ಪ್ರಶಸ್ತಿಗಳು ಸಾಮಾಜಿಕ ಜವಾಬ್ದಾರಿ ಹೆಚ್ಚಿಸುತ್ತವೆ: ಸುರಕೋಡ

ರಾಮದುರ್ಗ 19: ಎಲೆ ಮರೆಯ ಕಾಯಿಗಳಂತೆ ಸಾಕಷ್ಟು ಜನತೆ ಶ್ರದ್ಧೆ, ಪ್ರಾಮಾಣಿಕತೆ, ನಿಷ್ಠೆಯಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಅವರನ್ನು ಮಾದರಿಯಾಗಿಸಿಕೊಂಡು ಸಮಾಜ ಸೇವೆ ಮಾಡಬೇಕು. ಸೇವಾ ಮನೋಭಾವಕ್ಕೆ ಪ್ರಶಸ್ತಿಯ ಗರಿಮೆ ಬೇಕಿಲ್ಲ. ಪ್ರಶಸ್ತಿ ಪಡೆದವರಷ್ಟೇ ದೊಡ್ಡ ವ್ಯಕ್ತಿಗಳಲ್ಲ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಸನ್ ನಯೀಂ ಸುರಕೋಡ ಹೇಳಿದರು.

ಪಟ್ಟಣದ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಮಂಗಳವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ ಹಮ್ಮಿಕೊಂಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಏರ್ಪಡಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರಶಸ್ತಿಗಳು ಸಾಮಾಜಿಕ ಜವಾಬ್ದಾರಿ ಹೆಚ್ಚಿಸಿ ಸಮಾಜ ಸೇವೆಗೆ ಪ್ರೋತ್ಸಾಹಿಸುತ್ತವೆ ಎಂದು ಅಭಿಮತ ವ್ಯಕ್ತಪಡಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮತ್ತೋರ್ವ ಸಾಹಿತಿ ಸಿ.ಕೆ. ಜೋರಾಪೂರ ಪ್ರಸ್ತುತ ಸಂಕೀರ್ಣ ಸಾಮಾಜಿಕ ವ್ಯವಸ್ಥೆಯಲ್ಲಿ ಸಾಹಿತಿಗಳ ಪಾತ್ರ ಅಲ್ಲಗಳೆಯುವಂತಿಲ್ಲ. ಸಮಾಜದಲ್ಲಿ ನಡೆಯುವ ಶೋಷಣೆ, ಅನ್ಯಾಯದ ವಿರುದ್ಧ ತಮ್ಮ ಲೇಖನಿಯ ಮೂಲಕ ಸಾಮಾಜಿಕ ಜಾಗೃತಿಯನ್ನು ಉಂಟು ಮಾಡಲು ಮೌಲ್ಯಯುತ ಕೃತಿಗಳ ಅಗತ್ಯತೆ ಇದೆ ಎಂದರು.

ಬೆಳಗಾವಿ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಯ.ರು.ಪಾಟೀಲ ಮಾತನಾಡಿ, 41 ವರ್ಷಗಳಿಂದ ಬೆಳಗಾವಿಯಲ್ಲಿ ನಾಡಹಬ್ಬ ಉತ್ಸವ ಸಂಘಟಿಸಿದ  ಸಿ.ಕೆ.ಜೋರಾಪೂರ ರವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರಿತಿಸಿ ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಶ್ಲಾಘನೀಯ ಎಂದರು.

ಹಸನ್ ನಯೀಂ ಸುರಕೋಡ ಅವರ ಬದುಕು ಬರಹ ಕುರಿತು ಪ್ರೊ. ಪ್ರಕಾಶ ತೆಗ್ಗಿಹಳ್ಳಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ತಾಲೂಕಾಧ್ಯಕ್ಷ ಪಾಂಡುರಂಗ ಜಟಗನ್ನವರ, ಹಸನ್ ನಯೀಂ ಸುರಕೋಡ ಮತ್ತು ಸಿ.ಕೆ.ಜೋರಾಪೂರ ಅವರ ಸಾಹಿತ್ಯ ಕೃತಿಗಳನ್ನು ಎಲ್ಲರೂ ಓದುವ ಮೂಲಕ ಪರಿಶ್ರಮ ಸಾರ್ಥಕಗೋಳಿಸಬೇಕು. ಅಂದಾಗ ಅವರ ಸನ್ಮಾನದ ಸಾರ್ಥಕತೆ ಅರಿತಂತಾಗುತ್ತದೆ ಎಂದರು.

ನಿಕಟಪೂರ್ವ ಕಸಾಪ ಅಧ್ಯಕ್ಷ ಪ್ರೊ. ಎಸ್.ಎಂ.ಸಕ್ರಿ ಪ್ರಸ್ತಾವಿಕವಾಗಿ ಮಾತನಾಡಿದರು. ಕಸಾಪ ಮಾಜಿ ಅಧ್ಯಕ್ಷರುಗಳಾದ ಸುರೇಶ ಗುದಗನವರ, ಆರ್.ಎಂ.ಪಾಟೀಲ, ಪ್ರೊ.ವಿ.ಬಿ.ಸೋಮಣ್ಣವರ, ಪ್ರೊ. ಎಸ್.ಜಿ.ಚಿಕ್ಕನರಗುಂದ ಕೋಶಾಧ್ಯಕ್ಷ ಚನ್ನಪ್ಪ ಮಾದರ ಮಾಜಿ ಜಿ.ಪಂ.ಸದಸ್ಯೆ ರತ್ನಾ ಮಲ್ಲೇಶಿ ಯಾದವಾಡ, ಶಿವಾನಂದ ಶಿರೂರ, ಎಸ್.ಎಂ.ಕಲ್ಲೂರ, ಸೋಮಶೇಖರ ಸೊಗಲದ ಹಾಗೂ ಇತರರಿದ್ದರು.

ಕಾರ್ಯದಶರ್ಿ ಈರಣ್ಣ ಬುಡ್ಡಾಗೋಳ ಸ್ವಾಗತಿಸಿದರು. ಶಿಕ್ಷಕ ಸಂಘದ ತಾಲೂಕಾಧ್ಯಕ್ಷ ಎ.ವಿ.ಪಾಟೀಲ ನಿರೂಪಿಸಿದರು. ಶಿಕ್ಷಕ ಸುರೇಶ ಪಾಟೀಲ ವಂದಿಸಿದರು.