ಕನಕ ಜಯಂತಿಗೆ ಗೈರು, ಕುರುಬ ಸಮಾಜದಿಂದ ದಿಢೀರ್ ಪ್ರತಿಭಟನೆ
ವಿಜಯಪುರ 25: ರಂದು ರಾಜ್ಯಾದ್ಯಂತ ಭಕ್ತ ಕನಕದಾಸರ ಜಯಂತಿಯನ್ನು ಕಡ್ಡಾಯವಾಗಿ ಆಚರಿಸಬೇಕು ಎಂಬ ಸರಕಾರದ ಆದೇಶವಿದ್ದರೂ, ಸರಕಾರದ ಆದೇಶ ಧಿಕ್ಕರಿಸಿ, ಕನಕ ಜಯಂತಿಗೆ ಗೈರು ಉಳಿದಿರುವ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯವೈಖರಿಯನ್ನು ವಿರೋಧಿಸಿ, ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ ಹಾಗೂ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಫೌಂಡೇಶನ್‌ನ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಕುರುಬ ಸಮಾಜದ ಮುಖಂಡರು ವಿವಿಯ ಆಡಳಿತ ಭವನದ ಎದುರು ಬೃಹತ್ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಕನಕದಾಸ ಜಯಂತಿ ಆಚರಣೆಗೆ ಗೈರು ಉಳಿದಿರುವ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಬಿ.ಕೆ. ತುಳಸಿಮಾಲಾ, ಕುಲಸಚಿವ ಶಂಕರಗೌಡ ಸೋಮನಾಳ ಹಾಗೂ ಮೌಲ್ಯ ಮಾಪನ ಕುಲಸಚಿವ ಹಾಗೂ ವಿಶ್ವವಿದ್ಯಾಲಯದ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ವೇಳೆ ಸಮಾಜ ಮುಖಂಡ ಮೋಹನ ದಳವಾಯಿ ಮಾತನಾಡಿ, ಭಕ್ತ ಕನಕದಾಸರ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಬೇಕಿದ್ದ ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವರು ಹಾಗೂ ಮೌಲ್ಯಮಾಪನ ಕುಲಸಚಿವರು ಕಾರ್ಯಕ್ರಮಕ್ಕೆ ಗೈರು ಉಳಿಯುವ ಮೂಲಕ ಕನಕದಾಸರಿಗೆ ಅವಮಾನ ಮಾಡಿದ್ದಾರೆ. ಆ ಮೂಲಕ ಇಡೀ ಕುರುಬ ಸಮಾಜವನ್ನು ಹಗುರವಾಗಿ ಕಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾತ್ರವಲ್ಲ, ಕನಕದಾಸರ ಜಯಂತಿಗೆ ಕಡ್ಡಾಯವಾಗಿ ಗೈರು ಉಳಿದಿದ್ದ ಈ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದಲಿತ ಮುಖಂಡ ಶಿವಕುಮಾರ ಬಣ್ಣೂರ ಮಾತನಾಡಿ, ಮಹಾನ್ ಪುರುಷರ ಜಯಂತಿಗೆ ಅವಮಾನ ಮಾಡಿದ ಈ ಅಧಿಕಾರಿಗಳ ನಡೆ ಅಕ್ಷಮ್ಯ ಅಪರಾಧ. ಮುಂದಿನ ದಿನಗಳಲ್ಲಿ ಕನಕದಾಸರ ಜಯಂತಿ ಸೇರಿದಂತೆ ಮಹಾನ್ ವ್ಯಕ್ತಿಗಳ ಜಯಂತಿಯನ್ನು ಕಡೆಗಣಿಸಿದರೆ, ನಾವು ಸುಮ್ಮನೆ ಕೂಡ್ರಲ್ಲ ಎಂದರು.
ವಿನಾಯಕ ಮಾತನಾಡಿ, ಕನಕದಾಸರ ಜಯಂತಿಗೆ ಗೈರು ಉಳಿಯುವ ಮೂಲಕ ಸಮಾಜ ಹಾಗೂ ಮಹಾನ್ ವ್ಯಕ್ತಿಗೆ ಅವಮಾನ ಮಾಡಿದ್ದನ್ನು ಬಲವಾಗಿ ಖಂಡಿಸಿದರು.
ಪ್ರತಿಭಟನೆಯಲ್ಲಿ ಚನ್ನಪ್ಪ ಸೈದಾಪುರ, ಕನಕದಾಸ ಬೀರಣ್ಣವರ, ಸಚಿನ್ ದಳವಾಯಿ, ಸಂಗಮೇಶ ಕವಡಿಮಟ್ಟಿ, ಉಮೇಶ ಬೆಂಕಿ, ರವಿ ಕಿತ್ತೂರ, ನಿಂಗರಾಜ್, ಮಲ್ಲು ದಿನ್ನಿ, ಮೋಹನ ಮೇಟಿ, ಯಲ್ಲಾಲಿಂಗ ಗಣಿ, ಓದುಸಿದ್ದ ಒಡೆಯರ, ಬಂಗಾರೆಪ್ಪ ಒಡೆಯರ, ಲಕ್ಕು ಹಳ್ಳಿ, ಶ್ರೀಕಾಂತ ತೊರವಿ, ರೇವಣಸಿದ್ದ ತೊರವಿ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.