ಹಿಂದೀ ಪದ್ಯ ಸಾಹಿತ್ಯದ ಒಂದು ಮೇರುಕೃತಿ ಶ್ರೀರಾಮಚರಿತ ಮಾನಸ: ಕಪಿಲಾಚಾರ್ಯ ಗಲಿಗಲಿ

ಲೋಕದರ್ಶನ ವರದಿ

ಧಾರವಾಡ 26: ಹನುಮಾನ ಚಾಲೀಸಾ, ವಿನಯ ಪತ್ರಿಕಾ ಮುಂತಾದವುಗಳ ರಚನೆಯೊಂದಿಗೆ ಕೃಷ್ಣನ ಬಗ್ಗೆಯೂ ಬರೆದಿರುವ ತುಲಸೀದಾಸರ ಮತ್ತೊಂದು ಕೃತಿ  ``ಶ್ರೀರಾಮಚರಿತ ಮಾನಸ'' ನಾಮಾಂಕಿತ ತುಲಸೀ ರಾಮಾಯಣವು ಹಿಂದೀ ಪದ್ಯ ಸಾಹಿತ್ಯದ ಒಂದು ಮೇರುಕೃತಿಯಾಗಿ ಹೊರಹೊಮ್ಮಿದ್ದು ಉತ್ತರ ಭಾರತದಲ್ಲಿ ಇದೊಂದು ನಿತ್ಯ ಪಾರಾಯಣ ಗ್ರಂಥವಾಗಿ, ಜೀವನ ಗ್ರಂಥವಾಗಿ ಗೌರವಾದರ ಹೊಂದಿದೆ. ಮೂಲ ಅವಧೀ ಭಾಷೆಯಲ್ಲಿರುವ ಈ ಕೃತಿಯು ಸಾಹಿತ್ಯಕ್ಕಿಂತ ಮಿಗಿಲಾಗಿ ಆಧ್ಯಾತ್ಮಿಕ ಗ್ರಂಥವಾಗಿ ಮನ್ನಣೆ ಪಡೆದಿದೆ ಎಂದು ಪಂ. ಕಪಿಲಾಚಾರ್ಯ ಗಲಿಗಲಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಹಿತ್ಯಿಕ ಸಂಘಟನೆ ಅನ್ವೇಷಣಕೂಟವು ದಿ. 23ರಂದು ಸಾಧನಕೇರಿಯ `ಚೈತ್ರದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಆ ಕಾಲದ ದರ್ಶನಗಳ ಪ್ರಭಾವ ಮತ್ತು ರಾಮಾನುಜ ಪಂಥದ ಪ್ರಭಾವವುಳ್ಳ ತುಲಸೀದಾಸರ ಈ ಕೃತಿ ಮೂಲಕ್ಕೆ ವಿರುದ್ಧವಲ್ಲದ ಅನೇಕ ಹೊಸತನಗಳಿಂದ ಕೂಡಿದ್ದು ಇದು ಸ್ವಂತಸುಖಕ್ಕಾಗಿ ಬರೆದದ್ದೆಂಬ ಕೃತಿಕಾರರ ವಿನಯದೊಂದಿಗಿನ ಒಂದು ಧ್ವನಿಪೂರ್ಣ ಕಾವ್ಯವಾಗಿದೆ ಎಂದು ಪಂ. ಕಪಿಲಾಚಾರ್ಯ ಗಲಗಲಿಯವರು ಈ ಗ್ರಂಥವನ್ನು ಪರಿಣಾಮಕಾರಿಯಾಗಿ ಪರಿಚಯಿಸಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ವಾಂಸ ಡಾ. ಶ್ರೀರಾಮ ಭಟ್ಟರು ಮಾತನಾಡಿ ಕವಿಗೆ ವಿಶಿಷ್ಟವಾದ ಮನೋಧರ್ಮ ಮತ್ತು ಯುಗಧರ್ಮಗಳು ಈ ಕೃತಿಯ ಮೂಲಕ ದೊಡ್ಡ ಕೆಲಸ ಮಾಡಿದ್ದು ಭಕ್ತನನ್ನು ಕೇಂದ್ರವಾಗಿಟ್ಟುಕೊಂಡು ಭಕ್ತಿಯನ್ನು ನೋಡಿರುವ ತುಲಸೀದಾಸರ ಈ ಗ್ರಂಥವು ಮೌಲ್ಯಗಳ ರಾಶಿಯನ್ನೇ ಹೊಂದಿದೆ ಎಂದರು.

ಅನ್ವೇಷಣ ಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ಹರ್ಷ ಡಂಬಳ, ವೆಂಕಟೇಶ ದೇಸಾಯಿ, ಡಾ. ಎಸ್.ಕೆ. ಜೋಶಿ, ಡಾ. ಪಿ. ಬಿ. ಕಲ್ಲಾಪುರ, ಹ.ಶಿ. ಭೈರನಟ್ಟಿ, ಡಾ. ಹ. ವೆಂ. ಕಾಖಂಡಿಕಿ, 

ಬ್ರಿ. ಎಸ್.ಜಿ. ಭಾಗವತ, ಕೆ.ಎಂ. ಅಂಗಡಿ, ಜಿ. ಜಿ. ಭರಭರಿ, ಎಂ.ಟಿ. ದಳವಾಯಿ, ಎಸ್. ಗುರುನಾಥ, ಎಸ್. ಬಿ. ದ್ವಾರಪಾಲಕ, ಪ್ರೊ. ಸಿ.ಆರ್. ಜೋಶಿ, ಕೆ.ಎನ್. ಹಬ್ಬು, ಜಯತೀರ್ಥ ಜಹಗೀರದಾರ, ಶ್ರೀನಿವಾಸ ಕಿತ್ತೂರ, ರಾಜೀವ ಪಾಟೀಲ ಕುಲಕಣರ್ಿ, ತಾ. ಭ. ಚವ್ಹಾಣ, ಸದಾನಂದ ಭಟ್ಕಳ, ಡಾ. ಶಾಲಿನಿ ರಘುನಾಥ, ಡಾ. ಮಂದಾಕಿನಿ, ಪುರೋಹಿತ, ಡಾ. ಆರ್. ಲಕ್ಷ್ಮೀ, ರಾಧಿಕಾ ಕಾಖಂಡಿಕಿ. ಮುಂತಾದವರು ಉಪಸ್ಥಿತರಿದ್ದರು.