ನೆರೆ ಸಂತ್ರಸ್ತರನ್ನು ಕಾಪಾಡಲು ಅಲ್ಹಾನ ಮೊರೆ: ಮುಸ್ಲಿಂ ಸಮಾಜದ ಹಿರಿಯ ಮುಖಂಡ ಅನ್ಸಾರಿ

ಲೋಕದರ್ಶನ ವರದಿ

ಕೊಪ್ಪಳ 12: ಮಳೆಯ ಅರ್ಭಟ ಮತ್ತು ಪ್ರವಾಹದಿಂದ ನೆಲೆ ಕಳೆದುಕೊಂಡಿರುವ ನಾಡಿನ ಸಂತ್ರಸ್ತರನ್ನು ಕಾಪಾಡುವಂತೆ ಅಲ್ಹಾನ ಮೊರೆ ಹೋಗಿದ್ದಾಗಿ ಮಾಜಿ ಸಚಿವ, ಮುಸ್ಲಿಂ ಸಮಾಜದ ಹಿರಿಯ ಮುಖಂಡ ಇಕ್ಬಾಲ್ ಅನ್ಸಾರಿ ತಿಳಿಸಿದರು.

ಬಕ್ರೀದ್ ಹಬ್ಬದ ಅಂಗವಾಗಿ ಮುಸ್ಲಿಂ ಸಮಾಜದವರು ಸೋಮವಾರ ಜಯನಗರದ ಹತ್ತಿರ ಇರುವ ಈದ್ಗಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ನಂತರ ಅವರು ಮಾತನಾಡಿದರು. ಇಂದಿನ ಸಾಮೂಹಿಕ ಪ್ರಾರ್ಥನೆ ಸಂದರ್ಭದಲ್ಲಿ ತಾವು ದೇವರ ಮೊರೆ ಹೋಗಿರುವದಾಗಿ ಮತ್ತು ಹಾಪ್ಹೀಜಾ ಮುಸ್ತಫಾ ಕಮಾಲರು ಸಹ ರೈತರಿಗಾಗಿ ಮತ್ತು ನಾಡಿನ ಜನರ ಒಳತಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು ಎಂದು ಹೇಳಿದರು.

ಸಂತ್ರಸ್ತರಿಗೆ ನೆರವಾಗೋಣ: ಇಸ್ಲಾಂ ಧರ್ಮದಲ್ಲಿ ಮಾನವೀಯ ಅನುಕಂಪ ಇದೆ. ವಿಶ್ವವೇ ನಮ್ಮೆಲ್ಲರ ಕುಟುಂಬ ಎಂದು ಹೇಳಲಾಗಿದೆ. ಪ್ರವಾಹ ಸಂತ್ರಸ್ತರಿಗೆ ಎಲ್ಲ ವರ್ಗದ ಜನರು ನೆರವಾಗೋಣ, ರೈತರ ಸಂಕಷ್ಟ ನಿವಾರಣೆಯಾಗಬೇಕು ಎಂದು ಇಕ್ಬಾಲ್ ಅನ್ಸಾರಿ ತಿಳಿಸಿದರು. ಸಕಲ ಜೀವಿ ರಾಶಿಗಳಿಗೆ ದೇವರು ಒಳ್ಳೆಯದನ್ನು ಮಾಡಲಿ. ಬಕ್ರೀದ್ ಹಬ್ಬ ತ್ಯಾಗ ಬಲಿದಾನಗಳ ಸಂಕೇತ. ಹಸಿದವರ ಹಸಿವು ನೀಗಿಸುವ ಸಂದರ್ಭ ಬಕ್ರೀದ್ ಹಬ್ಬದ ಸಂದೇಶವಾಗಿದೆ. ಈ ಹಬ್ಬ ಮೇಲು ಕೀಳು ಎಂಬ ಭಾವನೆ ತೊಲಗಿಸುತ್ತದೆ ಎಂದು ತಿಳಿಸಿದರು.

ಸಾಮೂಹಿಕ ಪ್ರಾರ್ಥನೆಯ ನೇತ್ರತ್ವವನ್ನು ಮುಸ್ತಫಾ ಕಮಾಲ್ ವಹಿಸಿಕೊಂಡಿದ್ದರು. ನಗರಸಭೆ ಸದಸ್ಯ, ಆಬಾದಿ ಬೇರೂನಾ ಮಸೀದಿ ಅಧ್ಯಕ್ಷ ಶಾಮೀದ್ ಮನಿಯಾರ್, ಮುಸ್ಲಿಂ ಸಮಾಜದ ಹಿರಿಯ ಮುಖಂಡ ಸೈಯದ್ ರವೂಫ ಸಾಹೇಬರ ಪುತ್ರ ಸೈಯದ್ ಅಲಿ ಮತ್ತು ವೀರಶೈವ ಸಮಾಜದ ಮುಖಂಡ ಕೊತ್ವಾಲ್ ನಾಗರಾಜ್ ಪಾಲ್ಗೊಂಡು ಅನ್ಸಾರಿಯವರ ಜೊತೆ ಶುಭಾಷಯ ವಿನಿಮಯ ಮಾಡಿಕೊಂಡರು.