ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಹಾಗೂ 1971ನೇ ಯುದ್ಧ ವಾರ್ಷಿಕೋತ್ಸವ ಕಾರ್ಯಕ್ರಮ
ವಿಜಯಪುರ 16: ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ದೇಶದ ಎಲ್ಲ ಕಡೆ ಪ್ರತಿ ವರ್ಷ ಡಿಸೆಂಬರ್ 7ರಂದು ಆಚರಿಸಲಾಗುತ್ತಿದೆ. ಸಶಸ್ತ್ರ ಪಡೆಗಳ ಧ್ವಜ ಬಿಡುಗಡೆ ಮಾಡಲಾಗುತ್ತದೆ. ವೀರ ಯೋಧರ ಕುಟುಂಬಕ್ಕೆ ಬೆಂಬಲ ಒದಗಿಸಲು ಈ ದಿನಾಚರಣೆ ಆಚರಿಸಲಾಗುತ್ತಿದೆ. ಈ ನಿಧಿಯನ್ನು ಯುದ್ಧ ಸಂತ್ರಸ್ತರಿಗೆ, ಮಾಜಿ ಸೈನಿಕರು ಅವರ ಅವಲಂಬಿತರ ಸಲುವಾಗಿ ಹಮ್ಮಿಕೊಂಡ ವಿವಿಧ ಕಲ್ಯಾಣ ಮತ್ತು ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗುತ್ತಿದೆ. ಸಾರ್ವಜನಿಕರು ಧ್ವಜ ಖರೀದಿಸುವ ಮೂಲಕ ದೇಶದ ಸೈನಿಕರಿಗೆ ಬೆಂಬಲಿಸಬೇಕು ಎಂದು ಜಿಲ್ಲಾ ಸೈನಿಕ ಮಂಡಳಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಹೇಳಿದರು.
ಜಿಲ್ಲಾಡಳಿತ ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ನಗರದ ಜಿಲ್ಲಾ ಪಂಚಾಯತಿ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಸೋಮವಾರ 2024ನೇ ಸಾಲಿನ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಹಾಗೂ 1971ನೇ ಯುದ್ಧ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
ಜಿಲ್ಲೆಯು 2023ನೇ ಸಾಲಿನ ಸಶಸ್ತ್ರ ಪಡೆಗಳ ಧ್ವಜ ನಿಧಿಗೆ ನಿಗದಿಪಡಿಸಲಾದ ಗುರಿ ಸಾಧಿಸಿರುವುದರಿಂದ ಈ ನಿಧಿಯು ಮಾಜಿ ಸೈನಿಕರು ಮತ್ತು ಅವರ ಅವಲಂಬಿತರ ಕಲ್ಯಾಣ ಕಾರ್ಯಕ್ರಮಗಳಿಗೆ ಅಮೂಲ್ಯ ನೆರವು ನೀಡಲಿದ್ದು, ಜಿಲ್ಲೆಯ ಕೊಡುಗೆಯನ್ನು ಪ್ರಶಂಸಿಸುವ ಹಿನ್ನೆಲೆಯಲ್ಲಿ ಜಿಲ್ಲೆಯು ಪ್ರಶಸ್ತಿಗೆ ಭಾಜನವಾಗಿ, ಡಿ.7ರಂದು ಬೆಂಗಳೂರಿನ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಘನತೆವೆತ್ತ ರಾಜ್ಯಪಾಲರಿಂದ ಪ್ರಶಸ್ತಿ ಸ್ವೀಕರಿಸಲಾಯಿತು.
ಜಿಲ್ಲೆಯ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರ ಕುಟುಂಬಗಳಿಗೆ ಜಿಲ್ಲಾ ಮಟ್ಟದಲ್ಲಿ ಸೈನಿಕ ಕಲ್ಯಾಣ ಇಲಾಖೆಯು ಬಹಳಷ್ಟು ಕೆಲಸ ನಿರ್ವಹಿಸುತ್ತಿದೆ. ಮುಂಬರುವ ದಿನಗಳಲ್ಲಿ ಯೋಧರ ಹಾಗೂ ಅವರ ಕುಟುಂಬದ ದೃಷ್ಟಿಯಿಂದ ಇನ್ನೂ ರೂಪುರೇಷೆ ಸಿದ್ಧಪಡಿಸಿಕೊಂಡು ಕಾರ್ಯನಿರ್ವಹಿಸಬೇಕು. ಸೇವಾನಿರತರು ಹಾಗೂ ನಿವೃತ್ತ ಯೋಧರು ಹಾಗೂ ಅವರ ಅವಲಂಬಿತ ಕುಟುಂಬದವರ ಸಮಸ್ಯೆಗೆ ಸ್ಪಂದಿಸಬೇಕು.
ಮಾಜಿ ಸೈನಿಕರು ಮತ್ತು ಅವರ ಅವಲಂಬಿತರ ಸಲುವಾಗಿ ಹಮ್ಮಿಕೊಳ್ಳುವ ವಿವಿಧ ಕಲ್ಯಾಣ ಮತ್ತು ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಧ್ವಜವನ್ನು ಹೆಚ್ಚೆಚ್ಚು ಖರೀದಿಸುವ ಮೂಲಕ ಕೈ ಜೋಡಿಸಬೇಕು ಎಂದು ಅವರು ಹೇಳಿದರು. ಇಂತಹ ಕಾರ್ಯಕ್ರಮಗಳನ್ನು ಪ್ರತಿವರ್ಷ ಆಚರಿಸಲಾಗುವುದು.ಜಿಲ್ಲೆಯ ಮಾಜಿ ಸೈನಿಕರು ಜಿಲ್ಲಾ ಮಟ್ಟದಲ್ಲಿ ನಡೆಯುವ ಗಣರಾಜ್ಯೋತ್ಸವ ಪಥಸಂಚಲನಲದಲ್ಲಿ ಪಾಲ್ಗೊಂಡು ಪ್ರೇರಣೆ ನೀಡಬೇಕು ಎಂದು ಹೇಳಿದರು. 1971ರ ಯುದ್ದದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರ ಸ್ಮರಿಸುವ ಮೂಲಕ ಅವರಿಗೆ ಗೌರವ ನಮನಗಳು ಸಲ್ಲಿಸುವುದಕ್ಕಾಗಿ ಪ್ರತಿ ವರ್ಷವೂ ಯುದ್ಧ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಈ ಸಂದರ್ಭದಲ್ಲಿ ಸಶಸ್ತ್ರ ಪಡೆಗಳ ಸಾಂಕೇತಿಕ ಧ್ವಜ ಬಿಡುಗಡೆಗೊಳಿಸಿ, ನಂತರ ಸಾಂಕೇತಿಕವಾಗಿ ಧ್ವಜ ಸ್ವೀಕರಿಸಿ, ದೇಣಿಗೆ ನೀಡುವುದರ ಮೂಲಕ ಸಾರ್ವಜನಿಕರಿಗೆ ಧ್ವಜಗಳನ್ನು ಮಾರಾಟ ಮಾಡಿ ದೇಣಿಗೆ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ಇಸಿಎಚ್‌ಎಸ್ ಪಾಲಿಕ್ಲಿನಿಕ್ ಉಸ್ತುವಾರಿ ಅಧಿಕಾರಿ, ಕರ್ನಲ್ ಫಿರೋಜ್ ಬಿ ಕರ್ಲೆಕರ್ ಅವರು ಮಾತನಾಡಿ, ಹದಿಮೂರು ದಿನಗಳ ಕಾಲ ನಡೆದ 1971ರ ಯುದ್ಧವು ಭಾರತೀಯ ಸೇನಾಪಡೆಯ ಮೈಲುಗಲ್ಲಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ 1971ರ ಯುದ್ಧದಲ್ಲಿ ಹುತಾತ್ಮ ಯೋಧರ ಸ್ಮರಣಾರ್ಥವಾಗಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು. ಧ್ವಜ ನಿಧಿ ಸಂಗ್ರಹಣೆಗೆ ಸಹಕಾರ ನೀಡಿದ ವಿವಿಧ ಇಲಾಖೆ ಹಾಗೂ ಜಿಲ್ಲೆಯ ಮಾಜಿ ಸೈನಿಕರ ಸಂಘಕ್ಕೆ ಪ್ರಶಂಸೆ ಪತ್ರ ವಿತರಿಸಲಾಯಿತು. ಕಾಯಕ್ರಮದಲ್ಲಿ ಎನ್‌ಸಿಸಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಗೊಂಡವು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಸೈನಿಕ ಶಾಲೆಯ ಪ್ರಾಂಶುಪಾಲರು ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಬಿಷ್ಟ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶಂಕರ ಮಾರಿಹಾಳ, 36 ಕರ್ನಾಟಕ ಎನ್‌ಸಿಸಿಯ 36ನೇ ಬಟಾಲಿಯನ್ ಅಧಿಕಾರಿ ಕರ್ನಲ್ ಗೀರೀಶ ಶಿಂದೆ, ಸೈನಿಕ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಸ್ಕಾ-್ವಡ್ರನ್ ಲೀಡರ್ ಶ್ರೀಮತಿ ಜಿ.ಆರ್.ವಿನೂತ, ಅಬಕಾರಿ ಇಲಾಖೆಯ ಉಪ ಆಯುಕ್ತ ವೀರಣ್ಣ ಬಾಗೇವಾಡಿ, ಕೆಕೆಆರ್‌ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, 1971ರ ಯುದ್ಧದಲ್ಲಿ ಭಾಗವಹಿಸಿದ ಯೋಧರಾದ ಮುಲ್ಲಾ, ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ರಾಮಪ್ಪ ಹಾಗೂ ಪದಾಧಿಕಾರಿಗಳು ಶ್ರೀಮತಿ ಶಿವಗಂಗಾಬಾಯಿ ಸೇರಿದಂತೆ ಮಾಜಿ ಸೈನಿಕರು ಹಾಗೂ ಅವರ ಕುಟುಂಬದವರು ಉಪಸ್ಥಿತರಿದ್ದರು.