ಲೋಕದರ್ಶನ ವರದಿ
ಬ್ಯಾಡಗಿ04: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಸೋಮವಾರ ಪಟ್ಟಣದಲ್ಲಿನ ಶಿವನ ದೇವಾಲಯಗಳಿಗೆ ಜನರು ಶ್ರದ್ಧಾ ಭಕ್ತಿಯಿಂದ ಪೂಜೆಗಳನ್ನು ನೆರವೇರಿಸಿರು.
ವೈದಿಕ ಪಂಚಾಂಗದಂತೆ ವರ್ಷದ ಕೊನೆಯಲ್ಲಿ ಉಳಿದ ಎರಡು ಹಬ್ಬಗಳಲ್ಲಿ ಶಿವರಾತ್ರಿ ಒಂದಾಗಿದ್ದು ಇದಾದ ಬಳಿಕ ರಂಗಪಂಚಮಿ (ಹೋಲಿ) ವರ್ಷದ ಕೊನೆಯ ಹಬ್ಬವಾಗಿದೆ. ನೆಹರು ನಗರದ ಸೋಮೇಶ್ವರ ದೇವಸ್ಥಾನ, ಗುಮ್ಮನಹಳ್ಳಿ ರಸ್ತೆಯಲ್ಲಿನ ಸಂಗಮೇಶ್ವರ ಹಂಸಭಾವಿ ರಸ್ತೆಯಲ್ಲಿನ ಆನಂದೇಶ್ವರ ಇನ್ನಿತರ ಶಿವನ ದೇವಾಲಯಗಳಲ್ಲಿನ ಈಶ್ವರನ ಮೂತರ್ಿಗಳಿಗೆ ಹವನ, ಹೋಮ, ರುದ್ರಾಭಿಷೇಕ ಹಾಗೂ ಪೂಜೆ ಮಾಡುವ ಮೂಲಕ ಸಂಭ್ರಮದಿಂದ ಶಿವರಾತ್ರಿಯನ್ನು ಆಚರಿಸಲಾಯಿತು.
ಶಿವರಾತ್ರಿ ಶುಭ ದಿನವಾದ ಸೋಮವಾರ ವಿವಿಧ ದೇವಾಲಯಗಳಲ್ಲಿ ಬೆಳಗಿನ ಜಾವ 4 ಗಂಟೆಯಿಂದಲೇ ಪೂಜಾ ಕೈಂಕರ್ಯಗಳು ನಡೆದವು ಎಪಿಎಮ್ಸಿ ಆವರಣದಲ್ಲಿರುವ ಸಿದ್ಧೇಶ್ವರ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಮೊದಲು ಕ್ಷೀರಾಭಿಷೇಕ, ಗಂಧಾಧಭಿಷೇಕ, ಕುಂಕುಮಾರ್ಚನೆ ಮಾಡಿ ಬಿಲ್ವಪತ್ರೆ ಇನ್ನಿತರ ವಿಧವಿಧವಾದ ಹೂವುಗಳೊಂದಿಗೆ ಅಲಂಕರಿಸಲಾಗಿತ್ತು, ಬೆಳಿಗ್ಗೆಯಿಂದಲೇ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ದೇವಸ್ಥಾನದಲ್ಲಿನ ಪೂಜಾ ಕೈಂಕರ್ಯಗಳಲ್ಲಿ ತೊಡಗಿದ್ದರು.
ಮಹಾಶಿವರಾತ್ರಿ ಅಂಗವಾಗಿ ಪಟ್ಟಣದ ಬಹುತೇಕ ದೇವಾಲಯಗಳು ಭಕ್ತರಿಂದ ತುಂಬಿ ಹೋಗಿದ್ದು, ಮುಂಜಾನೆಯಿಂದಲೆ ವಿವಿಧ ಭಜನೆಗಳು ಹಾಗೂ ಪೂಜಾ ಕಾರ್ಯಕ್ರಮಗಳು ಜರುಗಿದವು, ಶಿವನ ದರ್ಶನಕ್ಕಾಗಿ ಕೆಲ ದೇವಾಲಯಗಳಲ್ಲಿ ಭಕ್ತಾದಿಗಳು ಸರತಿಯಲ್ಲಿ ನಿಂತು ದರ್ಶನ ಪಡೆದ ದೃಶ್ಯಗಳು ಕಂಡುಬಂದವು.