ಲೋಕದರ್ಶನ ವರದಿ
ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿ ನೇಣಿಗೆ ಶರಣು
ಲೋಕದರ್ಶನ ವರದಿ,
ಜಮಖಂಡಿ 27: 10ನೇ ತರಗತಿಯ ವಿದ್ಯಾರ್ಥಿಯೊಬ್ಬನಿಗೆ ಮನೆಯಲ್ಲಿ ಪಾಲಕರು ಸರಿಯಾಗಿ ವಿದ್ಯಾಭ್ಯಾಸವನ್ನು ಮಾಡು ಎಂದು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ತಾಲೂಕಿನ ಮೈಗೂರ ಪುನರ್ವಸತಿ ಕೇಂದ್ರದಲ್ಲಿ ವಾಸಿಸುವ 10ನೇ ತರಗತಿಯ ವಿದ್ಯಾರ್ಥಿ ಗೌತಮ ಬಸವಪ್ರಭು ಹೊಸಮನಿ (16) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪಿಸುತ್ತಿದ್ದು, ಸರಿಯಾಗಿ ವಿದ್ಯಾಭ್ಯಾಸವನ್ನು ಮಾಡಿಕೊಂಡು ಪಾಸಾಗುವಂತೆ ಮನೆಯಲ್ಲಿ ಪಾಲಕರು ಬುದ್ಧಿವಾದವನ್ನು ಹೇಳಿದ್ದಾರೆ. ಆದರೆ ವಿದ್ಯಾರ್ಥಿ ಗೌತಮನಿಗೆ ವಿದ್ಯಾಭ್ಯಾಸ ಸರಿಯಾಗಿ ತಲೆಗೆ ಹತ್ತುತ್ತಿಲ್ಲ ಹಾಗೂ ವಿದ್ಯಾಭ್ಯಾಸದ ಹೊರೆಯನ್ನು ತಡೆದುಕೊಳ್ಳದೆ ಇರುವ ಕಾರಣ ಬೇಸರ ಮಾಡಿಕೊಂಡು ತಾನು ಓದಿಕೊಳ್ಳುವ ಆರ್,ಸಿ, ಸೆಂಟರ್‌ನಲ್ಲಿ ಇರುವ ಯಾರು ಇಲ್ಲದ ಪಶುಚಿಕಿತ್ಸಾಲಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಪೊಲೀಸರು ಮಾಹಿತಿಯನ್ನು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಸಿಪಿಐ ಮಲ್ಲಪ್ಪ ಮಡ್ಡಿ, ಗ್ರಾಮೀಣ ಠಾಣಿಯ ಪಿಎಸ್‌ಐ ಪೂಜಾರಿ, ಎಎಸ್‌ಐ ಬೀಳಗಿ, ಹೆಡ್‌ಕಾನ್‌ಸ್ಟೇಬಲ್ ಜಂಬಗಿ, ಪೋಲಿಸ್ ಸಿಬ್ಬಂದಿ ಪರೀಟ ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ. ಮನೆಯ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟುವಂತೆ ಆಗಿದೆ.