ಸವಿತಾ ಸಮಾಜಕ್ಕೆ ಅಗತ್ಯ ಸೌಲಭ್ಯ ನೀಡಲು ಕ್ರಮ: ಉಸ್ತುವಾರಿ ಸಚಿವ ಸಂತೋಷ ಲಾಡ್

Action to provide necessary facilities to Savita Samaj: In-charge Minister Santhosh Lad

ಸವಿತಾ ಸಮಾಜಕ್ಕೆ ಅಗತ್ಯ ಸೌಲಭ್ಯ ನೀಡಲು ಕ್ರಮ: ಉಸ್ತುವಾರಿ ಸಚಿವ ಸಂತೋಷ ಲಾಡ್ 

ಧಾರವಾಡ 05:  ಸಮಾಜದಲ್ಲಿ ಸಣ್ಣ ಸಣ್ಣ ಸಮುದಾಯಗಳು ಸಂಘಟಿತರಾಗಿ ತಮ್ಮ ಅಭಿವೃದ್ಧಿಗಾಗಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಸೌಲಭ್ಯಗಳನ್ನು ಪಡೆಯಲು ಮುಂದೆ ಬಂದಲ್ಲಿ ಸರಕಾರದಿಂದ ಮತ್ತು ತಮ್ಮ ಪೌಂಡೆಶನ್ ಮೂಲಕ ಅಗತ್ಯ ನೆರವು ನೀಡುವುದಾಗಿ ಕಾರ್ಮಿಕ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಹೇಳಿದರು. 

ಅವರು ಇಂದು (ಫೆ.05) ಮಧ್ಯಾಹ್ನ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. 

ಅಣ್ಣ ಬಸವಣ್ಣನವರು 12 ನೇ ಶತಮಾನದಲ್ಲಿ ಎಲ್ಲ ವರ್ಣಗಳಲ್ಲಿ ಸಮಾನತೆ ತರಲು ಪ್ರಯತ್ನಿಸಿದರು. ತಮ್ಮ ಅನುಭವ ಮಂಟಪದಲ್ಲಿ ಪ್ರತಿ ಸಮಾಜ ಅಥವಾ ವೃತ್ತಿಗಳ ಪ್ರತಿನಿಧಿಯಾಗಿ ಇವರನ್ನು ಆಹ್ವಾನಿಸಿ, ಸಮಾನತೆ ಸಾಧಿಸಿದ್ದರು. ಇಂದಿನ ಆಧುನಿಕ ಕಾಲದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರು ಶ್ರೇಷ್ಠವಾದ ಸಂವಿಧಾನವನ್ನು ನಮಗೆ ನೀಡುವ ಮೂಲಕ ಎಲ್ಲರಲ್ಲೂ ಸಮಾನತೆ ತಂದಿದ್ದಾರೆ ಎಂದು ಹೇಳಿದರು.  

ಸವಿತಾ ಸಮಾಜ ಸಣ್ಣ ಸಮಾಜ. ಕಾಯಕನಿಷ್ಠ ಸಮಾಜ. ಯಾವುದೇ ರೀತಿ ಬೇಡಿಕೆ, ಸೌಲಭ್ಯಗಳು ಅಗತ್ಯವಿದ್ದಲ್ಲಿ ಸಂಘಟಿರಾಗಿ ಸರಕಾರದ ಗಮನ ಸೆಳೆಯಬೇಕು. ತಾವು ಸರಕಾರ ಮತ್ತು ಪೌಂಡೆಶನದಿಂದಲೂ ಉದ್ಯೋಗ, ಶಿಕ್ಷಣ, ವಿದ್ಯಾರ್ಥಿ ಪ್ರೊತ್ಸಾಹ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.  

ಕಾರ್ಮಿಕ ಇಲಾಖೆಯಿಂದ ವಿವಿಧ ವೃತ್ತಿಯ ಸಮಾಜಗಳನ್ನು ಗುರುತಿಸಿ, ವ್ಯಕ್ತಿಗಳನ್ನು ನೋಂದಾಯಿಸಿಕೊಳ್ಳಲಾಗುತ್ತಿದೆ. ಸಣ್ಣ ಸಣ್ಣ ಸಮಾಜಗಳನ್ನು ಗುರುತಿಸಿ, ಕಾರ್ಮಿಕ ಕಾರ್ಡ ನೀಡಿ, ಆರ್ಥಿಕ ಹಾಗೂ ಇತರ ಸಹಾಯ ಮಾಡಲಾಗುತ್ತದೆ.  

ರಾಜ್ಯ ಸರಕಾರದ ಪಂಚ ಗ್ಯಾರಂಟಿಗಳು ಯಾವುದೇ ಜಾತಿ, ಧರ್ಮ, ಲಿಂಗ ಬೇದಗಳಿಲ್ಲದೆ ತಲುಪುತ್ತಿವೆ. ಸಮಾಜ ಕಟ್ಟುವ ಕಾರ್ಯವನ್ನು ಸರಕಾರ ಮಾಡುತ್ತಿದೆ. ಜನರು ಸಂಘಟಿತರಾಗಬೇಕು ಎಂದು ಸಚಿವರು ಹೇಳಿದರು.  

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಮಾತನಾಡಿ, ನಾವು ಆಚರಿಸುವ ಹಲವು ಜಯಂತಿಗಳಿಂದ ಸಮಾಜದ ವೈಶಿಷ್ಟತೆ, ಸಂಸ್ಕೃತಿ, ಕಲೆ, ವಿದ್ಯೆ ತಿಳಿಯುತ್ತದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮನ್ನು ನಾವು ಸಮರೆ​‍್ಣ ಮಾಡಿಕೊಂಡರೆ ಯಶಸ್ಸು ಸಿಗುತ್ತದೆ. ಮನೆಯಲ್ಲಿ ಮಕ್ಕಳಿಗೆ ನೈತಿಕತೆಯನ್ನು ತಿಳಿಸಬೇಕು. ಸವಿತಾ ಮಹರ್ಷಿಗಳು ಹಾಕಿಕೊಟ್ಟ ದಾರಿಯಲ್ಲಿ ನಾವು ನಡೆದರೆ, ಮಹರ್ಷಿಗಳ ಜಯಂತಿಗೆ ಅರ್ಥಪೂರ್ಣತೆ ಸಿಕ್ಕಂತಾಗುತ್ತದೆ ಎಂದು ಅವರು ಹೇಳಿದರು.  

ಕಾರ್ಯಕ್ರಮದಲ್ಲಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಕೃಷ್ಣಾ ಎಂ.ಉಪ್ಪೇರ ಅವರು ಮಾತನಾಡಿ, ಸವಿತಾ ಸಮಾಜವನ್ನು ಸರ್ಕಾರವು ಗುರುತಿಸಿ, ಶ್ರೀ ಸವಿತಾ ಮಹರ್ಷಿ ಜಯಂತಿಯನ್ನು ಆಚರಿಸುತ್ತಿರುವುದು ನಮಗೆಲ್ಲರಿಗೂ ಸಂತೋಷ ತಂದಿದೆ ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಎಸ್‌.ಎಸ್‌.ಎಲ್‌.ಸಿ., ಪಿಯುಸಿ, ಡಿಗ್ರಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗೆ ಸನ್ಮಾನಿಸಿ, ಗೌರವಿಸಲಾಯಿತು.  

ಬಾಗಲಕೋಟೆಯ ರನ್ನಬೆಳಗಲಿಯ ಉಪನ್ಯಾಸಕ ಮತ್ತು ಯೋಗ ಶಿಕ್ಷಕ ರಾಘವೇಂದ್ರ ನೀಲನ್ನವರ ಅವರು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.  

ಧಾರವಾಡ ಜಿಲ್ಲಾ ಸವಿತಾ ಸಮಾಜದ ಕಾರ್ಯದರ್ಶಿ ಪರಶುರಾಮ ಬದ್ದೆಪಲ್ಲೆ, ಖಜಾಂಚಿ ಮೋಹನ ಗೋಲಿ, ಮುಖಂಡರಾದ ಬುಚ್ಚಣ್ಣ ಮುಶ್ರಿಪಲ್ಲೆ, ಎಸ್‌.ಆರ್‌.ಪಾಟೀಲ, ಜೀವನ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.    

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿದರು. ಆರತಿ ದೇವಶಿಕಾಮಣಿ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.  


ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು, ಸಾರ್ವಜನಿಕರು ಹಾಗೂ ಇತರರು ಭಾಗವಹಿಸಿದ್ದರು.