ಎಐಯುಟಿಯುಸಿ ವತಿಯಿಂದ ಬಿಸಿಯೂಟ ಕಾರ್ಮಿಕರ ಸಮಾವೇಶ
ಹುಬ್ಬಳ್ಳಿ 09: ಎಐಯುಟಿಯುಸಿ ಕೇಂದ್ರ ಕಾರ್ಮಿಕ ಸಂಘಟನೆಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರದಾಸೋಹ ಕಾರ್ಮಿಕರ ಸಂಘ (ರಿ)ದ ವತಿಯಿಂದ ಇಂದು ನಗರದ ಲ್ಯಾಮಿಂಗ್ಟನ್ ಶಾಲೆಯ ಸಭಾಭವನದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಬಿಸಿಯೂಟ ಕಾರ್ಮಿಕರ ಹುಬ್ಬಳ್ಳಿ ತಾಲ್ಲೂಕಾ ಸಮಾವೇಶ ನಡೆಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಪನ್ಯಾಸಕರಾದ ಮಲ್ಲಮ್ಮ ಹಾಟಗಲ್ ಅವರು ಮಾತನಾಡಿ, ಅಂತರಾಷ್ಟ್ರೀಯ ಮಹಿಳಾ ದಿನವು ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆಯಲು ಧ್ವನಿಯೆತ್ತಿದ ದಿನ. ಪುರುಷ ಪ್ರಧಾನ ಸಮಾಜವು ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯವನ್ನು ಕಡೆಗಣೆ ಮಾಡಿ, ಅವರನ್ನು ಎರಡನೆಯ ದರ್ಜೆಯ ಪ್ರಜೆಗಳಂತೆ, ಭೋಗದ ವಸ್ತು ಎಂಬಂತೆ ಅವಳಿಗೆ ಸ್ವಂತ ಅಸ್ತಿತ್ವವೇ ಇಲ್ಲವೆಂಬಂತೆ ವರ್ತಿಸುತ್ತಿದೆ. ಆದರೆ ನೀವು ನಿಮ್ಮ ಅಸ್ತಿತ್ವದ ಛಾಪನ್ನು ಮೂಡಿಸಲು ಒಂದು ಹೆಜ್ಜೆ ಮುಂದೆ ಬಂದು ಹೋರಾಟದಲ್ಲಿ ತೊಡಗಿದ್ದೀರಿ. ಆ ಮೂಲಕ ಮಹಿಳಾ ದಿನದ ಸ್ಪೂರ್ತಿಯನ್ನು ಸರಿಯಾಗಿಯೇ ಕೊಂಡೊಯ್ದಿದ್ದೀರಿ. ನಿಮಗೆ ಹೋರಾಟದ ಅಭಿನಂದನೆಗಳು ಎಂದರು.
ಇದೇ ಸಂದರ್ಭದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಎಐಯುಟಿಯುಸಿ ಜಿಲ್ಲಾಧ್ಯಕ್ಷರಾದ ಗಂಗಾಧರ ಬಡಿಗೇರ್ ಮಾತನಾಡಿ, ನಿನ್ನೆಯಷ್ಟೇ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಬಿಸಿಊಟ ಕಾರ್ಮಿಕರಿಗೆ ಒಂದು ಸಾವಿರ ರೂಪಾಯಿ ಗೌರವ ಧನ ಹೆಚ್ಚಳವನ್ನು ಘೋಷಿಸಿದೆ. ಇದು ಸರ್ಕಾರ ಭಿಕ್ಷೆಯಾಗಿ ನೀಡಿದ್ದಲ್ಲ, ಬದಲಾಗಿ ಹೋರಾಟದ ಮೂಲಕ ಗಳಿಸಿಕೊಂಡಿದ್ದು. ಈ ಹೆಚ್ಚಳವು ಕೂಡ ಇಂದಿನ ಬೆಲೆ ಏರಿಕೆಗೆ ಹೋಲಿಸಿದರೆ ಅತ್ಯಲ್ಪವೇ ಸರಿ. ಆದ್ದರಿಂದ ಬಿಸಿಊಟ ಕಾರ್ಮಿಕರು ತಮ್ಮ ಗೌರವಯುತ ಜೀವನ ನಡೆಸಲು ಯೋಗ್ಯ ವೇತನ, ಸಮವಸ್ತ್ರ, 12 ತಿಂಗಳ ವೇತನ ಇತ್ಯಾದಿ ಹಕ್ಕುಗಳನ್ನು ಪಡೆದುಕೊಳ್ಳಲು ಒಗ್ಗಟ್ಟನ್ನು ಹೆಚ್ಚಿಸಿಕೊಂಡು ರಾಜೀರಹಿತ ಹೋರಾಟಕ್ಕೆ ಮುಂದಾಗಬೇಕು. ಎಲ್ಲ ಹಂತಗಳಲ್ಲಿ ಸಂಘಟನೆಗೆ ಹೆಗಲು ಕೊಟ್ಟು ಹೋರಾಟದ ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ಕರೆ ನೀಡಿದರು.
ಮತ್ತೋರ್ವ ಭಾಷಣಕಾರರಾದ ಎಐಯುಟಿಯುಸಿ ರಾಜ್ಯ ಸೆಕ್ರೆಟರಿಯೇಟ್ ಸದಸ್ಯರಾದ ಎಂ,ಬಿ ತಾಯದಾಸ ಅವರು ಎಲ್ಲಾ ಬಿಸಿಊಟ ಕಾರ್ಮಿಕರಿಗೆ ಹೋರಾಟದ ಕ್ರಾಂತಿಕಾರಿ ಶುಭಾಶಯಗಳನ್ನು ಹೇಳಿದರು.
ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷರಾದ ಭುವನಾ ಬಳ್ಳಾರಿಯವರು ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮ ನಡೆಸಿಕೊಟ್ಟರು. ವೇದಿಕೆಯ ಮೇಲೆ ಮುಖಂಡರಾದ ಲಲಿತಾ ಹೊಸಮನಿ ನಾಗಮ್ಮ ಬಶಟ್ಟಿ, ಜಾಹಿದಾ ಹೊಂಬಳ ಉಪಸ್ಥಿತರಿದ್ದರು. ಸಮಾವೇಶದ ಕೊನೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.