ಅಕ್ಷರದವ್ವ ಮಾತೆ ಸಾವಿತ್ರಿಬಾಫುಲೆ ಜಯಂತಿ ಆಚರಣೆ
ಹೊಸಪೇಟೆ 03: ನಗರದ ಡಾಽಽ ಬಿ.ಆರ್.ಅಂಬೇಡ್ಕರ್ (ಜೈಭೀಮ್) ವೃತ್ತದಲ್ಲಿ ಮಾತೆ ಸಾವಿತ್ರಿಬಾಫುಲೆ ಜಯಂತಿ ಕಾರ್ಯಕ್ರಮವನ್ನು ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಬೀದಿಬದಿ ವ್ಯಾಪಾರಿಗಳ ಸಂಘದ ಜಿಲ್ಲಾಧ್ಯಕ್ಷರಾದ ನವೀನ್ ಕುಮಾರ್ ಅವರು ಮಾತನಾಡಿ ಶೋಷಿತ ವರ್ಗದ ಜನರಿಗೆ ವಿದ್ಯಾಭ್ಯಾಸವನ್ನು, ಸಮಾಜ ಸುದಾರಣೆಯನ್ನು ಮಾಡಲು ಮುಖ್ಯ ಪಾತ್ರವನ್ನು ವಹಿಸಿದ್ದಾರೆ. ದೇವನೂರು ಮಹದೇವ ಅವರ ನುಡಿಯಂತೆ ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಎಂದಿಗೂ ಫಲ ನೀಡುತ್ತದೆ, ಎನ್ನುವಂತೆ ಅಕ್ಷರದ ಮಹತ್ವವನ್ನು ನೀಡಿದಂತಹ ಸಾವಿತ್ರಿಬಾಫುಲೆ ಅವರ ಜಯಂತಿ ಮನೆ ಮನೆಗಳಲ್ಲೂ ಆಚರಣೆ ಆಗಬೇಕಾಗುತ್ತದೆ ಎಂದು ಮಾತನಾಡಿದರು.
ಯುವ ಮುಖಂಡರಾದ ಭರತ್ ಕುಮಾರ್.ಸಿ.ಆರ್ ಅವರು ಮಾತನಾಡಿ ದೇಶದ ಪ್ರಥಮ ಮಹಿಳಾ ಶಿಕ್ಷಕಿ ಹಾಗೂ ಶೋಷಿತ ಸಮುದಾಯಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರಿಗೆ ಶಿಕ್ಷಣ ನೀಡುವಲ್ಲಿ ಮುಖ್ಯಪಾತ್ರವನ್ನು ವಹಿಸಿ ತಮ್ಮ ಪತ್ನಿಯಾದ ಜ್ಯೋತಿಬಾಫುಲೆ ಅವರ ನೆರಳಿನಲ್ಲಿ ಶಿಕ್ಷಣವನ್ನು ಕಲಿತು ಶೋಷಣೆಯನ್ನು ಅನುಭವಿಸಿ ಹಿಂದುಳಿದ ವರ್ಗದವರ ಬಾಳಿನ ಬೆಳಕಿಗೆ ಅಕ್ಷರವನ್ನು ನೀಡಿದಂತಹ ಮಹಾಮಾತೆ ಸಾವಿತ್ರಿಬಾಫುಲೆ ಅವರ ಆದರ್ಶ ತತ್ವಗಳು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬಂತೆ ಎಲ್ಲಾ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದು ಅತ್ಯಗತ್ಯ ಮತ್ತು ಸಮಾಜ ಸುಧಾರಣೆಗೆ ಮೂಲಮಂತ್ರವಾಗಿದೆ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎ.ಬಸವರಾಜ, ಶೇಷು, ಕರಿಯಪ್ಪ, ಬೀದಿಬದಿ ವ್ಯಾಪಾರಿಗಳ ಸಂಘದ ತಾಲೂಕು ಅಧ್ಯಕ್ಷ ಹುಲುಗಪ್ಪ, ದಲಿತ ಸೇನೆ ಅಧ್ಯಕ್ಷರಾದ ಕೊಲ್ಲಾಪುರಿ, ನವ ಕರ್ನಾಟಕ ವೇದಿಕೆಯ ನಗರ ಘಟಕ ಅಧ್ಯಕ್ಷರಾದ ಯಲ್ಲಪ್ಪ, ಓಬಳೇಶ, ಗಂಗಾದರ, ಪಂಪಾಪತಿ, ವಿಜಯಕುಮಾರ್, ಸಂತೋಷ್, ಬಸವರಾಜ, ವಿಜಯಕುಮಾರ್, ಸೋಹೆಲ್, ಉದಯ್ ಮತ್ತಿತರರು ಹಾಗೂ ಬೀದಿಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳೂ, ದಲಿತ ಸಂಘಟನೆ ಮುಖಂಡರು, ಸ್ಲಂಸಂಘಟನೆ ಮುಖಂಡರು, ಕನ್ನಡಪರ ಸಂಘಟನೆ ಮುಖಂಡರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.