ಬಾಗಲಕೋಟೆ: ಗ್ರಾಮೀಣ ವಿದ್ಯಾರ್ಥಿಗಳಿಗೆ ಐತಿಹಾಸಿಕ ಸ್ಥಳಗಳ ದರ್ಶನ: ಸಿಇಓ ಸಂಕಲ್ಪ

ಲೋಕದರ್ಶನ ವರದಿ

ಬಾಗಲಕೋಟೆ 13: ಗ್ರಾಮೀಣ ಭಾಗದ ಮಕ್ಕಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯದ ವಿವಿಧ ಐತಿಹಾಸಿಕ ಸ್ಥಳಗಳನ್ನು ನೋಡುವ ಭಾಗ್ಯವನ್ನು ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಸಂಕಲ್ಪ ಮಾಡಿದರು.

ತಾಲೂಕಿನ ಶೀಗಿಕೇರಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಈ ವಿಷಯ ತಿಳಿಸಿದ ಅವರು ವಿದ್ಯಾರ್ಥಿಗಳಲ್ಲಿ  ಕ್ರೀಡೆ, ಪಠ್ಯೇತರ ವಿಷಯಗಳನ್ನು ಒಳಗೊಂಡಂತೆ ಪ್ರವಾಸಗಳ ಅನುಭವಗಳನ್ನು ಪಡೆಯುವಂತಾಗಲು ಗತಕಾಲದ ವೈಭವವನ್ನು ಸಾರುವ ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ಶೀಗಿಕೇರಿ ಸರಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಒಂದು ದಿನದ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದರು. 

ಮಕ್ಕಳ ಬೇಡಿಕೆಗೆ ಅನುಗುಣವಾಗಿ ಅವರ ಆಶೆ ಆಕ್ಷಾಂಕ್ಷೆಗಳನ್ನು ತಿಳಿದುಕೊಂಡು ರಜಾ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಿಲ್ಲಾ ಬಾಲಭವನ ಯೋಜನೆಯಡಿ ಬೇಸಿಗೆ ಶಿಬಿರಗಳನ್ನು ಹಮ್ಮಿಕೊಂಡಿದ್ದು, ಈ ಶಿಬಿರದಲ್ಲಿ ಡ್ರಾಯಿಂಗ್, ಮೆಹಂದಿ ಯೋಗ, ಕರಾಟೆ, ವಿಜ್ಞಾನ, ಸಮೂಹ ನೃತ್ಯ, ಹೊರಾಂಗಣ ಮತ್ತು ಒಳಾಂಗಣ ಆಟಗಳ ಜೊತೆಗೆ ಒಂದು ದಿನದ ಪ್ರವಾಸವು ಸಹ ಹಮ್ಮಿಕೊಳ್ಳುವುದಾಗಿ ಮಾನಕರ ತಿಳಿಸಿದರು. ಇದರ ಜೊತೆಗೆ ಕ್ರೀಡಾ ಉತ್ತೇಜನಕ್ಕಾಗಿ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳಕ್ಕು ಕರೆದುಕೊಂಡು ಹೋಗುವುದಾಗಿ ತಿಳಿಸಿದರು. 

ಪ್ರತಿ ವರ್ಷ ಬೇಸಿಗೆ ಶಿಬಿರವನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಮಾತ್ರ ಹಮ್ಮಿಕೊಳ್ಳಲಾಗುತ್ತಿದ್ದು, ಆದರೆ ಈ ವರ್ಷ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಅಲ್ಲಿರುವ ಶಾಲೆಯ ಮಕ್ಕಳಿಗೆ ಬೇಸಿಗೆ ಶಿಬಿರ ಆಯೋಜಿಸಲಾಗಿತ್ತು. ಇದೇ ರೀತಿ ಆಯಾ ತಾಲೂಕಾ ಮಟ್ಟದಲ್ಲಿಯು ಸಹ ಒಂದು ಗ್ರಾಮ ಆಯ್ಕೆ ಮಾಡಿಕೊಂಡು ಆ ಗ್ರಾಮದ ಶಾಲಾ ಮಕ್ಕಳಿಗೆ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ತರಬೇತಿ ನೀಡುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಕರನ್ನೇ ಬಳಸಲಾಗುತ್ತಿತ್ತು, ಆದರೆ ಈ ಬಾರಿ ನಿರುದ್ಯೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೇಸಿಗೆ ಶಿಬಿರ ತರಬೇತಿಗೆ ನಿರುದ್ಯೋಗ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಳ್ಳಾಗಿದೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ ಜಯಮಾಲಾ ದೊಡಮನಿ ಮಾತನಾಡಿ ಜಿ.ಪಂ ಸಿಇಓ ಅವರ ಮಾರ್ಗದರ್ಶನದಂತೆ ಜಿಲ್ಲಾ ಬಾಲಭವನ ಯೋಜನೆಯಡಿ ಗ್ರಾಮೀಣ ಭಾಗದ ಮಕ್ಕಳಿಗೆ ಶಿಬಿರ ನಡೆಸಲಾಯಿತು. ಅದರಂತೆ ತಾಲೂಕಿನ ಶೀಗಿಕೇರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ  ಮೇ 19 ರಿಂದ ಮೇ 2 ವರೆಗೆ ಶಿಬಿರಗಳನ್ನು ಏರ್ಪಡಿಸಲಾಗಿತ್ತು. ಶಿಬಿರದಲ್ಲಿ 75 ಶಾಲಾ ಮಕ್ಕಳಿಗೆ ಡ್ರಾಯಿಂಗ್, ಮೆಹಂದಿ ಯೋಗ, ಕರಾಟೆ, ವಿಜ್ಞಾನ, ಸಮೂಹ ನೃತ್ಯ, ಹೊರಾಂಗಣ ಮತ್ತು ಒಳಾಂಗಣ ಆಟಗಳ ಬಗ್ಗೆ ತರಬೇತಿ ನೀಡಲಾಯಿತು. ಅಲ್ಲದೇ ಮುಂದೆಯೂ ಕೂಡಾ ಶಾಲಾ ಅವಧಿಯ ನಂತರ ಗ್ರಾಮೀಣ ಭಾಗದ ಕಲೆಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಮರ ಕ್ಯಾಂಪ್ಗಳನ್ನು ಸಹ ಏರ್ಪಡಿಸಲಾಗುತ್ತಿದೆ ಎಂದರು.

ಶಾಲಾ ಮುಖ್ಯೋಪಾದ್ಯಾಯೆ ಆರ್.ಜಿ.ಮುಲ್ಲಾ ನಮ್ಮ ಶಾಲೆಯ ಮಕ್ಕಳಿಗೆ ಬೇಸಿಗೆ ಶಿಬಿರ ಹಮ್ಮಿಕೊಂಡಿದ್ದು, ಸಂತೋಷ ತಂದಿದೆ. ಇದೇ ರೀತಿ ಬೇರೆ ಬೇರೆ ಶಾಲೆಯ ಮಕ್ಕಳಿಗೂ ಈ ಶಿಬಿರದ ಸದುಪಯೋಗವಾಗುವಂತಾಗಬೇಕೆಂದರು. ಕಾರ್ಯಕ್ರಮದಲ್ಲಿ ಶಿಬಿರದಲ್ಲಿ ತರಬೇತಿ ಪಡೆದುಕೊಂಡ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪರಿವೀಕ್ಷಣಾಧಿಕಾರಿ ಎಸ್.ಎನ್.ಕೋರವಾರ, ಅಕ್ಷರ ದಾಸೋಹ ಅಧಿಕಾರಿ ಎನ್.ಬಿ.ಗೊರವರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಶಾಲಾ ಮಕ್ಕಳ ಹಾಗೂ ಶಿಕ್ಷಕರ ಹಾಜರಾತಿ ಪರಿಶೀಲಿಸಿದರು. ಬಿಸಿ ಊಟದ ಕೋಣೆಗೆ ಭೇಟಿ ನೀಡಿ ಮಕ್ಕಳಿಗೆ ಉತ್ತಮ ಆಹಾರ ಪೂರೈಸಬೇಕು. ಸ್ವಚ್ಚತೆಗೆ ಹೆಚ್ಚು ಒತ್ತು ನೀಡುವಂತೆ ಅಡುಗೆ ಸಿಬ್ಬಂದಿಗಳಿಗೆ ಸೂಚಿಸಿದರು. ನಂತರ ಮಕ್ಕಳೊಂದಿಗೆ ಬಿಸಿ ಊಟ ಸವಿದರು.