ಬಸವ ನಿಷ್ಠ, ವೀರ ಮಡಿವಾಳ ಮಾಚಿದೇವರ ಭಕ್ತಿ ಮತ್ತು ಪರಾಕ್ರಮ ಮಾದರಿಯಾಗಿದೆ: ಅಪರ ಜಿಲ್ಲಾಧಿಕಾರಿ ಗೀತಾ ಸಿಡಿ

Basava Nistha, Veera Madiwala is an example of devotion and valor of Machideva: Additional District

ಬಸವ ನಿಷ್ಠ, ವೀರ ಮಡಿವಾಳ ಮಾಚಿದೇವರ ಭಕ್ತಿ ಮತ್ತು ಪರಾಕ್ರಮ ಮಾದರಿಯಾಗಿದೆ:  ಅಪರ ಜಿಲ್ಲಾಧಿಕಾರಿ ಗೀತಾ ಸಿಡಿ

.ಧಾರವಾಡ 01:  12 ನೇ ಶತಮಾನದಲ್ಲಿ ಶರಣ ಕ್ರಾಂತಿಯ ಪ್ರಮುಖರಾಗಿ ಗುರುತಿಸಿಕೊಂಡಿರುವ ಮಡಿವಾಳ ಮಾಚಿದೇವರು ಬಸವನಿಷ್ಠರು ಮತ್ತು ಅವರ ಭಕ್ತಿ, ಪರಾಕ್ರಮಗಳು ಇತರರಿಗೆ ಮಾದರಿಯಾಗಿದ್ದವು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಹೇಳಿದರು. 

ಅವರು ಇಂದು (ಫೆ.1) ಮಧ್ಯಾಹ್ನ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.12 ನೇ ಶತಮಾನದ ಶರಣರಲ್ಲಿ ಮಡಿವಾಳ ಮಾಚಿದೇವರು ಒಬ್ಬರು. ಮಡಿವಾಳ ಮಾಚಿದೇವರು ಹಿಮಾಲಯದಷ್ಟು ಅಚಲರಾದವರು. ದೃಢ ನಿರ್ಧಾರವನ್ನು ಹೊಂದಿದವರು ಎಂದರು.  

ಕನ್ನಡನಾಡಿಗೆ ಹೊಸ ಭರವಸೆ, ಸಾಮಾಜಿಕ ಬದಲಾವಣೆಗಳನ್ನು ಮೂಡಿಸಿದ್ದ ಶಿವಶರಣರ ವಚನಗಳನ್ನು ಮಕ್ಕಳು ಪಠಣೆ ಮಾಡಿ, ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಜೀವನ ಮಾರ್ಗ ತೊರಿಸುವ ವಚನಗಳು ಮುಂದಿನ ಪೀಳಿಗೆಯವರಿಗೆ ಹಸ್ತಾಂತರವಾಗಬೇಕು. ಈ ನಿಟ್ಟಿನಲ್ಲಿ ಕ್ರಿಯಾತ್ಮಕವಾದ ಕಾರ್ಯಗಳು ಆಗಬೇಕು ಎಂದು ಅವರು ಹೇಳಿದರು.  

ಜನರಲ್ಲಿ ನಮ್ಮ ರಾಜ್ಯದ ಮತ್ತು ರಾಷ್ಟ್ರದ ಸಾಮಾಜಿಕ, ಧಾರ್ಮಿಕ ವೈವಿಧ್ಯತೆಗಳನ್ನು, ಭಾವೈಕ್ಯತೆಯನ್ನು ಮತ್ತು ಸಹಿಷ್ಣುತೆಯನ್ನು ಮೂಡಿಸುವದಕ್ಕಾಗಿ ಅನೇಕ ಮಹಾತ್ಮರ, ಶರಣರ ಜಯಂತಿಗಳನ್ನು ಆಚರಿಸಲಾಗುತ್ತಿದೆ. ಶರಣರ ಸಂದೇಶಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಕೆಲಸವಾಗಬೇಕೆಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.  

ಬೆಳಗಾವಿ ನಗರದ ಎಂ.ಎಚ್‌.ಪಿ.ಎಸ್ ನಂ-12 ರ ಸಂಪನ್ಮೂಲ ವ್ಯಕ್ತಿ ಹಾಗೂ ಸಂಶೋಧಕ ಡಾ. ಬಾಳಪ್ಪ ಈರ​‍್ಪ ಚಿನಗುಡಿ ಅವರು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು  ನೀಡಿದರು.  

ಕಾರ್ಯಕ್ರಮದಲ್ಲಿ  ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯೆ ಅನಿತಾ ಸಂತೋಷ ಚಳಗೇರಿ, ಧಾರವಾಡ ಜಿಲ್ಲಾ ಮಡಿವಾಳರ ಸಂಘ ಗೌರವಾಧ್ಯಕ್ಷ ವಾಯ್‌. ಡಿ. ನವಲಗುಂದ, ಅಧ್ಯಕ್ಷ ಮಡಿವಾಳಪ್ಪ ಎಫ್‌. ಮಡಿವಾಳರ, ಉಪಾಧ್ಯಕ್ಷ ಯಲ್ಲಪ್ಪ ಬ. ಬೆಂಡಿಗೇರಿ ಸೇರಿದಂತೆ ಜಿಲ್ಲಾ ಸಂಘದ ವಿವಿಧ ಪದಾಧಿಕಾರಿಗಳು  ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆರತಿ ದೇವಶಿಖಾಮಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.  

ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.