ಬೆಂಗಳೂರು, ಡಿ 9-ರಾಜ್ಯದಲ್ಲಿ ಸ್ಥಿರ ಸರ್ಕಾರಕ್ಕಾಗಿ ಮತ್ತು ಕೇಂದ್ರದ ನರೇಂದ್ರಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಬಲಪಡಿಸಲು ಮಹತ್ವದ ತೀರ್ಪು ನೀಡಿದ ರಾಜ್ಯದ ಮತದಾರರಿಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅಭಿನಂದನೆ ಸಲ್ಲಿಸಿದ್ದಾರೆ.
ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರದ ಸಾಧನೆಗಳನ್ನು ಜನ ಬಲಿಸಿರುವುದು ಈ ಚುನಾವಣೆಯಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ. ಮಹತ್ವದ ಕಾಲಘಟ್ಟದಲ್ಲಿ ಮತದಾರರು ಬಿಜೆಪಿ ಸರ್ಕಾರವನ್ನು ಬಲಪಡಿಸಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಅಧಿಕಾರದಲ್ಲಿರುವುದರಿಂದ ರಾಜ್ಯದ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ನರೇಂದ್ರಮೋದಿ ನೇತೃತ್ವದ ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷಿ ಜನಕಲ್ಯಾಣ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠನಗೊಳಿಸಲು, ರಾಜ್ಯಕ್ಕೆ ಅಗತ್ಯ ಅನುದಾನ ತರಲು ಈ ಫಲಿತಾಂಶ ಸಹಕಾರಿಯಾಗಲಿದೆ. ಸಿಲಿಕಾನ್‌ಸಿಟಿ ಬೆಂಗಳೂರಿನಲ್ಲಿ ಮೂಲ ಸೌಕರ್ಯ ಹೆಚ್ಚಿಸಿ, ಭವಿಷ್ಯದ ನಗರವನ್ನಾಗಿ ರೂಪಿಸುವ ಆಶಯ ಈಡೇರಲು ಪೂರಕ ವಾತಾವರಣ ಸೃಷ್ಟಿಯಾಗಿದೆ ಎಂದಿದ್ದಾರೆ.
ಕಳೆದ ಮೂರು ತಿಂಗಳಲ್ಲಿ ರಾಜ್ಯದಲ್ಲಿನ ಬಿಜೆಪಿ ಸರ್ಕಾರ ತನ್ನ ಬದ್ಧತೆಗಳನ್ನು ಈಡೇರಿಸುವತ್ತ ಸಾಗಿದೆ. ಇದೀಗ ಉಪಚುನಾವಣೆ ಫಲಿತಾಂಶದಿಂದ ಮತ್ತೆ ಅಭಿವೃದ್ಧಿಗೆ ವೇಗ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತು ಯಡಿಯೂರಪ್ಪ ನೇತೃತ್ವದ ಸರ್ಕಾರ ರಾಜ್ಯದ ಅಭಿವೃದ್ಧಿಗೆ, ರಾಜ್ಯದ ಹಿತಕ್ಕೆ ಒಗ್ಗೂಡಿ ಕೆಲಸ ಮಾಡಲಿವೆ ಎಂದು ನಳೀನ್ ಕುಮಾರ್ ಕಟಿಲ್ ಹೇಳಿದ್ದಾರೆ.