ಕುಂಟುತ್ತಾ ಸಾಗಿದ ಸರಕಾರವೇ ಆರಂಭಿಸಿದ ದೂರದೃಷ್ಟಿಯ ಯೋಜನೆ - ಸಂತೋಷ್ ಕುಮಾರ್ ಕಾಮತ್

A visionary project started by a limping government - Santosh Kumar Kamat


 ಕುಂಟುತ್ತಾ ಸಾಗಿದ ಸರಕಾರವೇ ಆರಂಭಿಸಿದ ದೂರದೃಷ್ಟಿಯ ಯೋಜನೆ  - ಸಂತೋಷ್ ಕುಮಾರ್ ಕಾಮತ್ 

ಮಾಂಜರಿ : ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕೆನ್ನುವ ನಿಟ್ಟಿನಲ್ಲಿ ಸರ್ವಸಾಮಾನ್ಯ ರೈತರ ಜನರ ಬೆಳೆಗಳಿಗೆ ಮತ್ತು ಹೊಲಗದ್ದೆಗೆ ನೀರು ಪೂರೈಸುವ ಸಲುವಾಗಿ ಸರಕಾರವೇ ಆರಂಭಿಸಿದ ದೂರದೃಷ್ಟಿಯ ಯೋಜನೆಯೊಂದು ಸಕಾಲಕ್ಕೆ ಅನುದಾನ ಬಿಡುಗಡೆಯಾಗದೆ ಕುಂಟುತ್ತಾ ಸಾಗಿದೆ. 

ಇಂಗಳಿ-ಹಳೆದಿಗ್ಗೇವಾಡಿ ಬಾಂದಾರ ನಿರ್ಮಾಣ ಕಾಮಗಾರಿ ಬ್ರಿಜ್ ಕಂ ಬಾಂದಾರ ನಿರ್ಮಾಣ ಕಾಮಗಾರಿ 2017-18ನೇ ಸಾಲಿನಲ್ಲಿ ಆರಂಭಗೊಂಡಿದ್ದು, ಇನ್ನೂ ಮುಗಿಯದಿರುವುದು ವ್ಯವಸ್ಥೆಯ ನಿಷ್ಕ್ರೀಯತೆಗೆ ಹಿಡಿದ ಕನ್ನಡಿ. ಇದರಿಂದ ನೂರಾರು ಎಕರೆ ಕೃಷಿ ಭೂಮಿ ನೀರಾವರಿ ಹಾಗೂ ಹಲವು ಗ್ರಾಮಗಳು ಶುದ್ಧ ಕುಡಿಯುವ ನೀರಿನ ಸೌಲಭ್ಯದಿಂದ ವಂಚಿತಗೊಂಡಿವೆ. 

ಪೂರ್ಣಗೊಂಡರೆ ಹಲವು ಲಾಭ: ಚಿಕ್ಕೋಡಿ ತಾಲೂಕಿನ ಇಂಗಳಿ ಮತ್ತು ರಾಯಬಾಗ ತಾಲೂಕಿನ ಹಳೆದಿಗ್ಗೇವಾಡಿ ಬಳಿ ಕೃಷ್ಣಾನದಿಗೆ 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಬ್ರಿಜ್ ಕಂ ಬಾಂದಾರದಿಂದ ರಾಯಬಾಗ ತಾಲೂಕಿನ ಜಲಾಲಪುರ, ದಿಗ್ಗೇವಾಡಿ, ನಸಲಾಪುರ, ಬಾವನ ಸೌಂದತ್ತಿ ಮತ್ತು ಚಿಕ್ಕೋಡಿ ತಾಲೂಕಿನ ಇಂಗಳಿ, ಮಾಂಜರಿ, ಅಂಕಲಿ, ಯಡೂರ ಗ್ರಾಮಗಳಿಗೆ ಕುಡಿಯುವ ನೀರು, ಕೃಷಿ ಚಟುವಟಿಕೆಗಳಿಗೆ ಅನುಕೂಲ. ಈ ಭಾಗದ ಅಂತರ್ಜಲ ಮಟ್ಟ ಹೆಚ್ಚಾಗುವುದರಿಂದ ರೈತರ ಜೀವನ ಮಟ್ಟ, ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. 

ಅಲ್ಲದೆ, ಬ್ರಿಜ್ ನಿರ್ಮಾಣದಿಂದ ಕಬ್ಬು ಸಾಗಿಸಲು ಸುತ್ತುವರಿದು ಹೋಗುವ ಪ್ರಯಾಸವೂ ತಪ್ಪಲಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕ ಸಂಪ ರ್ಕವೂ ಸುಲಭವಾಗಲಿದ್ದು, ಅಂತರ ಕಡಿಮೆ ಯಾಗಿ ಪ್ರಯಾಣಿಕರಿಗೆ, ರೈತರಿಗೆ ಅನುಕೂಲ ವಾಗಲಿದೆ. ಜತೆಗೆ ರಾಯಬಾಗ ಮತ್ತು ಕಾಗವಾಡ ತಾಲೂಕಿನ ಹಲವು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮತ್ತು ಏತ ನೀರಾವರಿ ಯೋಜನೆಗಳಿಗೂ ಸಹಕಾರಿ. 

ಡಾ.ಕೋರೆ, ಕವಟಗಿಮಠ ಮುತುವರ್ಜಿ: ರಾಜ್ಯಸಭೆ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ಮುತುವರ್ಜಿ ವಹಿಸಿ ಕೃಷ್ಣಾ ನದಿಗೆ ದಿಗ್ಗೇವಾಡಿ-ಇಂಗಳ ಬ್ರಿಜ್ ಕಂ ಬಾಂದಾರ ನಿರ್ಮಾಣ ಯೋಜನೆ ರೂಪಿಸಿದ್ದರು. ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರು ಯೋಜನೆ ಜಾರಿಗಾಗಿ ಹೋರಾಟ ಮಾಡಿ ಕಾಮಗಾರಿಗೆ ಪ್ರಸ್ತಾವನೆಸಲ್ಲಿಸಿದ್ದರು. ಆದರೆ, ಯೋಜನೆಗೆ ನಿಗದಿಪಡಿಸಿದ ಸ್ಥಳ ಹಿಪ್ಪರಗಿ ಡ್ಯಾಂ ಹಿನ್ನೀರಿನಲ್ಲಿ ಮುಳುಗಡೆಯಾ ಗುತ್ತದೆ ಎಂಬ ಕಾರಣ ನೀಡಿದ್ದ ಆರ್ಥಿಕ ಇಲಾಖೆ ಪ್ರಸ್ತಾವನೆಗೆ ಅನುಮೋದನೆ ನೀಡಿರಲಿಲ್ಲ 

''ಬೇಸಿಗೆಯಲ್ಲಿ ಹಿಪ್ಪರಗಿ ಡ್ಯಾಂ ನೀರು ಕಡಿಮೆಯಾಗುತ್ತದೆ. ಆ ಸಂದರ್ಭದಲ್ಲಿ ಐದಾರು ತಿಂಗಳಾದರೂ ಬ್ಯಾರೇಜ್‌ನಿಂದ ಕಾಗವಾಡ, ರಾಯಬಾಗ ಮತ್ತು ಚಿಕ್ಕೋಡಿ ತಾಲೂಕಿನ ಹಲವು ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಪೂರೈಸಲು ಮತ್ತು ಏತ ನೀರಾವರಿಗೆ ಅನುಕೂಲವಾಗಲಿದೆ,'' ಎಂದು ಮಹಾಂತೇಶ ಕವಟಗಿಮಠ ಸರಕಾರಕ್ಕೆ ಮನವರಿಕೆ ಮಾಡಿದ್ದರು. ಆ ಬಳಿಕ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿತ್ತು. 

32 ಕೋಟಿ ರೂ.ಅನುದಾನ ಬಿಡುಗಡೆ: ಕಾಮಗಾರಿಗೆ ಮೊದಲ ಹಂತದಲ್ಲಿ ಸರಕಾರ 32 ಕೋಟಿ ರೂ. ಅನುದಾನ ಮಂಜೂರು ಮಾಡಿತ್ತು. ಅಂದಿನ ನೀರಾವರಿ ಸಚಿವ ರಮೇಶ ಜಾರಕಿಹೊಳಿ 2017-18ರಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಸದ್ದ ಅರ್ಧ ಕಾಮಗಾರಿ ಆಗಿದ್ದು, ರಾಜ್ಯ ಸರಕಾರ ಬಾಕಿ 38 ಕೋಟಿ ರೂ. ಅನುದಾನ ಬಿಡುಗಡೆ ಮಾಡುತ್ತಿಲ್ಲ, ಹಾಗಾಗಿ, ಕಾಮಗಾರಿ ಮುಂದುವರಿಯುತ್ತಿಲ್ಲ. ಸರಕಾರ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಮುಗಿಸಲು ಅನುವು ಮಾಡಿಕೊಡಬೇಕು ಎಂದು ಈ ಭಾಗದ ರೈತರು, ಸಾರ್ವಜನಿಕರು ಆಗ್ರಹಿಸಿದ್ದಾರೆ.