ಲೋಕದರ್ಶನ ವರದಿ
ಬಾಗಲಕೋಟೆ: ಬಸವಣ್ಣನವರ ವಿದ್ಯಾಸ್ಥಳ ಹಾಗೂ ಐಕ್ಯ ಸ್ಥಳವಾಗಿರುವ ಬಾಗಲಕೋಟೆ ಜಿಲ್ಲೆ ವಿಶ್ವಕ್ಕೆ ಸಂದೇಶ ನೀಡಿದ ಜಿಲ್ಲೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹೇಳಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಗುರು ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಮಾನವ ಕಾಯಕ ರೂಢಿಸಿಕೊಳ್ಳಬೇಕೆಂಬುದು ಬಸವಣ್ಣನವರ ಆಶಯವಾಗಿತ್ತು. ಕಾಯಕವೇ ಕೈಲಾಸ ಎಂದು ಹೇಳಿದ ಮಾತು ಇಂದಿಗೂ ಕೂಡ ಪ್ರಚಲಿತವಾಗಿದೆ. ಬಸವಣ್ಣವರು ದುಡಿತದಿಂದ ಸನ್ಮಾರ್ಗ ಕಂಡುಕೊಳ್ಳಲು ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬರು ತಮ್ಮನ್ನು ತಾವು ಅರಿತು ನಡೆಯಬೇಕು, ನಡೆ-ನುಡಿಗಳು ಒಂದಾಗಿರಬೇಕು ಎಂಬುದು ಅವರ ತತ್ವವಾಗಿತ್ತು ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ ಮಾತನಾಡಿ ದೇಶ ವಿದೇಶಗಳ ಸಂವಿಧಾನ ಮತ್ತು ತತ್ವ ಸಿದ್ಧಾಂತಗಳನ್ನು ಅವಲೋಕಿಸಿದಾಗ ಆ ಎಲ್ಲ ತತ್ವಗಳಿಗೂ ಬಸವಣ್ಣನವರ ವಚನಗಳು ಸ್ಫೂರ್ತಿ ಯಾಗಿರುವುದು ಕಂಡು ಬರುತ್ತದೆ. ಆದರೆ 12 ನೇ ಶತಮಾನದ ಈ ಶರಣರು ರಚಿಸಿದ ವಚನಗಳು ಕನ್ನಡ ಭಾಷೆಯಲ್ಲಿದ್ದರಿಂದ ಬೇರೆ ದೇಶಕ್ಕೆ ಹೋಗದೇ ಮತ್ತು ಕನ್ನಡಕ್ಕೆ ಅಂದು ರಾಷ್ಟ್ರೀಯ ಭಾಷೆ ಸ್ಥಾನಮಾನ ದೊರೆಯದೇ ಇರುವುದರಿಂದ ಬೇರೆ ದೇಶದವರಿಗೆ ಈ ವಚನಗಳ ಬಗ್ಗೆ ತಿಳಿದಿರಲಿಲ್ಲ ಎಂದರು.
ಇಂದು ಇಂಗ್ಲೆಂಡಿನ ಥೆಮ್ಸ್ ನದಿ ದಡದಲ್ಲಿ ಕನ್ನಡಿಗ ನೀರಜ್ ಪಾಟೀಲರ ಇಚ್ಚಾಶಕ್ತಿಯಿಂದ ಅಲ್ಲಿ ಬಸವಣ್ಣನವರ ಮೂತರ್ಿ ಸ್ಥಾಪಿಸಲಾಗಿದೆ. ಇಂದು ವಿಶ್ವವೇ ಬಸವಣ್ಣನವರ ವಚನಗಳಿಗೆ ಮಾರು ಹೋಗಿದೆ. ಈ ಎಲ್ಲ ಕೀರ್ತಿಯೂ ಅವಳಿ ಜಿಲ್ಲೆಗಳಾದ ವಿಜಯಪುರ-ಬಾಗಲಕೋಟ ಜಿಲ್ಲೆಗಳಿಗೆ ಸಲ್ಲಬೇಕಾಗಿದೆ. ನಾವು ಇಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಡಾ.ಸುಮಂಗಲಾ ಮೇಟಿ ಮಾತನಾಡಿ 12ನೇ ಶತಮಾನದಲ್ಲಿ ಅವತರಿಸಿದ್ದ ಬಸವಣ್ಣನವರ ಜೀವನ ಕಾಲಾತೀತವಾದದ್ದು, ಹಲವು ಮೌಲ್ಯಗಳ ಒಟ್ಟು ರೂಪ ಬಸವಣ್ಣನವರು ಎಂದರು. ಅವರ ನಡೆ-ನುಡಿ, ಆಚಾರ-ವಿಚಾರ, ಲೌಕಿಕ ಪಾರಮಾರ್ಥ ಇವೆಲ್ಲವುಗಳು ವೈರುಧ್ಯಗಳೆನಿಸಿದವು. ಪ್ರತಿಯೊಬ್ಬರು ಆತ್ಮಸಾಕ್ಷಿ ಆಧಾರವಾಗಿಟ್ಟುಕೊಂಡು ಆತ್ಮಾವಲೋಕನ ಮಾಡಿಕೊಳ್ಳುತ್ತಾ ಪರಿಶುದ್ದವಾದ ಬದುಕನ್ನು ಅನಾವರಣ ಮಾಡಿದ ಕೀತರ್ಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ದುರ್ಗೇಶ ರುದ್ರಾಕ್ಷಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಸ್ವಾಗತಿಸಿದರು. ಕಂದಾಯ ಇಲಾಖೆಯ ಮಲ್ಲಿಕಾರ್ಜುನ್ ಗುಡೂರ ವಂದಿಸಿದರು. ಶಂಕರಲಿಂಗ ದೇಸಾಯಿ ನಿರೂಪಿಸಿದರು.
ಕಾರ್ಯಕ್ರಮದ ಪೂರ್ವದಲ್ಲಿ ಬಾಗಲಕೋಟೆ ಹಳೇ ನಗರದ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರರ ಮೂತರ್ಿಗೆ ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮಾಲಾರ್ಪಣೆ ಮಾಡಿ ಗೌರವ ಅಪರ್ಿಸಿದರು.