ಸ್ಥಳೀಯ ಅಭಿವೃದ್ಧಿಯತ್ತ ಮತ್ತೊಂದು ಮಹತ್ವದ ಹೆಜ್ಜೆ: ಗಣೇಶ ಹುಕ್ಕೇರಿ
ಚಿಕ್ಕೋಡಿ 27: ತಾಲೂಕಿನ ಚಿಂಚಣಿಕ್ರಾಸ್‌ದಿಂದ ಗಿರಗಾಂವ, ಶಿರಗಾಂವ ಮಾರ್ಗವಾಗಿ ಶಿರಗಾಂವವಾಡಿ ಗ್ರಾಮದವರೆಗೆ ನಿರ್ಮಾಣವಾಗಲಿರುವ 14 ಕೋಟಿ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕರಾದ ಗಣೇಶ ಹುಕ್ಕೇರಿ ಅವರು ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಶಾಸಕರು ಮಾತನಾಡಿ ಸ್ಥಳೀಯ ಅಭಿವೃದ್ಧಿಯತ್ತ ಮತ್ತೊಂದು ಮಹತ್ವದ ಹೆಜ್ಜೆ ಇದಾಗಿದ್ದು, ಈ ರಸ್ತೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವಿನ ಪ್ರಮುಖ ಸಂಪರ್ಕವನ್ನು ಬಲಪಡಿಸಲು ಸಹಕಾರಿಯಾಗಲಿದೆ. ಸ್ಥಳೀಯ ಜನಜೀವನ ಸುಧಾರಣೆ ಮತ್ತು ಪ್ರಾದೇಶಿಕ ಸಂಪರ್ಕ ಸುಧಾರಣೆ ಈ ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ ಹಾಗೂ ಸುಸಜ್ಜಿತ ರಸ್ತೆ ನಿರ್ಮಾಣ ಮಾಡುವುದರಿಂದ ಸ್ಥಳೀಯ ನಿವಾಸಿಗಳಿಗೆ ಉತ್ತಮ ಸಂಪರ್ಕವನ್ನು ಒದಗಿಸುವುದು ಮಾತ್ರವಲ್ಲದೆ, ಆರ್ಥಿಕ ಚಟುವಟಿಕೆಗಳ ಪ್ರಗತಿಗೆ ಹಾಗೂ ವ್ಯಾಪಾರ-ವ್ಯವಹಾರಗಳಿಗೆ ಮತ್ತಷ್ಟು ಅವಕಾಶಗಳನ್ನು ಸೃಷ್ಟಿ ಮಾಡುವುದಕ್ಕೆ ಪೂರಕವಾಗಲಿದೆ ಎಂದು ಹೇಳಿದರು.
ಶಾಸಕರಾದ ಗಣೇಶ್ ಹುಕ್ಕೇರಿ ಅವರು ಭೂಮಿ ಪೂಜೆ ಸಂದರ್ಭದಲ್ಲಿ ಗುತ್ತಿಗೆದಾರರಿಗೆ ಗುಣಮಟ್ಟದ ಕಾಮಗಾರಿ ಮಾಡುವಂತೆ ಖಡಕ್ ಸೂಚನೆ ನೀಡಿದರು. ಅವರು ಈ ಸಂದರ್ಭದಲ್ಲಿ ಮಾತನಾಡಿ, "ಸಾರ್ವಜನಿಕ ಹಣವನ್ನು ವ್ಯರ್ಥಗೊಳಿಸದೆ, ಕೆಲಸವು ನಿಖರತೆ ಮತ್ತು ಗುಣಮಟ್ಟದಿಂದ ಕೂಡಿರಬೇಕು. ಈ ರಸ್ತೆ ಪ್ರಾಜೆಕ್ಟ್ ಗ್ರಾಮೀಣ ಪ್ರದೇಶದ ನಿತ್ಯ ಸಂಚಾರದ ಸ್ಥಿತಿಗತಿಗಳನ್ನು ಬದಲಾಯಿಸಲು ಪ್ರಮುಖ ಪಾತ್ರ ವಹಿಸಲಿದೆ. ಆದ್ದರಿಂದ ಯಾವುದೇ ರೀತಿಯ ಅವ್ಯವಸ್ಥೆ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು," ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಣ ಡಂಗೇರ, ಬಾಳಗೌಡ ಪಾಟೀಲ, ಬಾಬಾಸಾಬ ಪಾಟೀಲ, ಭೀಮಾ ಖಂಚನಾಳೆ, ಅಕ್ಷಯ ಪಾಟೀಲ, ಬಸು ಕಾಳಪ್ಪಗೋಳ, ಸಾತಪ್ಪ ಕಾಮನೆ, ಸಂತೋಷ ನೇರ್ಲಿ, ಅಭಯ ಪಾಟೀಲ, ವಿವೇಕ ಪಾಟೀಲ ಹಾಗೂ ಮುಂತಾದವರು ಉಪಸ್ಥಿತರಿದ್ದರು.