸಂಭ್ರಮ
ಬೆಳಗಾವಿ ಜಿಲ್ಲೆಯು ಪ್ರಾಚೀನ ಕಾಲದಿಂದಲೂ ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿದೆ. ಈ ಪ್ರಾಚೀನತೆಯ ಜೊತೆಗೆ ಬಹುಸಂಸ್ಕೃತಿಯ್ನು ಹೊಂದಿದೆ. ಹಲವಾರು ಭಾಷೆಗಳು, ಹತ್ತಾರು ಧರ್ಮಗಳು, ನೂರಾರು ಸಂಪ್ರದಾಯ ಆಚರಣೆಗಳು ಈ ನೆಲವನ್ನು ಸಾಂಸ್ಕೃತಿಕವಾಗಿ ಗಟ್ಟಿಗೊಳಿಸಿವೆ. ಗೋವಾ-ಕರ್ನಾಟಕ-ಮಹಾರಾಷ್ಟ್ರ ಈ ಮೂರು ರಾಜ್ಯಗಳ ಸಾಂಸ್ಕೃತಿಕ ‘ಆದಾನ-ಪ್ರಧಾನ’ ಬೆಳಗಾವಿ ಜಿಲ್ಲೆಯ ಮೂಲಕ ನಡೆಯುತ್ತಿದೆ. ಪುರಾಣ ಕಾಲದಲ್ಲಿ ಬೆಳಗಾವಿಗೆ ‘ಯದು ಗ್ರಾಮ’ ವೆಂದು ಕರೆಯುತ್ತಿದ್ದರು. ಗೋವಾ ಕದಂಬರ ಇಮ್ಮಡಿ ಜಯಕೇಶಿಯ ನರೇಂದ್ರ ಶಾಸನದಲ್ಲಿ ಬೆಳಗಾವಿಗೆ ಮೊದಲು ವೇಣುಗ್ರಾಮ ಎಂಬ ಉಲ್ಲೇಖವಿದೆ. ವೇಣುಗ್ರಾಮವು ಮರಾಠರ ವಶವಾದಾಗ ಮರಾಠಿ ಭಾಷೆಯ ಪ್ರಭಾವದಿಂದ ಬೇಳುಗಾವ್ ಎಂದಾಯಿತು. ಬರುಬರುತ್ತ ಅದು ಬೆಳಗಾಂವ್ ಎಂದಾಯಿತು. ಬ್ರಿಟಿಷರ ಆಡಳಿತಕ್ಕೆ ಒಳಪಟ್ಟನಂತರ ಅದು ಬೆಲಗಮ್ ಆಗಿ ಬದಲಾವಣೆಗೊಂಡಿತು. ನಂತರ ಕರ್ನಾಟಕ ಸರ್ಕಾರದವರು ಬೆಳಗಾವಿ ಎಂದು ನಾಮಕರಣ ಮಾಡಿದರು.
ಶಿಲಾಯುಗದ ಕಾಲದಿಂದ ಬ್ರಿಟಷರವರೆಗೆ ಬೆಳಗಾವಿಯ ಇತಿಹಾಸವು ವೈಶಿಷ್ಟ್ಯಪೂರ್ಣವಾಗಿದೆ. ಹಲವಾರು ರಾಜಕೀಯ ಸ್ಥಿತ್ಯಂತರಗಳನ್ನು ಎದುರಿಸಿ ರಾಜರಿಂದ ರಾಜರಿಗೆ ಸಿಂಹಾಸನ ಸ್ಥಾನಪಲ್ಲಟಗೊಂಡು ಹಲವಾರು ಯುದ್ಧಗಳಿಗೆ ಯುದ್ಧಭೂಮಿಯಾಗಿ ಕರ್ನಾಟಕದ ಚರಿತ್ರೆಯಲ್ಲಿ ಮಹತ್ವವನ್ನು ಪಡೆದುಕೊಂಡಿದೆ. ಬೆಳಗಾವಿಯನ್ನು ಆಳಿದ ಅರಸು ಮನೆತನಗಳಲ್ಲಿ ಸವದತ್ತಿಯ ರಟ್ಟರು ಪ್ರಮುಖರಾಗಿದ್ದಾರೆ. ಅವರು ಸವದತ್ತಿಯಿಂದ ತಮ್ಮ ರಾಜಧಾನಿಯನ್ನು ಬೆಳಗಾವಿಗೆ ಸ್ಥಳಾಂತರಿಸಿಕೊಂಡು ಆಳ್ವಿಕೆ ನಡೆಸಿದರು. ಕಲೆ, ಸಾಹಿತ್ಯ, ಸಂಗೀತಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ ರಟ್ಟರು ಹಲವಾರು ದೇವಾಲಯಗಳನ್ನು, ಬಸಿದಿಗಳನ್ನು ಕಟ್ಟಿಸಿದರು. ಬೆಳಗಾವಿಯ ಪ್ರಸಿದ್ಧ ಕಮಲ ಬಸದಿಯು ರಟ್ಟರ ಕಾಲದಲ್ಲಿ ನಿರ್ಮಾಣಗೊಂಡಿದೆ. ರಟ್ಟರ ಅವನತಿಯ ನಂತತರ ಹಲವಾರು ರಾಜರು ಈ ಪ್ರದೇಶವನ್ನು ಆಕ್ರಮಿಸಿ ಆಡಳಿತವನ್ನು ನಡೆಸಿದರು. ಅವರಲ್ಲಿ ಮುಖ್ಯವಾಗಿ ದೇವಗಿರಿಯ ಯಾದವರು, ವಿಜಯನಗರದ ಅರಸರು, ಬಹುಮನಿ ಸುಲ್ತಾನರು, ವಿಜಾಪುರದ ಆದಿಲ್‌ಶಾಹಿಗಳು, ಮೊಘಲರು, ಮರಾಠರು, ಪೇಶ್ವೆಗಳು ಹೀಗೆ ಹತ್ತಾರು ರಾಜ ಮನೆತನಗಳು ಬೆಳಗಾವಿ ಪ್ರದೇಶಗಳಲ್ಲಿ ಆಡಳಿತವನ್ನು ನಡೆಸಿದವು.
ಬ್ರಿಟಿಷರು ಬೆಳಗಾವಿಯನ್ನು ವಶಪಡಿಸಿಕೊಂಡ ಮೇಲೆ ಬೆಳಗಾವಿಯು ಜಿಲ್ಲೆಯಾಗಿ ರೂಪಗೊಳ್ಳತೊಡಗಿತು. ದಕ್ಷಿಣ ಮಹಾರಾಷ್ಟ್ರದ ಭಾಗವೆಂದೇ ಆಗ ಗುರುತಿಸಲ್ಪಟ್ಟ ಬೆಳಗಾವಿ, ವಿಜಾಪುರ, ಧಾರವಾಡ ಹಾಗೂ ಕಾರವಾರ ಪ್ರದೇಶಗಳು ಮುಂಬೈ ಮತ್ತು ಮದ್ರಾಸ್ ಇಲಾಖೆಗಳಿಗೆ ಸೇರಲ್ಪಟ್ಟವು. 1830ರ ಹೊತ್ತಿಗೆ ದಕ್ಷಿಣ ಮಹಾರಾಷ್ಟ್ರದ ಸೀಮೆಯನ್ನೆಲ್ಲಾ ಕೂಡಿಸಿ ಧಾರವಾಡ ಜಿಲ್ಲೆಯನ್ನು ಮಾಡಿ ಅದನ್ನು ಮುಂಬೈ ಇಲಾಖೆಗೆ ಸೇರಿಸಲಾಯಿತು. ಮುಂದೆ ಧಾರವಾಡ ಜಿಲ್ಲೆಯನ್ನು ಎರಡು ವಿಭಾಗ ಮಾಡಿ, ಬೆಳಗಾವಿ ವಿಭಾಗಕ್ಕೆ ಪ್ರತ್ಯೇಕ ಕಲೆಕ್ಟರ್‌ನನ್ನು ನೇಮಿಸಿದರು. ನಂತರ ಬೆಳಗಾವಿ ಸ್ವತಂತ್ರ ಜಿಲ್ಲೆಯಾಗಿ ರೂಪಗೊಂಡದ್ದು ಕ್ರಿ.ಶ.1838ರ ಮಾರ್ಚ 9ರಂದು. ಕ್ರಿ.ಶ.1884ರ ಹೊತ್ತಿಗೆ ಬೆಳಗಾವಿ ಜಿಲ್ಲೆಯು ದಕ್ಷಿಣ ಮಹಾರಾಷ್ಟ್ರದ ನಾಲ್ಕು ಜಿಲ್ಲೆಗಳಿಗೆ ವಿಭಾಗೀಯ ಕೇಂದ್ರವಾಯಿತು. ಈ ನಾಲ್ಕು ಜಿಲ್ಲೆಗಳನ್ನೊಳಗೊಂಡ ಮುಂಬೈ ಪ್ರಾಂತ್ಯದ ಆಡಳಿತಕ್ಕೆ ಬೆಳಗಾವಿ ಒಳಪಟ್ಟಿತು. ಬೆಳಗಾವಿ ಜಿಲ್ಲಾ ಕೇಂದ್ರವಾದ ನಂತರ ಹಂತ ಹಂತವಾಗಿ ಬೆಳವಣಿಗೆನ್ನು ಹೊಂದತೊಡಗಿತು. 1851ರಲ್ಲಿ ಬೆಳಗಾವಿ ಮುನಿಸಿಪಾಲಿಟಿಯು ಸ್ಥಾಪನೆಗೊಂಡಿತು. ಇದು ಅಂದಿನ ಬಾಂಬೆ ಕರ್ನಾಟಕ ಪ್ರಾಂತ್ಯದಲ್ಲಿ ಸ್ಥಾಪನೆಗೊಂಡ ಮೊಟ್ಟಮೊದಲ ನಗರಸಭೆಯಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ ಹೋರಾಟವು ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಪ್ರಮುಖ ಘಟ್ಟವಾಗಿದೆ. ಹೋರಾಟಕ್ಕೆ ಪ್ರಮುಖವಾದ ತಿರುವುಗಳು ಬೆಳಗಾವಿ ನೆಲದಿಂದಲೇ ಒದಗಿಬಂದವು. ಟಿಳಕ ಹಾಗೂ ಗಾಂಧಿಯುಗಗಳೆಂದೂ ಬೆಳಗಾವಿ ಪ್ರದೇಶದಲ್ಲಿ ಪರಿಣಾಮಕಾರಿಯಾದವು. ಸಂಗೊಳ್ಳಿ ರಾಯಣ್ಣನಿಗೆ ನೀಡಿದ ಗಲ್ಲು ಶಿಕ್ಷೆ, 1858ರಲ್ಲಿ ಬೆಳಗಾವಿಯ ಸಾರ್ವಜನಿಕರ ಎದುರಿಗೆ ನರಗುಂದದ ಬಾಬಾ ಸಾಹೇಬರಿಗೆ ನೀಡಿದ ಗಲ್ಲುಶಿಕ್ಷೆ ಮುಂತಾದ ಘಟನೆಗಳನ್ನು ಕಂಡಿದ್ದ ಈ ಭಾಗದ ಜನರಲ್ಲಿ ಬ್ರಿಟಿಷರ ವಿರುದ್ಧ ಆಕ್ರೋಶ ಎದೆಯೊಳಗೆ ತುಂಬಿಕೊಂಡಿತ್ತು. ವೀರರ ಪರಾಕ್ರಮಗಳನ್ನು ಲಾವಣಿ, ನಾಟಕಗಳ ಮೂಲಕ ಕೇಳಿ ನೋಡಿ ಪ್ರತಿಕಾರಕ್ಕಾಗಿ ಕಾದು ಕುಳಿತಿದ್ದರು. ಅಲ್ಲದೇ ಬ್ರಿಟಿಷರ ದೌರ್ಜನ್ಯದ ಆಡಳಿತ ಇಲ್ಲಿಯ ಜನರ ಬದುಕಿಗೆ ಬೇಸರವನ್ನು ಮೂಡಿಸಿತ್ತು.
ಇಂತಹ ಸಂದರ್ಭದಲ್ಲಿ 1885ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ಮಾಡಲು ಮುಂಬೈಯಲ್ಲಿ ಸಭೆ ಸೇರಿದಾಗ ಬೆಳಗಾವಿ ಪ್ರದೇಶದಿಂದ ಹಲವಾರು ಜನರು ಭಾಗವಹಿಸಿದರು. ಅದರಲ್ಲಿ ಭಾವೂ ಸಾಹೇಬ ಭಾಟೆ, ವಿಷ್ಣುಪಂತ ನಾತೂ, ಛತ್ರಿ ವಕೀಲರು, ದೇಶಪಾಂಡೆ ಪ್ರಮುಖರಾಗಿದ್ದರು. ನಂತರ 1887ರಲ್ಲಿ ಮದ್ರಾಸನಲ್ಲಿ ನಡೆದ ಅಧಿವೇಶನಕ್ಕೆ ದೇಶಪಾಂಡೆಯವರ ನೇತೃತ್ವದಲ್ಲಿ 25 ಜನರು ಭಾಗವಹಿಸಿದ್ದರು. ಕ್ರಿ.ಶ.1892ರಲ್ಲಿ ಬ್ರಿಟಿಷರು ಅರಣ್ಯ ಕಾಯ್ದೆಯನ್ನು ಜಾರಿಗೆ ತಂದಾಗ ಅದರ ವಿರುದ್ಧ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ರೈತರ ಸಾರ್ವಜನಿಕ ಪ್ರತಿಭಟನೆ ಬೆಳಗಾವಿಯಲ್ಲಿ ನಡೆದಿದ್ದು, ದೇಶದ ಸ್ವಾತಂತ್ರಯ ಸಂಗ್ರಾಮದ ಇತಿಹಾಸದಲ್ಲಿ ಮಹತ್ವದ ಘಟನೆಯಾಗಿದೆ. ಕ್ರಿ.ಶ.1893ರಲ್ಲಿ ಕಾಂಗ್ರೆಸ್ಸಿನ ಅಂದಿನ ಮುಖಂಡರಾದ ಯು.ಎ.ಹ್ಯೂಂ. ಅವರು ಬೆಳಗಾವಿಗೆ ಬಂದು ಸ್ವಾತಂತ್ರಯದ ಮಹತ್ವ ಹಾಗೂ ಕಾಂಗ್ರೆಸ್ಸಿನ ಹೋರಾಟದ ಕುರಿತು ಸಾರ್ವಜನಿಕ ಸಭೆಗಳಲ್ಲಿ ಪ್ರಚಾರ ಮಾಡಿದರು. ಲೋಕಮಾನ್ಯ ಬಾಲಗಂಗಾಧರ ಟಿಳಕರು ಬೆಳಗಾವಿ ಜಿಲ್ಲೆಯ ತುಂಬೆಲ್ಲಾ ಸಂಚರಿಸಿ ಜನರಲ್ಲಿ ಸ್ವಾತಂತ್ರ್ಯದ ಮಹತ್ವವನ್ನು ಬೋಧಿಸಿದ್ದರು. ಬೆಳಗಾವಿಯಲ್ಲಿ ಸ್ವದೇಶಿ ವಸ್ತು ಭಂಡಾರವನ್ನು ತೆರೆದು ಗಂಗಾಧರರಾವ ದೇಶಪಾಂಡೆಯವರು ಮಾರಾಟ ಮಾಡತೊಡಗಿದರು. 1916ರಲ್ಲಿ ಬೆಳಗಾವಿಯಲ್ಲಿ ಮುಂಬೈ ಪ್ರಾಂತೀಯ ರಾಜಕೀಯ ಪರಿಷತ್ತು ಸಭೆ ಸೇರಿತು. ಈ ಸಭೆಗೆ ಮಹಾತ್ಮಾ ಗಾಂಧಿ, ಲೋಕಮಾನ್ಯ ತಿಲಕ, ದಾದಾಸಾಹೇಬ ಘೋರೆ್ಡ, ನರಸೋಪಂತ ಕೇಳಕರ ಮುಂತಾದ ರಾಷ್ಟ್ರೀಯ ನಾಯಕರು ಆಗಮಿಸಿದ್ದರು. ಈ ಸಭೆಯಲ್ಲಿಯೇ ಹೋಮ್‌ರೂಲ್ ಲೀಗ್‌ದ ಸ್ಥಾಪನೆಯಾಯಿತು. ಟಿಳಕರ ನಂತರ ಬೆಳಗಾವಿ ಸ್ವಾತಂತ್ರ್ಯ ಹೋರಾಟಗಾರರಿಗೆ ಮಹಾತ್ಮಾ ಗಾಂಧೀಜಿಯವರು ನಾಯಕರಾದರು.
ಟಿಳಕರ ಮರಣದ ದಿನವೇ ಗಾಂಧೀಜಿಯವರು ಅಸಹಕಾರ ಚಳುವಳಿಯ ಕರೆ ನೀಡಿದರು. ಬೆಳಗಾವಿ ನಗರ ಮತ್ತು ಜಿಲ್ಲೆಯಾದ್ಯಂತ ಅಸಹಕಾರ ಚಳುವಳಿ ದೇಶದಲ್ಲಿಯೇ ಅತಿ ಹೆಚ್ಚು ಪ್ರಬಲವಾಗಿ ನಡೆಯಿತು. ಕ್ರಿ.ಶ.1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೇಸ್ ಅಧಿವೇಶನವು ನಡೆದು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿಯನ್ನು ಬರೆಯಲಾಯಿತು. 1924ರ ಡಿಸೆಂಬರ 26 ರಿಂದ 28ರವರೆಗೆ ಮೂರು ದಿನಗಳ ಕಾಲ ನಡೆದ 39ನೆಯ ರಾಷ್ಟ್ರೀಯ ಕಾಂಗ್ರೇಸ್ ಅಧಿವೇಶನವು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ತಿರುವು ನೀಡಿತು. ಈ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮಾ ಗಾಂಧೀಜಿಯವರು ವಹಿಸಿಕೊಂಡಿದ್ದರು. ಈ ಅಧಿವೇಶನದ ಮೂಲಕ ಮಹಾತ್ಮಾ ಗಾಂಧೀಜಿಯವರು ಅಖಂಡ ಭಾರತದಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ಹೊರಹೊಮ್ಮಿದರು. ಹಲವು ಮಹತ್ವದ ನಿರ್ಣಯಗಳ ಘೋಷಣೆ, ಭಿನ್ನಾಭಿಪ್ರಾಯಗಳ ಇತ್ಯರ್ಥ, ಕಲೆ, ಸಂಸ್ಕೃತಿ, ಭಾಷೆ, ಸಂಗೀತಗಳ ಪ್ರದರ್ಶನ, ಸಾಹಿತ್ಯ ಕೃತಿಗಳ ಬಿಡುಗಡೆ ಹೀಗೆ ಹಲವಾರು ಮಹತ್ವದ ಘಟನೆಗಳಿಗೆ ಬೆಳಗಾವಿ ಕಾಂಗ್ರೇಸ್ ಆಧಿವೇಶನ ಸಾಕ್ಷಿಯಾಯಿತು. ಬೆಳಗಾವಿಯಲ್ಲಿ ಕಾಂಗ್ರೇಸ್ ಅಧಿವೇಶನ ಜರುಗಿದ್ದು ಕರ್ನಾಟಕದ ಪಾಲಿಗೆ ಅತ್ಯಂತ ಮಹತ್ವದ್ದು, ಸಮಗ್ರ ಕರ್ನಾಟಕದ ಸಂಸ್ಕೃತಿಯೇ ಈ ಅಧಿವೇಶನದಲ್ಲಿ ಪ್ರತಿಬಿಂಬಿತವಾಗಿತ್ತು. ಕನ್ನಡಿಗರ ವೇಷಭೂಷಣ, ಊಟ-ಉಪಚಾರ, ಕಲೆ, ಸಂಸ್ಕೃತಿ, ಸಂಗೀತ, ಸಾಹಿತ್ಯ, ಇತಿಹಾಸ ಇವೆಲ್ಲವುಗಳನ್ನು ದೇಶದ ಗಣ್ಯರ ಎದುರಿಗೆ ತೆರೆದಿಡಲು ಈ ವೇದಿಕೆಯ ಮೂಲಕ ಸಾಧ್ಯವಾಯಿತು.
ಸರಳ ಜೀವನ ಅಳವಡಿಸಿಕೊಂಡಿದ್ದ ಮಹಾತ್ಮಾ ಗಾಂಧೀಜಿಯವರು ಬೆಳಗಾವಿ ಅಧಿವೇಶನಕ್ಕೆ ಐದು ದಿನ ಮುಂಚೆಯೇ ಆಗಮಿಸಿದ್ದರು. ವಾಸ್ತವ್ಯಕ್ಕೆ ಅತ್ಯುತ್ತಮ ವ್ಯವಸ್ಥೇ ಇದ್ದರೂ ಅವರು ಕಾಂಗ್ರೇಸ್ ಅಧಿವೇಶನ ನಡೆಯುತ್ತಿದ್ದ ಸ್ಥಳದಲ್ಲೇ ಬಂದು ಟೆಂಟ್ ಹಾಕಿಕೊಂಡು ವಾಸ್ತವ್ಯ ಮಾಡಿದ್ದರು. ಈ ಅಧಿವೇಶನದಲ್ಲಿ ಗಾಂಧೀಜಿಯವರ ಜೊತೆ ಮೋತಿಲಾಲ್ ನೆಹರು, ಅನ್ನಿಬೆಸೆಂಟ್, ವಲ್ಲಭಬಾಯ್ ಪಟೇಲ್, ಜವಾಹರಲಾಲ ನೆಹರು, ಸರೋಜಿನಿ ನಾಯ್ದು, ಮೌಲಾನಾ ಅಜಾದ್, ಅಬ್ದುಲ್ ಗಫಾರ್ ಖಾನ್, ಲಾಲಾ ರಜಪತರಾಯ ಮುಂತಾದ ದಿಗ್ಗಜರು ಪಾಲ್ಗೊಂಡಿದ್ದರು. ಮೈಸೂರ ಸಂಸ್ಥಾನದ ಕೃಷ್ಣರಾಜ ಒಡೆಯರು ತಮ್ಮ ಮ್ಯೂಸಿಯಂನಲ್ಲಿದ್ದ ಮೂರ್ತಿಗಳನ್ನು ಅಧಿವೇಶನದಲ್ಲಿ ಪ್ರದರ್ಶನಕ್ಕೆ ರವಾನೆ ಮಾಡಿದರು. ಅಲ್ಲದೇ ಖಾದಿ ಗ್ರಾಮೋದ್ಯೋಗ ಪ್ರದರ್ಶನಕ್ಕೆ ನೆರವು ನೀಡಿದ್ದಲ್ಲದೇ ತಮ್ಮ ಸ್ವಂತ ವೆಚ್ಚದಲ್ಲಿ ಸಂಗೀತಗಾರರನ್ನು ಕಳುಹಿಸಿಕೊಟ್ಟರು. ಮಹಾತ್ಮಾ ಗಾಂಧೀಜಿಯವರು ಅಂದಾಜು ಒಂದುವರೆ ಗಂಟೆಯವರೆಗೆ ಶೇಷಣ್ಣನವರ ವೀಣಾ ವಾದನವನ್ನು ಆಲಿಸಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಹುಯಿಲಗೋಳ ನಾರಾಯಣ ರಾಯರ ‘ಉದಯವಾಗಲಿ ನಮ್ಮ ಚೆಲುವು ಕನ್ನಡ ನಾಡು’ ಎಂಬ ನಾಡಿನ ಏಕೀಕರಣದ ಗುರಿಯನ್ನು ಹೊತ್ತ ಹಾಡು ಹದಿನಾಲ್ಕು ವರ್ಷದ ಬಾಲಕಿಯಾಗಿದ್ದ ಗಂಗೂಬಾಯಿ ಹಾನಗಲ್ ಅವರಿಂದ ಹಾಡಲ್ಪಟ್ಟಿತು. ಈ ಕಾಂಗ್ರೇಸ್ ಅಧಿವೇಶನ ಮೂಲಕ ಉದಯೋನ್ಮುಖ ಸಂಗೀತಗಾರ್ತಿಯಾಗಿ ಗಂಗೂಬಾಯಿ ಹೊರಹೊಮ್ಮಿದರು.
ಇದೇ ಅಧಿವೇಶನದಲ್ಲಿ ಕರ್ನಾಟಕ ಏಕೀಕರಣದ ಮೊದಲನೆ ಪರಿಷತ್ತು ಸರ್ ಸಿದ್ದಪ್ಪ ಕಂಬಳಿಯವರ ಅಧ್ಯಕ್ಷತೆಯಲ್ಲಿ ಜರುಗಿತು. ಇದು ಕರ್ನಾಟಕ ಏಕೀಕರಣ ಹೋರಾಟಕ್ಕೆ ಮಹತ್ವದ ಸಭೆಯಾಯಿತು. ಹರ್ಡೇಕರ ಮಂಜಪ್ಪನವರು ‘ಸತ್ಯಾಗ್ರಹಿ ಬಸವೇಶ್ವರ’ ಎಂಬ ಕೃತಿಯನ್ನು ಹಿಂದಿ ಹಾಗೂ ಮರಾಠಿ ಭಾಷೆಯಲ್ಲಿ ಬರೆಯಿಸಿ ಗಾಂಧೀಜಿಯವರಿಗೆ ನೀಡಿದರು. ಇದರಿಂದ ಗಾಂಧೀಜಿಯವರು ತಮ್ಮ ಭಾಷಣದಲ್ಲಿ ‘ತಾವು ಇಂದು ಕೈಗೊಂಡಿದ್ದ ಅಸ್ಪೃಶ್ಯತಾ ನಿವಾರಣೆ, ಮಹಿಳೆಯರಿಗೆ ಸಮಾನ ಹಕ್ಕು, ಸಾಮಾಜಿಕ ನ್ಯಾಯ, ಕಾಯಕತತ್ವ ಮುಂತಾದ ವಿಧಾಯಕ ಕಾರ್ಯಕ್ರಮಗಳನ್ನು ಬಸವೇಶ್ವರರು 800 ವರ್ಷಗಳ ಹಿಂದೆಯೇ ಪ್ರಾರಂಭಿಸಿದರು. ನಾವು ಅವುಗಳನ್ನು ಅನುಕರಣೆ ಮಾಡುತ್ತಿರುವದಾಗಿ’ ಹೇಳಿದರು. ಗಾಂಧೀಜಿಯವರ ಈ ಮಾತುಗಳು ನೆರೆದ ಜನರ ಮೇಲೆ ಗಾಢವಾದ ಪರಿಣಾಮವನ್ನು ಬೀರಿದವು. ಮುಂದಿನ ದಶಕಗಳಲ್ಲಿ ಕಾಂಗ್ರೇಸ್ ಒಂದುಗೂಡಿದ ದೈತ್ಯಶಕ್ತಿಯಾಗಿ ಬೆಳೆಯಲು ಸಹಾಯಕವಾಯಿತು. ಬೆಳಗಾವಿ ಕಾಂಗ್ರೇಸ್ ಅಧಿವೇಶನದ ನಂತರ ದೇಶದಲ್ಲೆಲ್ಲಾ ಸ್ವಾತಂತ್ರ್ಯ ಹೋರಾಟ ಹೊಸ ರೂಪವನ್ನು ತಾಳಿತು. ಸಾಯಮನ್ ಕಮೀಶನ್ ಕಾಯ್ದೆಯ ಬಹಿಷ್ಕಾರ, ಉಪ್ಪಿನ ಸತ್ಯಾಗ್ರಹ, ವಿದೇಶಿ ಬಹಿಷ್ಕಾರ, ಕ್ವಿಟ್ ಇಂಡಿಯಾ ಚಳುವಳಿ, ಕಾಯಿದೆ ಭಂಗ ಚಳುವಳಿ ಹೀಗೆ ಮುಂದೆ ಸ್ವಾತಂತ್ರ್ಯ ಸಿಗುವವರೆಗೂ ನಡೆದ ಹೋರಾಟಗಳಲ್ಲಿ ಬೆಳಗಾವಿ ಜಿಲ್ಲೆಯು ಸಕ್ರಿಯವಾಗಿ ಭಾಗವಹಿಸಿತು.
ಕುವೆಂಪುರವರು ತಮ್ಮ ಮಿತ್ರರೊಡನೆ ರಾಷ್ಟ್ರೀಯ ಕಾಂಗ್ರೇಸ್ ಅಧಿವೇಶನಲ್ಲಿ ಮಹಾತ್ಮಾ ಗಾಂಧೀಜಿಯವರನ್ನು ಕಾಣಲು ಮೈಸೂರಿನಿಂದ ಆಗಮಿಸಿದ್ದರು. ಅಧಿವೇಶನದ ಕುರಿತು ತಮ್ಮ ಅನುಭವಗಳನ್ನು ಹೀಗೆ ಹಂಚಿಕೊಂಡಿದ್ದರು. ಆಗ ಕುವೆಂಪುರವರು ಮೊದಲನೆಯ ವರ್ಷದ ಬಿ.ಎ. ತರಗತಿಯಲ್ಲಿ ಓದುತ್ತಿದ್ದರು. ‘ರೈಲು ಪ್ರಯಾಣವು ಒಂದು ಸಾಹಸವೇ ಆಗಿತ್ತು. ಗಾಂಧೀಜಿ ಅಧ್ಯಕ್ಷತೆ ವಹಿಸುವ ಕಾಂಗ್ರೇಸ್ ಅಧಿವೇಶನಕ್ಕೆ ಹೊರಟ ಅಕ್ಷರಶಃ ಲಕ್ಷಾಂತರ ಜನರ ನೂಕು ನುಗ್ಗಲು ಉಸಿರುಕಟ್ಟಿಸುತ್ತಿತ್ತು. ಚಳಿಗಾಲವಿದ್ದರೂ ಕಾಂಪಾರ್ಟುಮೆಂಟಿನ್ ಒಳಗೆ ಕುದಿಯುವ ಸೆಕೆ! ಬೆಳಗಾವಿ ಊರಿನಲ್ಲಿ ಮಿತ್ರರೊಬ್ಬರ ಬಂಧುಗಳ ಮನೆಯಲ್ಲಿಯೇ ನಾವೆಲ್ಲ ಇಳಿದುಕೊಳ್ಳುವಂತೆ ಏರ್ಾಡಾಗಿತ್ತು. ಅಧಿವೇಶನದ ಭಾಷಣ ವೇದಿಕೆಯ ಸುವಿಸ್ತೃತವಾದ ಪ್ರಧಾನ ಮಂಟಪವಷ್ಟೇ ಭವ್ಯವಾಗಿತ್ತು. ಭೋಜನ ಶಾಲೆಯ ಊಟ ತಿಂಡಿಯ ಓತಣವನ್ನು ಕಂಡು ಬೆರಗು ಬಡಿದಿತ್ತು. ಕೇಳಿದಷ್ಟು ಸಿಹಿ, ಕೇಳಿದಷ್ಟು ಹಾಲು, ತುಪ್ಪ, ಚಪಾತಿ, ಶ್ರೀಖಂಡ ಮತ್ತು ಏನೇನೋ ನಾನಾ ಪ್ರಾಂತದ ತರತರದ ಭಕ್ಷ್ಯ ಭೋಜ್ಯಗಳು. ರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಸುಪ್ರಸಿದ್ಧರಾಗಿದ್ದ ಅನೇಕ ವ್ಯಕ್ತಿಗಳು ಅಧಿವೇಶನದಲ್ಲಿ ನೆರೆದಿದ್ದರು. ಆದರೆ ನಮಗಿದ್ದುದು ಮುಖ್ಯವಾಗಿ ಒಂದೇ ಲಕ್ಷ್ಯ : ಗಾಂಧೀಜಿಯ ದರ್ಶನ! ನಾವು ನಿಂತುಕೊಂಡಿದ್ದ ಸ್ಥಳದಲ್ಲಿಂದ ಗಾಂಧೀಜಿ ಸಣ್ಣದೊಂದು ಪುತ್ಥಲಿಯ ಗೊಂಬೆಯಷ್ಟೇ ಆಕಾರದಲ್ಲಿ ಕಾಣಿಸುತ್ತಿದ್ದರು. ತುಸು ಹೊತ್ತು ಅಧಿವೇಶನದ ದೃಶ್ಯಾವಳಿಗಳನ್ನು ವೀಕ್ಷಿಸುತ್ತಾ ಅಲ್ಲಿ ಇಲ್ಲಿ ಅಲೆದವು. ಗುಸುಗುಸು ಹಬ್ಬಿತು. ಗಾಂಧೀಜಿ ಬರುತ್ತಿದ್ದಾರೆ ಎಂದು. ಮಹಾತಾಮಸ ಮತ್ತು ಮಹಾರಾಜಸಗಳ ಮಧ್ಯ ನಡೆದುಬರುವ ಮಹಾಸಾತ್ವಿಕದಂತೆ ಕಾಣಿಸಿಕೊಂಡರು ಗಾಂಧೀಜಿ. ಮೌಲಾನಾ ಮಹಮ್ಮದಾಲಿ ಮತ್ತು ಮೌಲಾನಾ ಷೌಕತಾಲಿ ಇಬ್ಬರೂ ಪ್ರಾಚೀನ ಪೌರಾಣಿಕ ಅಸುರರಂತೆ ದೈತ್ಯ ಗಾತ್ರರಾಗಿದ್ದರು. ಅಣುರೂಪಿ ಗಾಂಧೀಜಿಯ ಆಕೃತಿ, ಅವರಿಬ್ಬರ ನಡುವೆ. ನಮ್ಮ ಗೌರವಸಮಸ್ತವೂ ಸಾಷ್ಟಾಂಗವೆರಗಿತ್ತು. ಅವರ ಪದತಲದಲ್ಲಿ : ವಂದೇ ಮಾತರಂ ! ಭಾರತ ಮಾತಾಕೀ ಜೈ ! ಮಹಾತ್ಮಾ ಗಾಂಧೀ ಕೀ ಜೈ ! ಮೊದಲಾದ ಘೋಷಗಳು ಕಿವಿ ಬಿರಿಯುವಂತೆ ಗಗನದೇಶವನ್ನೆಲ್ಲ ತುಂಬಿದವು. ಆ ಉತ್ಸಾಹ ಸಾಗರಕ್ಕೆ ನನ್ನ ಕೀಚು ಕೊರಳೂ ತನ್ನ ದನಿಹನಿಯ ನೈವೇದ್ಯವನ್ನು ನೀಡಿ ಧನ್ಯವಾಗಿತ್ತು !”.
1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೇಸ್ ಅಧಿವೇಶನಕ್ಕೆ ಶತಮಾನೋತ್ಸವ ತುಂಬಿರುವ ಹಿನ್ನೆಲೆಯಲ್ಲಿ ಗಾಂಧಿ ಭಾರತ ಹೆಸರಲ್ಲಿ ವರ್ಷವೀಡೀ ಅರ್ಥಪೂರ್ಣ ಕಾರ್ಯಕ್ರಮವು ಆಯೋಜಿಸಲು ಸರ್ಕಾರ ನಿರ್ಧರಿಸಿದೆ. ಮೈಸೂರ ದಸರಾ ಮಾದರಿಯಲ್ಲಿ ಬೆಳಗಾವಿ ನಗರದ ಪ್ರಮುಖ 32 ಕಿ.ಮೀ. ಉದ್ದದ ರಸ್ತೆ ಹಾಗೂ 30 ವೃತ್ತಗಳ ದೀಪಾಲಂಕಾರ, ಕಾಂಗ್ರೇಸ್ ಅಧಿವೇಶನ ನಡೆದ ಸ್ಥಳದಲ್ಲಿ ವೀರಸೌಧ ಅಭಿವೃದ್ಧಿ, ಈ ಸ್ಥಳದಲ್ಲಿ ಗ್ರಂಥಾಲಯ ಮತ್ತು ಗಾಂಧಿ ಪ್ರತಿಮೆ ಅನಾವರಣ, ಬೆಳಗಾವಿಯ 2.1 ಕಿ.ಮೀ. ಉದ್ದದ ಕಾಂಗ್ರೇಸ್ ರಸ್ತೆಯಲ್ಲಿ ಶತಮಾನೋತ್ಸವದ ಸ್ಮಾರಕವಾಗಿ ತಾತ್ಕಾಲಿಕ ವಿರುಪಾಕ್ಷ ಗೋಪುರ ನಿರ್ಮಾಣ, ಕಣಬರಗಿಯಲ್ಲಿ ಗಂಗಾಧರರಾವ್ ದೇಶಪಾಂಡೆಯವರ ಸ್ಮಾರಕದಲ್ಲಿ ಮೂರ್ತಿ ಸ್ಥಾಪನೆ, ಹುದಲಿಯಲ್ಲಿ ಗಾಂಧಿ ಸ್ಮಾರಕ ಹಾಗೂ ಛಾಯಾಚಿತ್ರ ಗ್ಯಾಲರಿಯ ಅಭಿವೃದ್ಧಿ, ಅಟನ್‌ಬರೋ ನಿರ್ಮಿಸಿದ ಪ್ರಸಿದ್ಧ ಗಾಂಧಿ ಸಿನೆಮಾವನ್ನು ಕನ್ನಡದಲ್ಲಿ ನಿರ್ಮಿಸಲು ನಿರ್ಧಾರ, ಶತಮಾನೋತ್ಸವದ ನೆನಪಿಗೆ ವಿಶೇಷ ಅಂಚೆ ಚೀಟಿ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮ ಮುಂತಾದವುಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಒಟ್ಟಾರೆ ಗಾಂಧೀಜಿಯವರು ಬೋಧಿಸಿದ ಮತ್ತು ಪಾಲಿಸಿದ ಮೌಲ್ಯಗಳನ್ನು ಅನುಷ್ಠಾನಕ್ಕೆ ಒಳಪಡಿಸುವ ನಿಟ್ಟಿನಲ್ಲಿ ಕೇಂದ್ರಿಕೃತವಾಗಿರಬೇಕು ಎಂಬುದೇ ನಮ್ಮ ಆಶಯವಾಗಿದೆ.