ಪ್ರೇಕ್ಷಕರ ಮನ ಗೆದ್ದ ಕುರ್ಚಿಗಳು ನಾಟಕ

ಧಾರವಾಡ 28: ತಂತ್ರ ಆರ್ಗನೈಜೇಷನ್ ಆಯೋಜಿಸಿದ್ದ ನಾಟಕ ' ಕುರ್ಚಿಗಳು' ನಾಟಕ ದಿ. 26ರಂದು ಸಂಜೆ 7:30ಕ್ಕೆ ನಗರದ ಸುವರ್ಣ ಸಮುಚ್ಚಯ ಭವನದಲ್ಲಿ ಪ್ರದರ್ಶಿ ಸಲಾಯಿತು. 

ಬೆಂಗಳೂರಿನ ಚಿತ್ರನಾಟ್ಯ ಫೌಂಡೇಶನ್ ಅಸಂಗತ ನಾಟಕ " ಕುರ್ಚಿಗಳು" ಪ್ರದರ್ಶನ ನೀಡಿತು. ಮೂಲ ಫ್ರೆಂಚ್ ನಾಟಕಕಾರ ಯುಜೀನ್ ಅಯೋನೆಸ್ಕೊ ಬರೆದಿರುವ ನಾಟಕ ಇದಾಗಿದ್ದು,  ರಶ್ಮಿ ರವಿಕುಮಾರ ಕನ್ನಡಕ್ಕೆ ಅನುವಾದಿಸಿ, ನಿರ್ದೇ ಶಿಸಿದ್ದರು.  ಕೇವಲ ಇಬ್ಬರು ಪಾತ್ರಧಾರಿಗಳ ಸುತ್ತ ನಡೆಯುವ ನಾಟಕ ಪ್ರೇಕ್ಷಕರ ಮನ ಗೆದ್ದಿತು.  ಕುರ್ಚಿಗಳು ನಾಟಕದ ಕೇಂದ್ರವಸ್ತು, ಒಬ್ಬ ಮುದುಕ ತಾನು ಜನರ ನೆನಪಿನಲ್ಲಿ ಸದಾಕಾಲ ಉಳಿಯಬೇಕು ಎಂದು ಮಾಡುವ ಹೋರಾಟವು ಬರುಬರುತ್ತಾ ವಿಧಿಯಿಲ್ಲದ ದೀನಸ್ಥಿತಿಯಾಗಿ ಬದಲಾಗಿ, ಅವನ ಅಸ್ತಿತ್ವವನ್ನೇ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತದೆ.ಆತನ ಹೋರಾಟದ ಅಂತ್ಯ ಮತ್ತು ಒಟ್ಟು ಕಥೆ ಪ್ರೇಕ್ಷಕರ ತರ್ಕಕ್ಕೆ ಹಾಗೂ ಅವರು ಕಂಡುಕೊಳ್ಳುವ ಅರ್ಥಕ್ಕೆ ಬಿಡುವುದೇ ಈ ಪ್ರಯೋಗದ ಮುಖ್ಯ ಉದ್ದೇಶವಾಗಿತ್ತು. ವರುಣ್, ಸೌಂದರ್ಯ ಹಾಗೂ ಶ್ರೀಪ್ರಿಯಾ ಅವರ ನಟನೆ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಯಿತು. 

ನಾಟಕದ ನಂತರ ನಡೆದ ಸಂವಾದದಲ್ಲಿ ನಾಟಕದ ವಿಷಯವಾಗಿದ್ದ ಒಬ್ಬ ಪ್ರಜೆ ಹಾಗೂ ವ್ಯವಸ್ಥೆಯ ಅಸ್ತಿತ್ವ ಹಾಗೂ ಪ್ರಸಕ್ತ ದೇಶದ ಕುರಿತು ಚರ್ಚೆ  ಮಾಡಲಾಯಿತು. ರಂಗಸಮಾಜದ ಸದಸ್ಯರಾದ ಸಿದ್ಧರಾಮ ಹಿಪ್ಪರಗಿ, ಧಾರವಾಡದ ಪ್ರಮುಖ ರಂಗಕರ್ಮಿ ಗಳಾದ ಅರವಿಂದ ಕುಲಕರ್ಣಿ , ಮಹಾದೇವ ಹಡಪದ, ವಿಜಯ ದೊಡಮನಿ, ಗೋಪಾಲ ಉಣಕಲ, ಯುವ ಸಿನೆಮಾ ನಿರ್ದೇ ಶಕ ವಿಶ್ವನಾಥ ಮರನೂರ್, ಈ ನಾಟಕವನ್ನು ಮೆಚ್ಚಿ, ಈ ರೀತಿಯ ನಾಟಕಗಳ ಪ್ರದರ್ಶನಗಳ ಅಗತ್ಯ ಧಾರವಾಡಕ್ಕಿದೆ ಎಂದರು. ತಂತ್ರ ಆರ್ಗನೈಜೇಷನ್ ಕಾರ್ಯದರ್ಶಿ  ಸಮುದ್ರ ಪಟ್ಟಣಶೆಟ್ಟಿ ವಂದನಾರ್ಪಣೆ ಮಾಡಿದರು. ತುಶಾರ ಜೋಶಿ, ವಿನಾಯಕ ಬನಚೋಡೆ, ಗೋಣಿಬಸು ಗೊಣದಬಾಳ, ಮಹಾಂತೇಶ, ಮೀನಾಕ್ಷಿ ವಗದಾಳೆ, ಪರಶುರಾಮ ಪಾತ್ರೋಟ, ಶಶಿಕುಮಾರ ರೆವಣಕಿ, ರಾಹುಲ್, ವಿನಾಯಕ ಕಮಾಟಿ ಮತ್ತಿತರರು ಹಾಜರಿದ್ದರು.