ಬಾಗಲಕೋಟೆ: ಮತ ಎಣಿಕೆ ಕಾರ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಿ: ಜಿಲ್ಲಾಧಿಕಾರಿ ರಾಮಚಂದ್ರನ್

ಲೋಕದರ್ಶನ ವರದಿ

ಬಾಗಲಕೋಟೆ 20: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬಾಗಲಕೋಟೆ ಲೋಕಸಭಾ ಚುನಾವಣೆಗೆ ಮೇ 23 ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿರುವ ನೂತನ ಸಭಾಭವನದಲ್ಲಿಂದು ಮತ ಎಣಿಕೆ ಮೇಲ್ವಿಚಾರಕರು, ಸಹಾಯಕರು ಹಾಗೂ ಮೈಕ್ರೋ ವೀಕ್ಷಕರಿಗೆ ಹಮ್ಮಿಕೊಂಡ ಮತ ಎಣಿಕೆ ವಿಧಾನ ಕುರಿತು ಕೊನೆಯ ಹಂತದ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬಾಗಲಕೋಟೆ ಲೋಕಸಭಾ ಮತಕ್ಷೇತ್ರಗಳಿಗೆ ಸಂಬಂಧಿಸಿದ 8 ವಿಧಾನಸಭಾ ಮತಕ್ಷೇತ್ರಗಳ ಎಣಿಕೆ ಕಾರ್ಯ ನಡೆಸಲಾಗುತ್ತಿದ್ದು, ಮತ ಎಣಿಕೆಗೆ ಸಂಬಂಧಿಸಿದ ಯಾವುದೇ ಕರ್ತವ್ಯವನ್ನು ನಿರ್ವಹಿಸುವ ಅಧಿಕಾರಿ ಹಾಗೂ ಸಿಬ್ಬಂದಿಗಳು ಮತದಾನದ ರಹಸ್ಯವನ್ನು ಕಾಪಾಡತಕ್ಕದ್ದು ಎಂದರು.

ಪ್ರತಿ ಮತಕ್ಷೇತ್ರಕ್ಕೆ 14 ಟೇಬಲ್ಗಳನ್ನು ಇರಿಸಲಾಗುತ್ತಿದ್ದು, ಪ್ರತಿ ಟೇಬಲ್ಗೆ ತಲಾ ಒಬ್ಬರಂತೆ ಮತ ಎಣಿಕಾ ಮೇಲ್ವಿಚಾರಕ, ಸಹಾಯಕ ಮತ್ತು ಮೈಕ್ರೋ ವೀಕ್ಷಕರು ಕಾರ್ಯನಿರ್ವಹಿಸಲಿದ್ದಾರೆ. ಬಾಗಲಕೋಟೆ ಲೋಕಸಭಾ ಮತಕ್ಷೇತ್ರಕ್ಕೆ ಒಟ್ಟು 8 ಮತಕ್ಷೇತ್ರಗಳಿದ್ದು, ಮತ ಎಣಿಕೆ ಕಾರ್ಯಕ್ಕೆ ಪ್ರತಿ ಮತಕ್ಷೇತ್ರಗಳಿಗೆ 16 ಜನ ಮೇಲ್ವಿಚಾಕರು, ಸಹಾಯಕರು ಹಾಗೂ ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದೆ. ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಪ್ರತಿಯೊಬ್ಬರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಮತ ಎಣಿಕೆ ಕಾರ್ಯದಲ್ಲಿ ತೊಡಗಿದ ಸಿಬ್ಬಂದಿಗಳಿಗೆ ಮುಂಜಾನೆಯ ಉಪಹಾರ, ಟೀ ಹಾಗೂ ಮದ್ಯಾಹ್ನದ ಊಟ ಸೇರಿದಂತೆ ಅಗತ್ಯ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಮತ ಎಣಿಕಾ ಕೇಂದ್ರದಲ್ಲಿ ಮೊಬೈಲ್ ಬಳಸುವದನ್ನು ನಿಷೇಧಿಸಲಾಗಿದ್ದು, ಮತ ಎಣಿಕಾ ಕೇಂದ್ರದೊಳಗೆ ಬರುವ ಪ್ರತಿಯೊಬ್ಬರು ಆಯಾ ಪ್ರವೇಶದ್ವಾರ ಹಾಗೂ ನಿಗದಿಪಡಿಸಿದ ಸ್ಥಳಗಳಲ್ಲಿ ಮೊಬೈಲ್ ಡಿಪಾಜಿಟ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಯಾವುದೇ ಉಹಾಪೋಹಗಳಿಗೆ ಅವಕಾಶವಿಲ್ಲದಂತೆ ಚುನಾವಣಾ ಆಯೋಗದ ನಿರ್ದೇಶನ ಮತ್ತು ಮಾರ್ಗದರ್ಶನದನ್ವಯ ಮತ ಎಣಿಕೆ ಕಾರ್ಯವನ್ನು ಯಶಸ್ವಿಯಾಗಿ ನಡೆಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಮಾಸ್ಟರ ಟ್ರೈನರ್ಸ್ ಗಂಗಾಧರ ದಿವಟರ್ ಅವರು ಮತ ಎಣಿಕೆಗೆ ಸಂಬಂಧಿಸಿದಂತೆ ಎಣಿಕೆ ಟೇಬಲ್, ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆ ವಿಧಾನ, ಮತ ಎಣಿಕೆ ಪ್ರಕ್ರಿಯೆಯಲ್ಲಿ ಮೂಡಿಬಂದ ಸಂದೇಶಗಳು, ವಿಶೇಷ ಪ್ರಕರಣ, ಮತದಾನ ಖಾತ್ರಿ ಯಂತ್ರದಲ್ಲಿ ಮತ ಎಣಿಕೆ ವಿಧಾನ, ಅಂಚೆ ಮತಪತ್ರಗಳ ಎಣಿಕೆ, ಮತದಾನದ ಗೌಪ್ಯತೆ ಕುರಿತು ಸವಿವರವಾಗಿ ತಿಳಿಸಿಕೊಟ್ಟರು.

ತರಬೇತಿ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಶೀಧರ ಕುರೇರ, ಉಪವಿಭಾಗಾಧಿಕಾರಿಗಳಾಧ ಎಚ್.ಜಯಾ ಮತ್ತು ಇಕ್ರಮ ಸೇರಿದಂತೆ ಆಯಾ ಮತಕ್ಷೇತ್ರಗಳ ಚುನಾವಣಾಧಿಕಾರಿಗಳು, ಮತ ಎಣಿಕಾ ಕಾರ್ಯಕ್ಕೆ ನೇಮಕಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.