ನಡೆನುಡಿಗಳಲ್ಲಿ ಒಂದಾಗಿ ಬದುಕುತ್ತಿರುವ ಆದರ್ಶ ಶಿಕ್ಷಕ ಪ್ರಾ. ಸುಧಾಕರ ಬೇಲಿ ಗುರುಗಳು
ಧಾರವಾಡ 18: ವಿದ್ಯಾರ್ಥಿಗಳ ಸೇವೆಯೇ ಭಗವಂತನ ಸೇವೆ ಎಂಬ ತತ್ವವನ್ನು ಪರಿಪಾಲಿಸಿದವರು ಸುಧಾಕರ ಬೇಲಿ ಅವರು ಬಾಸೆಲ್ ಮಿಶನ್ ಉಚ್ಛ ಶಿಕ್ಷಣ ಹಾಗೂ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳ ಧರ್ಮದರ್ಶಿಗಳು ಹಾಗೂ ಬಾಸೆಲ್ ಮಿಶನ್ ಶಿಕ್ಷಕ ಮತ್ತು ಶಿಕ್ಷಕಿಯರ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾಗಿ, ವಿಶ್ರಾಂತ ಜೀವನದ ಅಮೂಲ್ಯ ಸಮಯವನ್ನು ಸಮಾಜ ಸೇವೆಗೆ ಅರ್ಿಸಿಕೊಂಡ ಹಿರಿಯ ಜೀವಿಗಳು.
ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಪ್ರತಿಷ್ಠಿತ ದಿನಕರ ಹಾಗೂ ಹನ್ನಾ (ಸಾವಿತ್ರಿ) ದಂಪತಿಗಳ ಸಂಸ್ಕಾರಯುತ ಕುಟುಂಬದಲ್ಲಿ 25 ನೇ ಡಿಸೆಂಬರ್ 1942 ರಂದು ಸುಧಾಕರ ಬೇಲಿಯವರು ಜನಿಸಿದರು.
ಬಾಲ್ಯದಲ್ಲಿಯೇ ಪ್ರತಿಭಾಸಂಪನ್ನರಾಗಿದ್ದ ಇವರು, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಗದಗ ಹಾಗೂ ಹುಬ್ಬಳ್ಳಿಯಲ್ಲಿ, ನಂತರ ಧಾರವಾಡದ ಬಾಸೆಲ್ ಮಿಶನ್ ಹೈಸ್ಕೂಲ್‌ನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಪೂರೈಸಿಕೊಂಡರು. ಬಾಸೆಲ್ ಮಿಶನ್ ಹೈಸ್ಕೂಲ್‌ನಲ್ಲಿ ಈ ನಾಡಿನ ಜ್ಞಾನದ ಭಂಡಾರದಂತಿದ್ದ ವರದರಾಜ ಹುಯಿಲ್‌ಗೋಳ, ನೇಗಳೂರ, ಡಾ. ಪುರೋಹಿತ, ಬಂಗೇರಾ, ಏಝರಾ, ಹಲಕಿ, ನಾಡಕರ್ಣಿ, ಕುಲಕರ್ಣಿ ಗುರುಗಳ ಪ್ರಭಾವಲಯಕ್ಕೆ ಒಳಗಾಗಿದ್ದ ಇವರು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ವಿಜ್ಞಾನ ವಿಷಯದಲ್ಲಿ ಆಸಕ್ತಿಹೊಂದಿದ್ದ ಇವರು ತೊಂಟದಾರ್ಯ ಕೆ. ಎಲ್.ಇ. ಕಾಲೇಜಿನಲ್ಲಿ ಅಧ್ಯಯನ ಗೈದು ನಂತರ ನಾಡಿನ ಪ್ರತಿಷ್ಠತ ಕರ್ನಾಟಕ ಕಾಲೇಜಿನಲ್ಲಿ ಬಿ.ಎಸ್.ಸಿ. ಪದವಿಯನ್ನು ಪೂರೈಸಿದರು. ಶಿಕ್ಷಕನಾಗಬೇಕೆಂಬ ಹೆಬ್ಬಯಕೆಯಿಂದ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಇಡ್. ಕಾಲೇಜಿನಲ್ಲಿ ಅಧ್ಯಯನ ಗೈದು, ಪ್ರಥಮ ಸ್ಥಾನ ಹಾಗೂ ಬಂಗಾರದ ಪದಕದೊಂದಿಗೆ ಉತ್ತೀರ್ಣರಾಗಿ, ಭವಿಷ್ಯದ ವಿದ್ಯಾರ್ಥಿಗಳ ಬದುಕಿನ ಬಂಗಾರದ ದಿನಗಳಿಗೆ ಸಾಕ್ಷಿಯಾದರು.
1964 ರಲ್ಲಿ ಬಾಸೆಲ್ ಮಿಶನ್ ಹೈಸ್ಕೂಲ್‌ನಲ್ಲಿ ತಾವು ಕಲಿತ, ಕಲಿಸಿದ ಗುರುಗಳೊಂದಿಗೆ ವಿಜ್ಞಾನ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿದರು. ಪ್ರೀತಿ ತುಂಬಿದ ವಿಶ್ವಾಸದ ನುಡಿಗಳು, ಕ್ರಿಯಾಶೀಲತೆ, ಹೊಸಚಿಂತನೆ, ಅಧ್ಯಯನ, ಪರಿಣಾಮಕಾರಿ ಬೋಧನೆಯಿಂದ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳಾದರು. 1987 ರಲ್ಲಿ ಇವರ ಕಾರ್ಯ ವೈಖರಿಯ ಶಿಸ್ತನ್ನು ಮನಗೊಂಡು ಆಡಳಿತ ಮಂಡಳಿಯು ಗದಗದ ಅಗ್ರೀಕಲ್ಚರ್ ಹೈಸ್ಕೂಲ್‌ಗೆ ಮುಖ್ಯೋಪಾಧ್ಯಾಪಕರನ್ನಾಗಿ ಬಡ್ತಿಗೊಳಿಸಿತು. ಆತ್ಮಸ್ಥೈರ್ಯವು ಬೆಟ್ಟವನ್ನು ಕಿರಿದಾಗಿಸುತ್ತದೆ ಎಂಬಂತೆ ಶೋಚನೀಯ ಶೀಥಲಾವಸ್ಥೆಯಲ್ಲಿದ್ದ ಹೈಸ್ಕೂಲ್‌ನ್ನು ದಾಣಿಗಳ ಹಾಗೂ ಸಂಸ್ಥೆಯ ಸಹಕಾರದೊಂದಿಗೆ ತಮ್ಮ ಅಧಮ್ಯ ಶಕ್ತಿಯಿಂದ ಮರುಜೀವಗೊಳಿಸಿ, ಅಪಾರ ಮಕ್ಕಳ ಜ್ಞಾನಾರ್ಜನೆಗೆ ಬೆಳಕಾದರು. ಇಂದು ಈ ಸಂಸ್ಥೆ ಗದಗದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದು ನಿಂತಿರುವುದು ಎಸ್. ಡಿ. ಬೇಲಿಯವರ ಶ್ರಮದ ಫಲವಾಗಿದೆ.
1990 ರಂದು ಬಾಸೆಲ್ ಮಿಶನ್ ಶಿಕ್ಷಕ ಮತ್ತು ಶಿಕ್ಷಕಿಯರ ತರಬೇತಿ ಸಂಸ್ಥೆಗೆ ಪ್ರಾಚಾರ್ಯರಾಗಿ ಸಂಸ್ಥೆಯ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಪ್ರಾರಂಭಗೊಂಡ ಈ ಬಾಸೆಲ್ ಮಿಶನ್ ಶಿಕ್ಷಕರ ತರಬೇತಿ ಸಂಸ್ಥೆಗೆ ಸುದೀರ್ಘವಾದ ಇತಿಹಾಸವಿದೆ. ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಪ್ರಸಾರಕ್ಕೆ ಅಗತ್ಯವಿರುವ ಶಿಕ್ಷಕರನ್ನು ಬೋಧನೆಗೆ ಸಿದ್ಧಗೊಳಿಸಿ, ನಾಡಿನಾದ್ಯಂತ ಜ್ಞಾನವರ್ಧನೆಗೆ ಸಮರ್ಿಸಿದ ಹೆಮ್ಮೆಯ ಶಿಕ್ಷಕರ ತರಬೇತಿ ಸಂಸ್ಥೆ ಇದಾಗಿದೆ. ಸಂಸ್ಥೆಯ ಸಂಸ್ಥಾಪಕ ಚೇರಮನ್ನರಾಗಿದ್ದ ಶ್ರೀ ಆರ್.ಎಸ್. ಬಂಗೇರಾ ಹಾಗೂ ಪ್ರಥಮ ಪ್ರಾಚಾರ್ಯರಾಗಿದ್ದ ಶ್ರೀ ಎಸ್.ಸಿ. ಗೋಕಾವಿಯವರ ದೂರದೃಷ್ಠಿತ್ವದ ಸಮಾಜಮುಖಿ ಸೇವೆಯ, ತ್ಯಾಗದ, ಪರಿಶ್ರಮದಿಂದ ರೂಪಗೊಂಡು ಪ್ರಸಿದ್ಧಿಹೊಂದಿದ್ದ ಈ ಸಂಸ್ಥೆಯನ್ನು, ಶ್ರೀಯುತ ಬೇಲಿಯವರು ಹೆಸರೇ ಸೂಚಿಸುವಂತೆ ಫಲವಾದ ತೋಟಕ್ಕೆ ಬೇಲಿಯಿರುವಂತೆ, ಪ್ರಶಿಕ್ಷರ್ಣಾರ್ಥಿಗಳಲ್ಲಿ ಸುಸಂಸ್ಕೃತ ಮಾನವೀಯ ಮೌಲ್ಯಗಳುನ್ನು ತುಂಬಿ, ಬದುಕು ಭವ್ಯವಾಗಲು ಹಾಗೂ ಸಂಸ್ಥೆಗೆ ಬೆಂಗಾವಲಿನ ನಿಜವಾದ ಬೇಲಿಯಾದವರು.
ಪ್ರಾರ್ಚಾರಾಗಿದ್ದ ಶ್ರೀಯುತ ಬೇಲಿಯವರರು ಆಡಳಿತಕ್ಕೆ ಮಾತ್ರ ಸೀಮಿತಗೊಳ್ಳದೇ ತರಗತಿಯಲ್ಲಿ ಪರಿಣಾಮ ಕಾರಿಯಾಗಿ ಬೋಧಿಸುತ್ತಿದ್ದರು. ಒಬ್ಬ ಶಿಕ್ಷಕ ತರಗತಿಯಲ್ಲಿ ಹೇಗೆ ಕಲಿಸುತ್ತಾನೆ ಹಾಗೂ ಹೊರಗೆ ಹೇಗೆ ಬದುಕುತ್ತಾನೆ ಎಂಬುದು ವಿದ್ಯಾರ್ಥಿಗಳ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತದೆ. ಶ್ರೀಯುತ ಬೇಲಿಯವರು ನಡೆನುಡಿಗಳಲ್ಲಿ ಒಂದಾಗಿ ಬದುಕುತ್ತಿರುವ ಆದರ್ಶ ಗುರುಗಳು. ಬಡತನ ಕಲಿಸುವ ಪಾಠ ಅನುಭವ ಜನ್ಯವಾದುದ್ದು. ತಮ್ಮ ವಿದ್ಯಾರ್ಥಿ ಜೀವನದಲ್ಲಿ ಎದುರಿಸಿದ ಕಷ್ಟದ ದಿನಗಳ ಅರಿವಿದ್ದ ಶ್ರೀಯುತರಿಗೆ, ವಿದ್ಯಾರ್ಥಿಗಳ ಭಾವನೆಗಳನ್ನು ಸೂಕ್ಷ್ಮವಾಗಿ ಅರಿತು ಸಮಸ್ಯೆಗಳಿಗೆ ತಕ್ಷಣವೆ ಸ್ಪಂದಿಸಿ, ನಗುವಿನ ಹೊನಲು ಹರಿಸಿ, ಪ್ರಶಿಕ್ಷಣಾರ್ಥಿಗಳ ಪಾಲಿನ ನಿಜವಾದ ದೇವರಾಗಿದ್ದರು.
ಮುಖ್ಯವಾಗಿ ಜಿಲ್ಲಾ ಮಟ್ಟದ ಪ್ರಶಿಕ್ಷಣಾರ್ಥಿಗಳ ಪ್ರಥಮ ಕ್ರೀಡಾಕೂಟವನ್ನು ಎರಡು ದಿನಕಾಲ ಹಮ್ಮಿಕೊಂಡು ಅಭೂತ ಪೂರ್ವ ವ್ಯವಸ್ಥೆಯೊಂದಿಗೆ ಯಶಸ್ವಿಗೊಳಿಸಿದರು. ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಸಂಘಟಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಗುಣಾತ್ಮಕ ಕಲಿಕೆಗೆ ಅವಕಾಶ ಒದಗಿಸಿದರು. ಅಥಣಿಯ ದೇವದಾಸಿ ವಿಮೋಚನಾ ಸಂಸ್ಥೆಯ ಸಹಕಾರದೊಂದಿಗೆ ವಿದ್ಯಾರ್ಥಿಗಳ ಭವಿಷ್ಯತ್ತಿನ ಕನಸುಗಳಿಗೆ ವೇದಿಕೆಯಾಗವಂತೆ ಹದಿನೈದು ದಿನಗಳವರೆಗೆ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಶನ ಕ್ಯಾಂಪ್ ಆಯೋಜಿಸಿದರು.
ಜರ್ಮನಿ, ನೆದರ್‌ಲ್ಯಾಂಡ, ದುಬೈ ಮತ್ತು ಪ್ರಾನ್ಸ್ ದೇಶಗಳಿಗೆ ಪ್ರವಾಸ ಗೈದ ಶ್ರೀಯುತರು ವಿಧೇಶಗಳಲ್ಲಿಯ ಶಿಕ್ಷಣ ಕೇತ್ರದಲ್ಲಿಯ ನಾವೀಣ್ಯ ಪ್ರಯೋಗಗಳನ್ನು ವಿದ್ಯಾರ್ಥಿಗಳಲ್ಲಿ ಹಂಚಿಕೊಳ್ಳುವದರ ಮೂಲಕ ಜ್ಞಾನಕ್ಷೀತಿಜವನ್ನು ವಿಸ್ತರಿಸುತ್ತಿದ್ದರು. ಕಾಲೇಜಿನ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ರೆವರೆಂಡ್ ವಸಂತ ಪಿ. ದಂಡಿನರವರ ಹೆಸರಿನಲ್ಲಿ ಹೊಸ ಕಟ್ಟಡವನ್ನು ಲೋಕಾರೆ್ಣಗೊಳಿಸಿದರು. ಪ್ರತಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಪರಿ ಅನನ್ಯವಾದುದ್ದು. ಈ ಕಾಲೇಜಿನ ವಿದ್ಯಾರ್ಥಿ ಶಿಕ್ಷಕ ಮತ್ತು ಶಿಕ್ಷಕಿಯರು ಆದರ್ಶ ಶೀಕ್ಷಕರಾಗಿ, ಅಧಿಕಾರಿಗಳಾಗಿ, ಸಾಹಿತಿಗಳಾಗಿ, ಸಂಘಟನೆಗಳ ಮುಖ್ಯಸ್ಥರಾಗಿ, ಸಂಗೀತ, ಕ್ರೀಡೆ, ಸಾಂಸ್ಕೃತಿಕ ವಲಯದಲ್ಲಿ ಸುಪ್ರಸಿದ್ಧರಾಗಿರುವರು.
ಒಟ್ಟು 36 ವರ್ಷಗಳ ಸುದೀರ್ಘ ಸೇವೆ ಗೈದು ಡಿಸೆಂಬರ್, 2000 ರಂದು ವೃತ್ತಿಯಿಂದ ನಿವೃತ್ತರಾದರು. ಸಮಾಜ ಸೇವೆಯಲ್ಲಿ ಅದಮ್ಯ ಭಕ್ತಿಹೊಂದಿರುವ ಇವರು ಹಲವಾರು ಸಂಘಸಂಸ್ಥೆಗಳ ಸದಸ್ಯರಾಗಿ ಸೇವೆಗೈಯುತ್ತಿರುವರು. ಪ್ರಸ್ತುತ ಬಾಸೆಲ್ ಮಿಶೆನ್ ಉಚ್ಛಶಿಕ್ಷಣ ಹಾಗೂ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳ ಧರ್ಮದರ್ಶಿಗಳಾಗಿ ಶಿಕ್ಷಣ ಸಂಸ್ಥೆಗಳ ಪ್ರಗತಿಗೆ ಮಾರ್ಗದರ್ಶಕರಾಗಿರುವರು. ಸರಳ ಬದುಕು, ಶಿಸ್ತಿನ ಜೀವನ, ಮಿತಭಾಷೆ, ಸ್ಪಷ್ಟವಾದ ಕಾರ್ಯಚಿಂತನೆ, ತಿಳಿಹಾಸ್ಯ, ಪ್ರಾಮಾಣಿಕತೆ, ಪ್ರೀತಿ ವಿಶ್ವಾಸದ ಸಲುಗೆಯ ಬಾಂಧವ್ಯದೊಂದಿಗೆ ಶ್ರೀಯುತ ಸುಧಾಕರ ಬೇಲಿಯವರು, ಸುಧಾರಣೆಯ ಹರಿಕಾರರಾಗಿರುವರು.
ಸುಧಾಕರ ಬೇಲಿಯವರಿಗೆ 83 ವಸಂತಗಳು ತುಂಬುತ್ತಿರುವ ಈ ಸುಸಮಯದಲ್ಲಿ ಇವರ ಅಪಾರ ಶಿಷ್ಯವೃಂದವು ಗುರುವಿನ ಗುರು ಸುಧಾಕರ ಬೇಲಿ ಅಭಿನಂದನ ಗ್ರಂಥವನ್ನು ಹಾಗೂ ಕಲಿಸಿದ ಗುರುಗಳಿಗೆ ಗುರುದಕ್ಷಣೆಯಾಗಿ ಜೀರ್ಣೋದ್ಧಾರಗೊಳಿಸಿದ ಕಟ್ಟಡಗಳನ್ನು ಅರ್ಿಸುವದರ ಮೂಲಕ ಕೃತಾರ್ಥಭಾವವನ್ನು ಹೊಂದುತ್ತಿರುವುದು ಪುಣ್ಯಭಾಗ್ಯವಾಗಿದೆ. ಗುರುಶಿಷ್ಯಪರಂಪರೆಯ ನಿಸ್ವಾರ್ಥ ಸಂಬಂಧಕ್ಕೆ ಈ ಮಾದರಿ ನಡೆ ಅನುಕರಣೀಯವಾಗಿದೆ. ಸೌರ್ಯಮಂಡಲದ ಸುಧಾಕರ ಭೌತಿಕ ಜಗತ್ತಿನ ಅಂಧಕಾರವನ್ನು ನಿವಾರಿಸಿದರೆ, ಈ ನಿಜದ ಗುರು ಅಂತರಂಗ ಹಾಗೂ ಬಹಿರಂಗದ ಅಜ್ಞಾನವನ್ನು ನಿವಾರಿಸಿ, ಸುಜ್ಞಾನ ತುಂಬಿ ಬಾಳು ಬೆಳಗಿದ
ಗುರುಮೂರ್ತಿ ಸುಧಾಕರ ಬೇಲಿಯವರ ಬಾಳಿನ ಹೆಜ್ಜೆಗಳು ಗುರುಪರಂಪರೆಗೆ ಆದರ್ಶವಾಗಿವೆ.