ಬಿಬಿಎಲ್‌ ಗಿಂತ ಬಿಪಿಎಲ್‌ ಮೋಜಿನಿಂದ ಕೂಡಿದೆ: ರಸೆಲ್‌

ಲಂಡನ್‌,  11 ಆಸ್ಟ್ರೇಲಿಯಾದ ಬಿಗ್ ಬ್ಯಾಷ್‌ ಲೀಗ್‌(ಬಿಬಿಎಲ್‌) ಗಿಂತ ಬಾಂಗ್ಲದಲ್ಲಿ ನಡೆಯುವ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ ಚುಟುಕು ಟೂರ್ನಿ ಹೆಚ್ಚು ಮೋಜಿನಿಂದ ಕೂಡಿರುತ್ತದೆ ಎಂದು ವೆಸ್ಟ್‌ ಇಂಡೀಸ್ ಸ್ಟಾರ್‌ ಆಲ್ರೌಂಡರ್ ಆ್ಯಂಡ್ರೆ ರಸೆಲ್‌ ತಿಳಿಸಿದ್ದಾರೆ.ಬಿಪಿಎಲ್‌ ಹೆಚ್ಚು ಮೋಜಿನಿಂದ ಕೂಡಿರುತ್ತದೆ. ನಾವು ಇಲ್ಲಿ ಆಗಮಿಸಿದಾಗ ಅದ್ಧೂರಿಯಾಗಿ ಸ್ವಾಗತ ಮಾಡಲಾಗುತ್ತದೆ. ತವರು ಮಣ್ಣಿನಲ್ಲಿ ಇದ್ದಹಾಗೆ ಬಾಂಗ್ಲಾದೇಶದಲ್ಲಿ ಅನುಭವವಾಗುತ್ತದೆ. ಇಲ್ಲಿನ ಆಸ್ಪತ್ರೆ ಹಾಗೂ ಇನ್ನಿತರೆ ಸೌಲಭ್ಯಗಳು ಅತ್ಯುತ್ತಮವಾಗಿವೆ. ಹಾಗಾಗಿ, ಇದೆಲ್ಲವನ್ನು ತುಂಬಾ ಇಷ್ಟಪಡುತ್ತೇನೆ, ಎಂದು ಹೇಳಿದರು.

ರಸೆಲ್‌ ಬಿಪಿಎಲ್ ಟೂರ್ನಿಯಲ್ಲಿ ರಾಜಶಾಹಿ ರಾಯಲ್ಸ್ ತಂಡದ ಪರ ಆಡುತ್ತಿದ್ದಾರೆ. ಇವರ ಸದಸ್ಯತ್ವದ ವಿವಿಧ ಎರಡು ತಂಡಗಳು ಬಿಪಿಎಲ್‌ ಚಾಂಪಿಯನ್‌ ಆಗಿವೆ. 2015-16ನೇ ಆವೃತ್ತಿಯಲ್ಲಿ ಕೊಮಿಲ್ಲ ವಿಕ್ಟೋರಿಯನ್ಸ್ ಹಾಗೂ 2016-17ರ ಆವೃತ್ತಿಯಲ್ಲಿ ಢಾಕಾ ಡೈನಾಮೆಟ್ಸ್ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು.

ರಸೆಲ್‌ಗೆ ರಾಜಶಾಹಿ ರಾಯಲ್ಸ್ ತಂಡದ ನಾಯಕತ್ವದ ಹೊಣೆ ನೀಡಲಾಗಿದೆ. ಈ ಬಗ್ಗೆ ಅವರು ಪ್ರತಿಕ್ರಿಯಿಸಿ, "ತಂಡದ ನಾಯಕತ್ವದ ಜವಾಬ್ದಾರಿ ನೀಡಿರುವುದರಿಂದ ನನಗೆ ಹೆಮ್ಮೆ ಇದೆ. ಒಬ್ಬ ಸಾಮಾನ್ಯ ಆಟಗಾರನಾಗಿ ತಂಡದಲ್ಲಿ ಆಡುತ್ತೇನೆ. ತಂಡದಲ್ಲಿ ನನ್ನ ಮೇಲೆ ದೊಡ್ಡ ಜವಾಭ್ದಾರಿ ಇದೆ. ಅದನ್ನೂ ಸುಲಲಿತವಾಗಿ ನಿರ್ವಹಿಸುತ್ತೇನೆ. ಕೆರಿಬಿಯನ್ ಹೊರಗಡೆ ಎಲ್ಲವೂ ಹೊಸತಾಗಿ ಕಾಣುತ್ತಿದೆ. ಈ ಹಿಂದೆ ಜಮೈಕಾ ತಲ್ಲವಾಸ್‌ ತಂಡವನ್ನು ಮುನ್ನಡೆಸಿದ್ದೇನೆ. ತಂಡವನ್ನು ಮುನ್ನಡೆಸುವುದು ಯಾವಾಗಲೂ ಚಾಲೆಂಜಿಂಗ್‌ ಆಗಿರುತ್ತದೆ," ಎಂದು ರಸೆಲ್‌ ಪ್ರತಿಕ್ರಿಯಿಸಿದ್ದಾರೆ.ಬಾಂಗ್ಲಾದೇಶ ಪ್ರೀಮಿಯರ್‌ ಲೀಗ್‌ ಇಂದಿನಿಂದ ಆರಂಭವಾಗುತ್ತಿದೆ. ರಾಜಶಾಹಿ ರಾಯಲ್ಸ್ ತಂಡ ನಾಳೆ ಢಾಕಾ ಡೈನಾಮೆಟ್ಸ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.