ಧಾರವಾಡ 23: ಧಾರವಾಡ ವಿಧಾನಸಭಾ ಕ್ಷೇತ್ರ-71ರ ಬಿಜೆಪಿ ಶಾಸಕರು ಹಾಗೂ ಗರಗ ಮಡಿವಾಳೇಶ್ವರ ಮಠದ ಟ್ರಸ್ಟಿಯೂ ಆಗಿರುವ ಅಮೃತ ದೇಸಾಯಿ ಅವರು ಗುರುವಾರ ಬೆಳಗ್ಗೆ ತಮ್ಮ ಸಾವಿರಾರು ಬೆಂಬಲಿಗರರೊಂದಿಗೆ ಧಾರವಾಡ ತಾಲೂಕಿನ ಸುಕ್ಷೇತ್ರ ಗರಗ ಮಡಿವಾಳೇಶ್ವರ ಮಠದ ಗದ್ದುಗೆಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
ಆನಂತರ ಗರಗ ಮಡಿವಾಳೇಶ್ವರ ಮಠದ ಪೀಠಾಧಿಕಾರಿ ಚನ್ನಬಸವೇಶ್ವರ ಸ್ವಾಮೀಜಿಗಳ ಪಾದ ಪೂಜೆಯನ್ನು ಶಾಸಕ ಅಮೃತ ದೇಸಾಯಿ ಹಾಗೂ ಅವರ ಧರ್ಮಪತ್ನಿ ಪ್ರಿಯಾ ದೇಸಾಯಿ ನೆರವೇರಿಸಿ, ಅವರಿಗೆ ತೆಂಗಿನಕಾಯಿಯ ತುಲಾಭಾರ ನೆರವೇರಿಸಲಾಯಿತು.
ಶಾಸಕ ಅಮೃತ ದೇಸಾಯಿ ನೇತೃತ್ವದಲ್ಲಿ ಗರಗ ಗ್ರಾಮದಿಂದ ಸುಕ್ಷೇತ್ರ ಉಳವಿ ಚನ್ನಬಸವೇಶ್ವರ ದೇವಸ್ಥಾನದವರೆಗೆ ಬೃಹತ್ ಪಾದಯಾತ್ರೆಗೆ ಗರಗ ಮಡಿವಾಳೇಶ್ವರ ಮಠದ ಪೀಠಾಧಿಕಾರಿ ಚನ್ನಬಸವೇಶ್ವರ ಸ್ವಾಮೀಜಿ ಚಾಲನೆ ನೀಡಿದರು.
ಶಾಸಕ ಅಮೃತ ದೇಸಾಯಿ ಮಾತನಾಡಿ ಗರಗ ಮಡಿವಾಳೇಶ್ವರ ಮಠದ ಚನ್ನಬಸವೇಶ್ವರ ಸ್ವಾಮೀಜಿ ಅವರ ಆಶಯದಂತೆ ಪ್ರತಿ ವರ್ಷವೂ ಸಕಲ ಸದ್ಭಕ್ತರು ಪಾದಯಾತ್ರೆ ನಡೆಸಲು ಸಂಕಲ್ಪ ಮಾಡಿದ ಹಿನ್ನಲೆಯಲ್ಲಿ ಕಳೆದ ವರ್ಷದಿಂದ ಈ ಪಾದಯಾತ್ರೆ ಆರಂಭಗೊಂಡಿದೆ. ಈ ವರ್ಷವೂ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಮೊದಲ ದಿನ ನಿಗದಿ ಗ್ರಾಮದಲ್ಲಿ ವಾಸ್ತವ್ಯ ಹೂಡಲಾಗುವುದು. ಎರಡನೇ ದಿನ ಅಲ್ಲಿಂದ ಮತ್ತೇ ಪಾದಯಾತ್ರೆ ಮುಂದುವರೆಸಲಾಗುವುದು. ಎರಡನೇ ದಿನವೂ ದಾಂಡೇಲಿ ಸಮೀಪದ ಕರ್ಕ ನೀರಿನ ಟ್ಯಾಂಕ್ ಬಳಿ ವಾಸ್ತವ್ಯ ಹೂಡಿ ಮತ್ತೇ ಮಾರನೇ ದಿನ ಪಾದಯಾತ್ರೆ ಮುಂದುವರೆಸಲಾಗುವುದು. ಮೂರನೇ ದಿನ ಪಾಟೋಳಿಯಲ್ಲಿ ಗ್ರಾಮ ವ್ಯಾಸ್ತವ್ಯ ಮಾಡಲಾಗುವುದು. ನಾಲ್ಕನೇ ದಿನ ನೇರವಾಗಿ ಉಳವಿಯ ಚನ್ನಬಸವೇಶ್ವರ ದೇವಸ್ಥಾನ ತಲುಪಿ ಚನ್ನಬಸವೇಶ್ವರ ಸನ್ನಧಿಯಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಲಾಗುವುದು ಎಂದರು.
ವೀರೇಶ್ವರ ಸ್ವಾಮೀಜಿ, ಮಾಜಿ ಶಾಸಕ ಎ.ಬಿ. ದೇಸಾಯಿ, ಹಿರಿಯರಾದ ಅಶೋಕ ದೇಸಾಯಿ, ಬಿಜೆಪಿ ಮುಖಂಡರಾದ ತವನಪ್ಪ ಅಷ್ಟಗಿ, ನಿಜನಗೌಡ ಪಾಟೀಲ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ, ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಶಂಕರ ಶೆಳಕೆ, ಧಾರವಾಡ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಮಹೇಶ ಯಲಿಗಾರ, ಶಿವಾನಂದ ಉಳ್ಳವಣ್ಣನವರ, ವಿಜಯ ಮೇಘಣ್ಣವರ, ಆನಂದಗೌಡ ಪಾಟೀಲ, ದಯಾನಂದ ಗೌಡ ಪಾಟೀಲ, ಮಡಿವಾಳಪ್ಪ ಮಾಳಾಪೂರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.