ಔರಂಗಾಬಾದ್, ಮಹಾರಾಷ್ಟ್ರ, ಡಿಸೆಂಬರ್ 6 -ಮಹಾರಾಷ್ಟ್ರದ ಮರಾಠವಾಡ ಪ್ರದೇಶದ ಎಂಟು ಜಿಲ್ಲೆಗಳಲ್ಲಿ ಶುಕ್ರವಾರ ಭಾರತ ರತ್ನ ಬಾಬಾಸಾಹೇಬ್ ಅಂಬೇಡ್ಕರ್ ಅವರ 63ನೇ ಪುಣ್ಯತಿಥಿ ಅಂಗವಾಗಿ ಅವರ ಪ್ರತಿಮೆಗೆ ನೂರಾರು ಮಂದಿ ಗೌರವ ಸಲ್ಲಿಸಿದರು.
ಇಂದು ಬೆಳಗ್ಗೆಯಿಂದಲೇ ದಲಿತ ಸಮುದಾಯದ ನೂರಾರು ಮಂದಿ ಅಂಬೇಡ್ಕರ್ ಭಾವಚಿತ್ರ, ಪ್ರತಿಮೆಗಳಿಗೆ ಹೂಹಾರ ಹಾಕಿ, ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಔರಂಗಾಬಾದ್ ನಗರದಲ್ಲಿ, ದಲಿತ ಸಂಘಟನೆಗಳು, ರಾಜಕೀಯ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತ್ತು ದಲಿತ ಸಮುದಾಯದವರು ಭಡ್ಕಲ್ ಗೇಟ್ ಚೌಕ್‌ನಲ್ಲಿರುವ ಡಾ.ಅಂಬೇಡ್ಕರ್ ಅವರ ಪ್ರತಿಮೆಗೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಗರದಲ್ಲಿ ರಕ್ತದಾನ, ಪಾದಯಾತ್ರ, ಕಣ್ಣಿನ ತಪಾಸಣಾ ಶಿಬಿರಗಳು, ಕ್ಯಾಂಡಲ್ ಧಮ್ಮ ಜಾಥಾ, ಸಸಿ ನೆಡುವಿಕೆ ಮತ್ತು ಆಹಾರ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಗರದಲ್ಲಿ ಆಯೋಜಿಸಲಾಗಿತ್ತು.
ಅವರಿಗೆ ಗೌರವ ಸಲ್ಲಿಸಲು ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯ (ಬಿಎಂಎಯು) ಜಾಥಾ ಆಯೋಜಿಸಿತ್ತು.
ಈ ಪ್ರದೇಶದ ಡಾ.ಅಂಬೇಡ್ಕರ್ ಅವರ ಹೆಚ್ಚಿನ ಅನುಯಾಯಿಗಳು ಕಳೆದ ರಾತ್ರಿ ಮುಂಬೈಗೆ ದಾದರ್‌ನಲ್ಲಿರುವ "ಚೈತ್ಯ ಭೂಮಿ" ಗೆ ಭೇಟಿ ನೀಡಿ ಗೌರವ ಸಲ್ಲಿಸಿದರು.
ಈ ಮಧ್ಯೆ, ಬಾಬರಿ ಮಸೀದಿ ದ್ವಂಸದ ವಾರ್ಷಿಕ ದಿನ ಮತ್ತು ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲೆಡೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.