ಕಾಮಗಾರಿಗಳ ಅನುಷ್ಠಾನದಲ್ಲಿ 100 ರಷ್ಟು ಪ್ರಗತಿ ಸಾಧಿಸಿ : ಸೋಮಶೇಖರ್ ಮೇಸ್ತಾ

ಕಾಮಗಾರಿಗಳ ಅನುಷ್ಠಾನದಲ್ಲಿ 100 ರಷ್ಟು ಪ್ರಗತಿ ಸಾಧಿಸಿ : ಸೋಮಶೇಖರ್ ಮೇಸ್ತಾ Achieve 100 percent progress in the implementation of works: Somashekar Mesta

ಕಾರವಾರ, ಫೆ 09.:- ತಾಲೂಕು ಪಂಚಾಯತನಿಂದ 15 ನೇ ಹಣಕಾಸು ಯೋಜನೆಯಡಿ ಅನುದಾನ ಬಿಡುಗಡೆಗೊಂಡ ಕಾಮಗಾರಿಗಳನ್ನು ಪ್ರತಿ ಶತ ನೂರರಷ್ಟು ಪ್ರಗತಿ ಸಾಧಿಸಬೇಕು ಹಾಗೂ ಹಣಕಾಸು ವರ್ಷದ ಅಂತ್ಯವಾಗಿರುವುದರಿಂದ ಬಿಲ್ಲುಗಳನ್ನು ಸಲ್ಲಿಸಲು ಕೊನೆಯ ದಿನಾಂಕದೊಳಗೆ ತಮ್ಮ ಇಲಾಖೆಯಲ್ಲಿ ಇರುವ ಅನುದಾನ ಬಗ್ಗೆ ಪರೀಶೀಲನೆ ಮಾಡಿ ಕಾಮಗಾರಿಗಳ ಬಿಲ್ಲು ಹಾಗೂ ಅಧಿಕಾರಿ ಸಿಬ್ಬಂದಿಗಳ ವೇತನ ಬಾಕಿ ಇರುವ ಬಗ್ಗೆ ಪರೀಶೀಲನೆ ಮಾಡಿ, ಉಳಿದ ಅನುದಾನದಲ್ಲಿ ಹೊಸ ಕ್ರಿಯಾ ಯೋಜನೆ ಮಾಡಲು ಅವಕಾಶವಿದೆ ಆದ್ದರಿಂದ ಯಾವುದೇ ಕಾರಣಕ್ಕೂ ಬಿಡುಗಡೆಗೊಂಡ ಅನುದಾನವನ್ನು ವ್ಯರ್ಥ ಮಾಡಬೇಡಿ ಎಂದು ತಾಲೂಕು ಪಂಚಾಯತ ಆಡಳಿತಾಧಿಕಾರಿ ಸೋಮ ಶೇಖರ್ ಮೇಸ್ತಾ ಹೇಳಿದರು. 

ಅವರು ಸೋಮವಾರ ತಾಲೂಕು ಪಂಚಾಯತ ಸಭಾಂಗಣದಲ್ಲಿ ನಡೆದ, ತಾಲೂಕು ಪಂಚಾಯತ ಕೆಡಿಪಿ ಹಾಗೂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿವಿಧ ಇಲಾಖೆಗಳ ಮೂಲಕ ಸರ್ಕಾರವು ವಿವಿಧ ಯೋಜನೆಗಳು, ಸೌಲಭ್ಯಗಳನ್ನು ಸಾರ್ವಜನಿಕರಿಗೆ ನೀಡುತ್ತಿದ್ದು, ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಇಲ್ಲದೇ ಇರುವುದರಿಂದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಆದರಿಂದ ಎಲ್ಲಾ ಇಲಾಖೆಯವರು ತಮ್ಮ ಇಲಾಖೆಯಿಂದ ಸಿಗುವ ಸೌಲಭ್ಯಗಳು ಮತ್ತು ಹೇಗೆ ಪಡೆಯಬೇಕು ಎಂಬುದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ, ಎಲ್ಲಾ ಮಾಹಿತಿಯುಳ್ಳ ಫಲಕವನ್ನು ಗ್ರಾಮ ಪಂಚಾಯಿತಿಗಳಲ್ಲಿ ಅಳವಡಿಸಬೇಕು ಎಂದರು. 

ಮಳೆಗಾಲದಲ್ಲಿ ಸಾರ್ವಜನಿಕರ ಆರೋಗ್ಯದಲ್ಲಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚಾರಿವುದರಿಂದ ಮುಂಜಾಗ್ರತೆಯ ಕ್ರಮವಾಗಿ ಅಗತ್ಯ ಓಷಧಿ ಸಾಮಾಗ್ರಿಗಳನ್ನು ಖರೀದಿಸುವಂತೆ ಹಾಗೂ ಹೆಸ್ಕಾಂ ಇಲಾಖೆಯವರು ಕೂಡ ಮಳೆಗಾಲ ಮುಂಚಿತವಾಗಿ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದ ಅವರು  ಟ್ರಾನ್ಸ್‌ ಫಾರ್ಮರ್ ಹಾಗೂ ವಿದ್ಯುತ್ ಲೈನ್‌ಗಳನ್ನು ಸರಿಪಡಿಸಲು ಬೇಕಾಗುವ ಉಪಕರಣಗಳನ್ನು ಮುಂಜಾಗ್ರತವಾಗಿ ದಾಸ್ತಾನು ಮಾಡಿಕೊಳ್ಳುವಂತೆ ಸಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು. 

ಅಧಿಕಾರಿಗಳು ವಸತಿ ನಿಲಯಗಳಿಗೆ ಭೇಟಿ ನೀಡಿ ಕೊಂದುಕೊರತೆಗಳ ಬಗ್ಗೆ ಪರೀಶೀಲನೆ ನಡೆಸಬೇಕು. ಲ್ಯಾಬ್ ಎಜೆನ್ಸಿಯವರಿಂದ ಬಿಸಿಯೂಟದ ಪರೀಕ್ಷೆ ನಡೆಸಬೇಕು. ಪ್ರತಿವರ್ಷ ಗ್ಯಾಸ್ ಪೈಪ್ ಬದಲಾಯಿಸುವಂತೆ ಮತ್ತು ಅಗತ್ಯವಿದ್ದಲ್ಲಿ ಒಲೆಗಳನ್ನು ಬದಲಾಯಿಸುವಂತೆ ಹೇಳಿದ ಅವರು ಮೆನು ಪ್ರಕಾರವೇ ಆಹಾರವನ್ನು ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.  

ಈ ವರ್ಷ ಎಸ್‌.ಎಸ್‌.ಎಲ್‌.ಸಿ ಯಲ್ಲಿ ಪ್ರತಿಶತ 100 ರಷ್ಟು ಗುರಿ ಸಾಧಿಸುವ ಉದ್ದೇಶದಿಂದ ಸರ್ಕಾರಿ ಫ್ರೌಢಶಾಲೆಯ ಮುಖ್ಯೋಪಾಧ್ಯಕರೊಂದಿಗೆ ಸಭೆಯನ್ನು ಆಯೋಜಿಸುವಂತೆ ಸೂಚಿಸಿದ ಅವರು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ, ಶಿಬಿರಗಳನ್ನು ಆಯೋಜನೆ ಮಾಡುವ ಮೂಲಕ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಹೆಚ್ಚಿಸಬೇಕು ಎಂದು ಹೇಳಿದರು. ಕಾರ್ಯನಿರ್ವಾಹಕ ಅಧಿಕಾರಿ ವೀರನಗೌಡ ಪಿ ಏನಗಗೌಡ, ತಾಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.