ಬೇಸಿಗೆಯಲ್ಲಿ ಕುಡಿಯುವ ನೀರು ಮತ್ತು ಮೇವಿನ ಲಭ್ಯತೆ: ಕೊಪ್ಪಳ ತಾಲೂಕ ಮಟ್ಟದ ಸಭೆ
ಕೊಪ್ಪಳ 03: ಬೇಸಿಗೆ ಪ್ರಾರಂಭವಾಗಿರುವದರಿಂದ ಗ್ರಾಮೀಣ ಭಾಗ ಮತ್ತು ನಗರ ಪ್ರದೇಶಗಲ್ಲಿ ಕುಡಿಯುವ ನೀರು ಮತ್ತು ಮೇವಿನ ಲಭ್ಯತೆ ಕುರಿತು ಶನಿವಾರ ಕೊಪ್ಪಳ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ಕೊಪ್ಪಳ ತಹಶೀಲ್ದಾರರು ಮತ್ತು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಜಂಟಿ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು. ಕೊಪ್ಪಳ ತಹಶೀಲ್ದಾರ ವಿಠ್ಠಲ್ ಚೌಗಲಾ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಬೇಸಿಗೆ ಪ್ರಾರಂಭವಾಗಿರುವುದರಿಂದ, ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರು ಸಮಸ್ಯೆ ಉಂಟಾಗದಂತೆ ಮತ್ತು ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ಎಲ್ಲಾ ಅಧಿಕಾರಿಗಳು ಕ್ರಮವಹಿಸಬೇಕು. ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರುವ ಸಂಭವವಿದ್ದು, ಅದಕ್ಕಾಗಿ ಆಯಾ ಗ್ರಾಮಗಳಲ್ಲಿ ರೈತರ ಲಭ್ಯವಿರುವ ಖಾಸಗಿ ಬೋರ್‌ವೆಲ್ ಗುರುತಿಸಿ ಮಾಲಿಕರಿಂದ ಒಪ್ಪಿಗೆ ಪತ್ರವನ್ನು ಪಡೆಯುವಂತೆ ಹೇಳಿದರು. ಪ್ರಸ್ತುತ 4 ಗ್ರಾಮ ಗ್ರಾಮಗಳಾದ ಕಾತರಕಿ-ಗುಡ್ಲಾನೂರು, ಹಳೆಕುಮಟಾ, ಆರ್.ಎಸ್ ನಗರ, ಚಿಕ್ಕಬೊಮ್ಮನಾಳ ಗ್ರಾಮಗಳಲ್ಲಿ ರೈತರಿಂದ ಖಾಸಗಿ ಬಾಡಿಗೆ ಆಧಾರದ ಮೇಲೆ ಬೋರ್ ವೆಲ್ ಮೂಲಕ ಕುಡಿಯವ ನೀರು ಸರಬುರಾಜು ಮಾಡಲಾಗುತ್ತಿದ್ದು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಲ್ಲಿ ಲಭ್ಯವಿರುವ ಖಾಸಗಿ ಬೋರ್‌ವೆಲ್ ಗುರುತಿಸಿ ಸಂಬಂಧಿಸಿದ ಮಾಲಿಕರಿಂದ ಒಪ್ಪಿಗೆ ಪತ್ರದ ಮೂಲಕ ಕುಡಿಯುವ ನೀರು ಸರಬುರಾಜು ಮಾಡಲು ಕ್ರಮವಹಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಅವರು ಮತನಾಡಿ, ತಾಲೂಕಿನಲ್ಲಿ 155 ಗ್ರಾಮಗಳಿದ್ದು, ಅದರಲ್ಲಿ 14 ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಮತ್ತು 141 ಗ್ರಾಮಗಳಿಗೆ ಕುಡಿಯುವ ನೀರಿನ ಬೋರ್‌ವೆಲ್‌ಗಳ ಮೂಲಕ ಕುಡಿಯುವ ನೀರು ಸರಬುರಾಜು ಮಾಡಲಾಗುತ್ತಿದೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ನಿರಂತರವಾಗಿ ಕುಡಿಯುವ ನೀರಿನ ಸಭೆ ಜರುಗಿಸಿ ಸಭೆಯ ನಡಾವಳಿ ಪ್ರತಿಯನ್ನು ತಾಲೂಕ ಪಂಚಾಯತಿಗೆ ಸಲ್ಲಿಸಲು ಪಿಡಿಓಗಳಿಗೆ ಸೂಚನೆ ನೀಡಿದರು. ಗ್ರಾಮದಲ್ಲಿರುವ ಎಲ್ಲಾ ಓ.ಎಚ್.ಟಿ.ಗಳನ್ನು ಸ್ವಚ್ಛಗೊಳಿಸಬೇಕು. ಕುಡಿಯುವ ನೀರಿನ ಪೈಪಲೈನ್ ಲಿಕೆಜ್ ಆಗಿ ಕಲುಷಿತ ನೀರು ಸರಬುರಾಜು ಆಗದಂತೆ ಕ್ರಮವಹಿಸಬೇಕು. ಆರೋಗ್ಯ ಇಲಾಖೆಯಿಂದ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರಯೋಗಾಲಯದಿಂದ ಹಾಗೂ ಎಫ್.ಟಿ.ಕೆ ಕಿಟ್ ಮೂಲಕ ನೀರಿನ ಮಾದರಿಗಳನ್ನು ನಿರಂತರವಾಗಿ ಪರೀಕ್ಷೆಗೊಳಪಡಿಸಿ ಕುಡಿಯಲು ಯೋಗ್ಯವಿಲ್ಲ ಎಂಬುದು ಕಂಡು ಬಂದಲ್ಲಿ ಅಂತಹ ನೀರಿನ ಮೂಲಗಳ ಮಾಹಿತಿಯನ್ನು ತಾಲೂಕ ಪಂಚಾಯತಿಗೆ ಹಾಗೂ ಸಂಬಂಧಪಟ್ಟ ಗ್ರಾಮ ಪಂಚಾಯತಿಗೆ ನೀಡಲು ಕ್ರಮ ವಹಿಸಬೇಕು. ಗ್ರಾಮಗಳಲ್ಲಿರುವ ಜಾನುವಾರು ತೊಟ್ಟಿಗಳನ್ನು ಸ್ವಚ್ಚಗೊಳಿಸಿ ಸದಾಕಾಲ ನೀರು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಅಲ್ಲದೇ ಗ್ರಾಮ ಪಂಚಾಯತಿಯಲ್ಲಿ ಕುಡಿಯುವ ನೀರಿನ ಸಹಾಯವಾಣಿ ಸ್ಥಾಪಿಸಲು ಕ್ರಮವಹಿಸುವಂತೆ ಸೂಚನೆ ನೀಡಿದರು. ಪಶು ವೈದ್ಯಕೀಯ ಇಲಾಖೆಯ ಮೇವಿನ ಲಭ್ಯತೆ ಇರುವ ಕುರಿತು ಪಶು ವೈದ್ಯಕೀಯ ಮತ್ತು ಪಾಲನಾ ಸಹಾಯಕ ನಿರ್ದೇಶಕರು ಮಾತನಾಡಿ, ತಾಲೂಕಿನಲ್ಲಿ ಸಾಕಷ್ಟು ಮೇವಿನ ಲಭ್ಯತೆ ಇದ್ದು, ಸಭೆಗೆ ಮಾಹಿತಿ ನೀಡಿದರು. ಮುಂದಿನ ಸಭೆಗೆ ಬರುವಾಗ ಹೋಬಳಿವಾರು ಮೇವಿನ ಲಭ್ಯತೆ ಅಂಕಿ-ಸಂಖ್ಯೆಯೊಂದಿಗೆ ಮಾಹಿತಿ ತರುವಂತೆ ತಾ.ಪಂ ಇಓ ಸೂಚಿಸಿದರು. ನಗರಸಭೆಯ ಅಧಿಕಾರಿಗಳು ಮತ್ತು ಭಾಗ್ಯನಗರ ಪಟ್ಟಣ ಪಂಚಾಯತಿಯ ಅಧಿಕಾರಿಗಳು ಸಭೆಯಲ್ಲಿ ಮಾತನಾಡಿ ಪ್ರತಿ 3 ದಿನಗಳಿಗೊಮ್ಮೆ ನೀರು ಸರಬುರಾಜು ಮಾಡಲು ಯಾವುದೇ ಸಮಸ್ಯೆ ಇಲ್ಲವೆಂದು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ನಗರಸಭೆಯ ಅಧಿಕಾರಿಗಳು, ಭಾಗ್ಯನಗರ ಪಟ್ಟಣ ಪಂಚಾಯತಿಯ ಅಧಿಕಾರಿಗಳು, ತಾಲೂಕ ಮಟ್ಟದ ಅಧಿಕಾರಿಗಳು, ಉಪತಹಶೀಲ್ದಾರರು, ಕಂದಾಯ ನಿರಿಕ್ಷಕರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು , ತಾಲೂಕ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.