ಅಲ್ಲಮನ ಆಧ್ಯಾತ್ಮ ಅಂತರಾಳದ್ದು: ಡಾ. ಶ್ರೀಧರ್ ಹೆಗಡೆ ಭದ್ರನ್
ಬಾಗಲಕೋಟೆ 28: ವಚನ ಚಳುವಳಿ ಮತ್ತು ವಚನ ಸಾಹಿತ್ಯ ಕನ್ನಡದ ಆಸ್ತಿ ಇದ್ದಂತೆ. 21ನೇ ಶತಮಾನದಲ್ಲಿ ವಚನವು ಶುದ್ಧಿಕರಣವಾಯಿತು. ಆನಂದದ ಅಭಿವ್ಯಕ್ತಿಯಲ್ಲೇ ಸಂತೋಷವನ್ನು ಕಾಣಬೇಕು ಎಂದು ಧಾರವಾಡದ ಹಿರಿಯ ವಿದ್ವಾಂಸರಾದ ಡಾ. ಶ್ರೀಧರ್ ಹೆಗಡೆ ಭದ್ರನ್ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಘಟಕ, ಕನ್ನಡ ಸ್ನಾತಕೋತ್ತರ ವಿಭಾಗ, ತಾಲೂಕು ಶರಣ ಸಾಹಿತ್ಯ ಪರಿಷತ್ತು, ತಾಲೂಕ ಕದಳಿ ಮಹಿಳಾ ವೇದಿಕೆ ಅವರ ಸಹಯೋಗದಲ್ಲಿ ಕನ್ನಡ ನುಡಿ ವೇದಿಕೆ ಉದ್ಘಾಟನೆ ಮತ್ತು ಎಂ.ಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಲಿಂ. ಎಸ್.ಟಿ ಬುಳ್ಳಾ ಶರಣ ದಂಪತಿಗಳ ಮತ್ತು ಲಿಂ.ಸಿದ್ರಾಮಪ್ಪ ಶೆಟ್ಟರ ಶರಣ ದಂಪತಿಗಳ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅಲ್ಲಮಪ್ರಭು ಅವರ ವಚನ ಒದುವ ಮೂಲಕ ಉದ್ಘಾಟಸಿ ಅಲ್ಲಮನ ಆಧ್ಯಾತ್ಮ ವಿಷಯದ ಕುರಿತು ಮಾತನಾಡಿದರು. ವಚನಕಾರರಲ್ಲಿ ವೈವಿಧ್ಯವನ್ನು ಕಾಣುತ್ತೇವೆ. ಸಮಾಜಮುಖಿಯಾಗಿರುದಕ್ಕಿಂತ ಹೆಚ್ಚು ಅಂತರ್ಮುಖಿಯಾಗಿದ್ದವರು ಅಲ್ಲಮಪ್ರಭುಗಳು. ಅಲ್ಲಮನ ಆಧ್ಯಾತ್ಮವು ಪರಿಸರದಲ್ಲಿ ಭಿನ್ನವಾಗಿದೆ. ಮನಸ್ಸಿನ ಪ್ರಕೃತಿ ಹಲವು ವೇಷ ರೂಪಗಳನ್ನು ಹೊಂದಿದೆ. ಆಧ್ಯಾತ್ಮಿಕ ತೃಷೆ ಪಾರಲೌಕಿಕ ಅಲ್ಲ. ಆಧ್ಯಾತ್ಮಿಕತೆ ಕಣ್ಣೊಳಗಿನ ರೂಪವಾಗಿದೆ.
ಅಲ್ಲಮಪ್ರಭು ಅವರು ಹೊಸ ಸಂಗತಿಗಳನ್ನು ಕಟ್ಟಿಕೊಟ್ಟಿದ್ದಾರೆ. ಅದ್ವೈತ ಎಂಬುದು ಇವರ ಕಾಲಘಟ್ಟದಲ್ಲಿ ಚರ್ಚೆಗೆ ಗುರಿಯಾಗಿತ್ತು. ಅಲ್ಲಮಪ್ರಭು ತೀವ್ರ ಸ್ವರೂಪದ ಕವಿಯಾಗಿದ್ದರು. ಎರಡು ಅನ್ನುವುದನ್ನು ಅಳಿದು ಏಕತ್ವವನ್ನು ಗುರುತಿಸುವುದು. ವಾಕ್ ಆಡಂಬರಗಳಾಗಿರದೆ ಅದ್ವೈತದ ನೆಲೆಯನ್ನು ತಲುಪಬೇಕು . ಅಲ್ಲಮಪ್ರಭು ಹೇಳಿದ ಮಾತು, ಕೊಟ್ಟ ಕುದರೆಯನ್ನು ಏರದವನು ಶೂರನು, ಧೀರನು ಅಲ್ಲ, ಎಂಬ ಮಾತು ನಿಜಕ್ಕೂ ಮಾರ್ಮಿಕವಾಗಿದೆ ಎಂದರು.
ಕನ್ನಡ ವಿಭಾಗದ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಮಾತನಾಡುವುದರಿಂದ ಸುಖ ದುಃಖಕ್ಕೆ ಗುರಿಯಾಗುತ್ತಾನೆ. ಆನಂದದ ಅಭಿವ್ಯಕ್ತಿಯಲ್ಲೇ ಸಂತೋಷ ಕಾಣುತ್ತದೆ. ಅನುಭವ, ಅನುಭೂತಿಯನ್ನು ಅನುಭವಿಸಿದಾಗ ತಿಳಿಯಲು ಸಾಧ್ಯ. ವಿದ್ಯಾರ್ಥಿಗಳು ಆಸಕ್ತಿಯಿಂದ ಅಧ್ಯಯನದಲ್ಲಿ ಪಾಲ್ಗೊಳ್ಳಿ ಎಂದರು.
ಪ್ರಾಚಾರ್ಯ ಎಸ್.ಆರ್. ಮುಗನೂರಮಠ ಮಾತನಾಡಿ ಧರ್ಮದ ನೆಲೆಗಟ್ಟಿನಲ್ಲಿ ವಚನಗಳನ್ನು ನೋಡಬಾರದು. ಹೊಸ ಆಲೋಚನೆಗಳಿಂದ ತಿಳಿದರೆ ಮನಸ್ಸುಗಳನ್ನು ಸ್ಪರ್ಶ ಮಾಡುವಂತವು ವಚನಗಳು. ಅಲ್ಲಮನ ಚರಿತ್ರೆ ತಿಳಿಯಲು ಸಂಸ್ಕೃತವಂತವರಾಗಬೇಕು ಧ್ಯಾನದಿಂದ ಆಧ್ಯಾತ್ಮದಲ್ಲಿ ಸಾಧನೆ ಮಾಡಬಹುದು. ಸ್ನಾತಕೋತ್ತರ ವಿದ್ಯಾರ್ಥಿಗಳು ಆಳವಾಗಿ ತಿಳಿದುಕೊಳ್ಳಬೇಕು. ಸಮಾಜದಲ್ಲಿ ಉತ್ತಮ ನಾಯಕರಾಗಬೇಕು. ಪ್ರತಿಯೊಬ್ಬರನ್ನು ಗೌರವಿಸಿ, ಎಲ್ಲರಲ್ಲಿಯೂ ಪ್ರಾಮಾಣಿಕತೆಯಿಂದ ಇರಬೇಕು ಎಂದರು.
ಎ.ಎಸ್.ಪಾವಟೆ ಪ್ರಾಸ್ತವಿಕವಾಗಿ ಮಾತನಾಡಿದರು. ಚಂದ್ರಶೇಖರ, ಶೆಟ್ಟರ್, ಅಶೋಕ್ ಬುಳ್ಳಾ, ಎಚ್. ಎಸ್. ಶೆಟ್ಟರ್, ಡಾ. ವೀಣಾ ಕಲ್ಮಠ, ಡಾ. ಬಿ.ಪಿ.ಕುಂಬಾರ್ ಸೇರಿದಂತೆ ಬೋಧಕ ಬೋಧಕೇತ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶರಣಬಸವ ಪಲ್ಲೆದ ಪ್ರಾರ್ಥಿಸಿದರು. ಬಸವರಾಜ್ ಮುಕುಪ್ಪಿ ವಂದಿಸಿದರು.