ಸರ್ಕಾರಿ ಶಾಲೆಯಲ್ಲಿ ಮೂಲಭೂತ ಸೌಲಭ್ಯ ಮರಿಚಿಕೆ ;ಮಕ್ಕಳ ಕಲಿಕೆಗೆ ಆಶ್ರಯವಾದ ಮರ

A basic facility in a government school is a tree; a tree as a shelter for children's learning

ಸರ್ಕಾರಿ ಶಾಲೆಯಲ್ಲಿ ಮೂಲಭೂತ ಸೌಲಭ್ಯ ಮರಿಚಿಕೆ ;ಮಕ್ಕಳ ಕಲಿಕೆಗೆ  ಆಶ್ರಯವಾದ ಮರ  

ಕಂಪ್ಲಿ 04: ಸ.ಹಿ.ಪ್ರಾ ಶಾಲೆಯಲ್ಲಿ ಕೊಠಡಿ, ಆಟದ ಮೈದಾನ, ಸ್ಥಳದ ಸಮಸ್ಯೆಯಿಂದ ಗಿಡದ ಆಶ್ರಯದಲ್ಲಿ ಮಕ್ಕಳು ಪಾಠ ಕೇಳಬೇಕಾಗಿದೆ. ಶಾಲೆಗೆ ಮೂಲಭೂತ ಸೌಕರ್ಯಗಳ ಕೊರತೆ  ತಾಂಡವಾಡುತ್ತಿದ್ದು, ಇದರಿಂದ ಮಕ್ಕಳ ಕಲಿಕೆಗೆ ಗ್ರಹಣ ಹಿಡಿದಂತಾಗಿದೆ. ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೌಲಭ್ಯಗಳ ಮರಿಚಿಕೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ಕಂಡು ಬರುತ್ತಿದೆ. ಹಂಪಿ ಸಾವಿರ ದೇವರ ಮಹಂತರ ಮಠದ ಶ್ರೀಗಳ ಕತೃಗದ್ದುಗೆ ಆವರಣದಲ್ಲಿರುವ ಆರು ಕೊಠಡಿಗಳಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ನಡೆಸಲಾಗುತ್ತಿದೆ. ಶಾಲೆಯಲ್ಲಿ 1 ರಿಂದ 7 ನೇ ತರಗತಿವರೆಗೆ 226 ವಿದ್ಯಾರ್ಥಿಗಳಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.  

ಇಲ್ಲಿನ ಮೂರು ಕೊಠಡಿಗಳಲ್ಲಿ ಮಕ್ಕಳು ಕಲಿಕೆ ಮಾಡುತ್ತಿದ್ದರೂ, ಮೇಲ್ಭಾಗದ ಮೂರು ಕೊಠಡಿಗೆ ಮೆಟ್ಟಲು ಇಲ್ಲದ ಪರಿಣಾಮ ಮಕ್ಕಳ ಕಲಿಕೆಗೆ ಅಡಚಣೆಯಾಗಿದೆ. ಹೀಗೆ ನಾನಾ ಸಮಸ್ಯೆಗಳ ನಡುವೆ ವಿದ್ಯಾಭ್ಯಾಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.  

ಗಿಡದ ಆಶ್ರಯ : ಇಲ್ಲಿನ ಶಾಲೆಗೆ ಕೊಠಡಿಗಳ ಸಮಸ್ಯೆ ಎದುರಾಗಿದ್ದು, ಮಕ್ಕಳು ಗಿಡದ ಆಶ್ರಯದಲ್ಲಿ ಕಲಿಬೇಕಾದ ಸ್ಥಿತಿ ಮಕ್ಕಳದ್ದಾಗಿದೆ. ಈಗ ಮರದ ನೆರಳಿನಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಮಳೆಗಾಲದಲ್ಲಿ ಮಕ್ಕಳ ಕಲಿಕೆ ಅಯೋಮಯವಾಗಬಹುದು. ಮಳೆಯ ದಿನಗಳಲ್ಲಿ ಪಾಠ, ಪ್ರವಚನವನ್ನು ಇರುವ ಕೊಠಡಿಯಲ್ಲೇ ಮಾಡಬೇಕಾದ ಸ್ಥಿತಿ ಇಲ್ಲಿನ ಶಾಲೆಯದ್ದಾಗಿದೆ. ಸರ್ಕಾರ ಮಕ್ಕಳ ಕಲಿಕೆಗೆ ಸಾಕಷ್ಟು ಅನುದಾನ ಮತ್ತು ಯೋಜನೆಗಳನ್ನು ನೀಡುತ್ತಾದರೂ, ಇಲ್ಲಿನ ಶಾಲೆಯಲ್ಲಿ ಕೆಲವೊಂದು ಸೌಲಭ್ಯದ ಸೌಭಾಗ್ಯ ಇಲ್ಲದಂತಾಗಿದೆ. ಇಲ್ಲಿ ತಾಂಡವಾಡುತ್ತಿರುವ ಸಮಸ್ಯೆಗಳಿಗೆ ಮುಕ್ತಿ ಇಲ್ಲದಂತಾಗಿದೆ.  

ಸ್ಥಳದ ಸಮಸ್ಯೆ : ಇಲ್ಲಿನ ಮಠದ ಆವರಣದಲ್ಲಿರುವ ಜಾಗದಲ್ಲೇ ಇರುವ ಕೊಠಡಿಗಳಲ್ಲಿ ಶಾಲೆ ನಡೆಸಲಾಗುತ್ತಿದೆ. ಸ್ಥಳದ ಸಮಸ್ಯೆಯಿಂದ ಮಕ್ಕಳ ಶಿಕ್ಷಣ ಕುಂಠಿತವಾಗುತ್ತಿದೆ. ಆದ್ದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಮಕ್ಕಳ ಶೈಕ್ಷಣಿಕ ಮಟ್ಟದ ಅಭಿವೃದ್ಧಿಗಾಗಿ ಸರ್ಕಾರಿ ಜಾಗ ಇದ್ದರೆ ಗುರುತಿಸಿ ಒದಗಿಸಿ, ಕಲಿಕೆಗೆ ಅನುವು ಮಾಡಿಕೊಡಬೇಕೆಂಬುದು ಪೋಷಕರ ಒತ್ತಾಸೆಯಾಗಿದೆ. ಶಿಕ್ಷಕರ, ಮಕ್ಕಳ, ಕೊಠಡಿ ಸೇರಿದಂತೆ ನಾನಾ ಸೌಲಭ್ಯಗಳ ಕೊರತೆಯಿಂದ ಬಹಳಷ್ಟು ಸರ್ಕಾರಿ ಶಾಲೆಗಳನ್ನು ಮುಚ್ಚಿರುವುದು ಗೊತ್ತಿರುವೆ. ಆದರೆ, ಈಗಿರುವ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ಮಾಡಬೇಕಾಗಿದೆ. ಇಲ್ಲಿನ ಶಾಲೆಯಲ್ಲಿ ಮಕ್ಕಳಿದ್ದರೂ ಕೊಠಡಿ, ಆಟದ ಮೈದಾನ, ಕೆಲ ಸರ್ಕಾರಿ ಶಿಕ್ಷಕರ ಕೊರತೆಯಲ್ಲಿ ಬಳಲುವ ಜತೆಗೆ ಮಕ್ಕಳಿಗೆ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ವಿಫಲವಾದಂತೆ ಕಾಣುತ್ತಿದೆ. ಇಲ್ಲಿನ ಶಾಲೆಯ ಮಕ್ಕಳ ಕಲಿಕೆಯ ಅಭಿವೃದ್ಧಿ ದೃಷ್ಠಿಯಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕೆಂದು ಪ್ರತಿಯೊಬ್ಬರ ಆಶಯವಾಗಿದೆ.