ಜೆ.ಇ.ಇ ಮೇನ್ ಸೆಶನ್-1 ರಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ
ಧಾರವಾಡ 19: ವಿದ್ಯಾರ್ಥಿ ಜೀವನ ಕ್ಷಣಗಳು ಅತಿ ಅಮೂಲ್ಯವಾದದ್ದು, ಕಲಿಯಬೇಕೆಂಬ ಹಂಬಲ ವಿದ್ಯಾರ್ಥಿಗಳಲ್ಲಿರಬೇಕು. ಅಂದಾಗ ಏನನ್ನಾದರೂ ಸಾಧಿಸಬೇಕೆಂಬ ಛಲ ಬೆಳೆಯುತ್ತದೆ. ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗೆ ಅವರು ಕಲಿಯುತ್ತಿರವ ಸಂಸ್ಥೆ, ಶಿಕ್ಷಕರು ಹಾಗೂ ಅವರಲ್ಲಿರುವ ಉತ್ತಮ ಹವ್ಯಾಸಗಳು ಮುಖ್ಯವಾಗುತ್ತವೆ. ನೈತಿಕ ನೆಲೆಗಟ್ಟಿನ ಮೇಲೆ ಮಕ್ಕಳಿಗೆ ಶಿಕ್ಷಣ ನೀಡಿದಾಗ ಮಾತ್ರ ಅವರಲ್ಲಿ ನಾವು ಶಿಸ್ತು, ಸಂಯಮ, ಸಮಯ ಪರಿಪಾಲನೆ ಹಾಗೂ ಜವಾಬ್ದಾರಿಗಳನ್ನು ಕಲಿಸಲು ಸಾಧ್ಯ ಎಂದು ಜನತಾ ಶಿಕ್ಷಣ ಸಮಿತಿಯಲ್ಲಿ ಆಯೋಜಿದ್ದ ಜೆ.ಇ.ಇ ಮೇನ್ ಸೆಶನ್-1 ರಲ್ಲಿ ಉತ್ತಮ ಅಂಕಗಳಿಸಿದ ಜೆ.ಎಸ್.ಎಸ್ ಆರ್.ಎಸ್. ಹುಕ್ಕರಿಕರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಜೆ.ಎಸ್.ಎಸ್ ನ ಕಾರ್ಯಾಧ್ಯಕ್ಷರು ಆದ ಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡುತ್ತಿದ್ದರು.
ಜೆ.ಎಸ್.ಎಸ್ ಯಾವಾಗಲೂ ಉತ್ಕೃಷ್ಟ ಶಿಕ್ಷಣ ನೀಡುತ್ತಾ ಬಂದಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲದೇ ನೈತಿಕ ತಳಹದಿಯ ಮೇಲೆ ಶಿಕ್ಷಣ ನೀಡುತ್ತಿರುವುದು ಈ ಸಂಸ್ಥೆಯ ಹೆಗ್ಗುರುತು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಅತಿ ಹೆಚ್ಚಿನ ಅಂಕಗಳನ್ನು ಗಳಿಸುತ್ತಿದ್ದಾರೆ. ಇದರಲ್ಲಿ ಪಾಲಕರ ಹಾಗೂ ಶಿಕ್ಷಕರ ಪರಿಶ್ರಮವೂ ಅಡಗಿದೆ. ವಿದ್ಯಾರ್ಥಿಗಳ ಜೀವನಲ್ಲಿ ಪದವಿ ಪೂರ್ವ ಶಿಕ್ಷಣ ಒಂದು ಮೈಲಿಗಲ್ಲು. ಈ ಶಿಕ್ಷಣ ಅವರ ಉನ್ನತ ಶಿಕ್ಷಣದ ಭವಿಷ್ಯವನ್ನು ನಿರ್ಮಿಸುತ್ತದೆ. ಈ ಕಾಲೇಜಿನ ವಿದ್ಯಾರ್ಥಿಗಳು ಉತ್ತರ ಕರ್ನಾಟಕದಲ್ಲಿಯೇ ಅತ್ಯುತ್ತಮ ಫಲಿತಾಂಶ ಪಡೆದಿರುವುದು ಇಲ್ಲಿನ ತರಬೇತಿ, ಶಿಕ್ಷಕರ ಪರಿಶ್ರಮ, ವಿದ್ಯಾರ್ಥಿಗಳ ನಿರಂತರ ಅಧ್ಯಯನಕ್ಕೆ ಸಿಕ್ಕ ಪ್ರತಿಫಲವಾಗಿದೆ ಎಂದು ಹೇಳಿದರು.
ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಜೆ.ಎಸ್.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಮಾತನಾಡಿ ಜೆ.ಎಸ್.ಎಸ್ ಆರ್.ಎಸ್ ಹುಕ್ಕರಿಕರ್ ಪದವಿ ಪೂರ್ವ ಕಾಲೇಜಿಗೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಪ್ರವೇಶ ಪಡೆಯತ್ತಾರೆ. ಪದವಿ ಪೂರ್ವ ಪರೀಕ್ಷೆಯಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆ.ಇ.ಇ, ಸಿ.ಇ.ಟಿ, ನೀಟ್ ಗಳಲ್ಲಿ ಅತ್ಯುತ್ತಮ ಸಾಧನೆಗೈಯುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣವನ್ನು ಇಲ್ಲಿ ನಿರ್ಮಿಸಲಾಗಿದೆ. ಅತ್ಯುನ್ನತ ಪ್ರಯೋಗಾಲಯಗಳು, ಗ್ರಂಥಾಲಯಗಳು ವಿದ್ಯಾರ್ಥಿಗಳ ಓದಿಗೆ ಪೂರಕವಾಗಿವೆ. ಇಂದು ಜೆ.ಇ.ಇ ಮೇನ್ ಸೆಶನ್-1ರಲ್ಲಿ ಸಾಧನೆಗೈದ ವಿದ್ಯಾರ್ಥಿಗಳು ಪೂಜ್ಯರಿಂದ ಸನ್ಮಾನಿತರಾಗಿರುವುದು ಅವರ ಸುದೈವ. ಖಾವಂದರ ಆಶೀರ್ವಾದದಿಂದ ಅವರ ಉನ್ನತ ಶಿಕ್ಷಣ ಉಜ್ವಲವಾಗುವದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.
ಕಾರ್ಯಕ್ರಮವನ್ನು ಮಹಾವೀರ ಉಪಾದ್ಯೆ ನಿರೂಪಿಸಿದರು, ಡಾ. ಸೂರಜ್ ಜೈನ ವಂದಿಸಿದರು. ಜೆ.ಎಸ್.ಎಸ್ ನ ಎಲ್ಲ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಸನ್ಮಾನಿತಗೊಂಡ ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.