ಧಾರವಾಡ 23: ಅಂದಿನ ಬ್ರಿಟಿಷ್ ಸರ್ಕಾ ರದ ದಮನಕಾರಿ ವ್ಯವಸ್ಥೆಯ ವಿರುದ್ಧ ತಮ್ಮ ಐ.ಸಿ.ಎಸ್ ಪದವಿ ತೊರೆದು, ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಟ ಮಾಡಿದರು. ಬರೀ ಬ್ರಿಟಿಷರನ್ನು ದೇಶ ಬಿಟ್ಟು ಕಳಿಸುವುದಷ್ಟೇ ಉದ್ಧೇಶವಾಗಿರಲಿಲ್ಲ, ಬ್ರಿಟಿಷರು ಹೋದ ಮೇಲೆ ಯಾವ ವ್ಯವಸ್ಥೆ ಬರುತ್ತದೆ ಎಂಬುದು ಅವರಿಗೆ ಆತಂಕ ಇತ್ತು. ಆದರೆ ಸ್ವತಂತ್ರ ಬರುವ ಮೊದಲೇ ನೇತಾಜಿ ಹತರಾದರು. ಒಂದು ಕ್ರಾಂತಿಯ ಮೂಲಕ ಸಮಾನತೆಯ ಸಮಾಜವಾದಿ ಸಮಾಜ ಬರಬೇಕು ಎನ್ನುವ ಅವರ ಕನಸು ನನಸಾಗಲೇ ಇಲ್ಲ. ಎಂದು ಎಐಡಿವೈಒನ ಅಖಿಲ ಭಾರತ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ ಹೇಳಿದರು.
ನೇತಾಜಿ ಸುಭಾಷ್ಚಂದ್ರ ಬೋಸ್ ಅವರ 123ನೇ ಜನ್ಮದಿನದ ಅಂಗವಾಗಿ ಎಐಡಿಎಸ್ಒ, ಎಐಡಿವೈಒ ಸಂಘಟನೆ ನೇತೃತ್ವದಲ್ಲಿ ನಗರದ ಕಡಪಾ ಮೈದಾನದಲ್ಲಿ ನಡೆದ ಬೃಹತ್ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಇಂದಿಗೂ ಧರ್ಮ ಮತ್ತು ಜಾತಿ ಆಧಾರಿತ ರಾಜಕೀಯ ವಿಜೃಂಬಿಸುತ್ತಿದೆ. ಇಡೀ ದೇಶದಲ್ಲಿ ಕಿತ್ತು ತಿನ್ನುತ್ತಿರುವ ಸಮಸ್ಯೆಗಳನ್ನು ಅಧಿಕಾರಕ್ಕೆ ಬಂದಂತಹ ಯಾವ ಪಕ್ಷಗಳು ಕೂಡ ಪರಿಹರಿಸಿಲ್ಲ. ಶೋಷಣೆ ಆಧಾರದ ಮೇಲೆ ವ್ಯವಸ್ಥೆ ಸ್ಥಾಪಿಸಲ್ಪಟ್ಟಿದೆ. ಈ ವ್ಯವಸ್ಥೆಯಲ್ಲಿ ಕೆಲವೇ ಕೆಲವು ಬಂಡವಾಳಶಾಹಿಗಳು ಸಂಪತ್ತನ್ನು ಲೂಟಿಮಾಡಿ ತಮಗೆ ಬೇಕಾಗಿರುವ ಪಕ್ಷಗಳನ್ನು ಅಧಿಕಾರದಲ್ಲಿ ಕೂಡಿಸಿ ತಾವು ಮಾಡುವ ಅನ್ಯಾಯಗಳು ಗೊತ್ತಾಗಬಾರದೆಂದು ಅನಾವಶ್ಯಕವಾಗಿ ಜಾತಿ ಧರ್ಮಗಳ ವಿಷಯ ತೆಗೆದುಕೊಂಡು ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ.
ನಮ್ಮ ಮದ್ಯೆ ಇರುವ ಕೇವಲ ಒಬ್ಬ ವ್ಯಕ್ತಿ ನೇತೃತ್ವ ಕೊಟ್ಟರೆ ಹೋರಾಟ ಗುರಿ ಮುಟ್ಟುವುದಿಲ್ಲ. ಅದಕ್ಕೆ ಒಂದು ವೈಚಾರಿಕ ಸ್ಪಷ್ಟತೆ ಬೇಕಾಗುತ್ತದೆ. ಕ್ರಾಂತಿಕಾರಿ ಚಿಂತನೆ ಇಟ್ಟುಕೊಂಡು ಒಂದು ಸಂಘಟಿತ ಹೋರಾಟ ಬೆಳೆದಾಗ ಮಾತ್ರ ಒಂದು ನಿಜವಾದ ಆಮೂಲಾಗ್ರ ಬದಲಾವಣೆ ಬರುತ್ತದೆ. ಅದಕ್ಕೆ ಕ್ರಾಂತಿಕಾರಿ ಜೀವನ ನಡೆಸಿರುವ ನೇತಾಜಿಯವರಂತಹ ಆದರ್ಶ ಜೀವನ, ಚಿಂತನೆ ಇವತ್ತು ಮಾರ್ಗದರ್ಶನದಲ್ಲಿ ಯುವಕರು ಅದಕ್ಕೆ ಅಣಿಯಾದಾಗ ಮಾತ್ರ ಇಂದಿನ ಈ ದಿನಾಚರಣೆ ಅರ್ಥಪೂರ್ಣವಾಗುತ್ತದೆ ಎಂದು ಹೇಳಿದರು.
ಎಐಡಿಎಸ್ಒನ ಜಿಲ್ಲಾಧ್ಯಕ್ಷ ಮಹಾಂತೇಶ ಬಿಳೂರ ಮಾತನಾಡಿದರು. ಮಹಾನಗರ ಪಾಲಿಕೆಯ ಆವರಣದಲ್ಲಿರುವ ನೇತಾಜಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ನೇತಾಜಿಯವರ ಬಾವಚಿತ್ರದೊಂದಿಗೆ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಹಣಮೇಶ ಹುಡೇದ, ಉಪಾದ್ಯಕ್ಷ ಕೊಟ್ರೆಶ್ ಹುಬ್ಬಳ್ಳಿ, ಶರಣು ಪಾಟೀಲ್ ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ರಣಜೀತ ಧೂಪದ, ಜಂಟಿಕಾರ್ಯದರ್ಶಿ ಶಶಿಕಲಾ ಮೇಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಸಿಂಧೂ, ಬೀಸಪ್ಪ, ಸಹನಾ ವಿದ್ಯಾರ್ಥಿ ಗಳಾದ ಅರುಣ, ನಿಂಗರಾಜ, ಅಕ್ಷತಾ ಸೇರಿದಂತೆ ವಿವಿದ ಕಾಲೇಜಿನ ನೂರಾರು ವಿದ್ಯಾರ್ಥಿ ಗಳು ಭಾಗವಹಿಸಿದ್ದರು.