ಹೆಬ್ಬಳ್ಳಿ ಶಿವಾನಂದಮಠದ ಲಿಂಗೈಕ್ಯ ಶ್ರೀಗಳ ಪುಣ್ಯಾರಾಧನೆ 10 ದಿನಗಳ ಆಧ್ಯಾತ್ಮ ಚಿಂತನ ಸಮಾವೇಶ

A 10-day spiritual meditation conference dedicated to Sri Lingaikya of Hebballi Sivananda Math

ಹೆಬ್ಬಳ್ಳಿ ಶಿವಾನಂದಮಠದ ಲಿಂಗೈಕ್ಯ ಶ್ರೀಗಳ ಪುಣ್ಯಾರಾಧನೆ 10 ದಿನಗಳ ಆಧ್ಯಾತ್ಮ ಚಿಂತನ ಸಮಾವೇಶ

ಧಾರವಾಡ 18: ತಾಲೂಕಿನ ಹೆಬ್ಬಳ್ಳಿ ಶಿವಾನಂದಮಠದ ಲಿಂಗೈಕ್ಯ ಶ್ರೀವಾಸುದೇವ ಸ್ವಾಮೀಜಿ ಹಾಗೂ ಲಿಂಗೈಕ್ಯ ಶ್ರೀಬಸವರಾಜ ಸ್ವಾಮೀಜಿ ಪುಣ್ಯಾರಾಧನೆ ನಿಮಿತ್ತ 10 ದಿನಗಳ ಆಧ್ಯಾತ್ಮ ಚಿಂತನ ಸಮಾವೇಶ ಸೋಮವಾರ ಜ.20ರಂದು ಹೆಬ್ಬಳ್ಳಿಯಲ್ಲಿ ಆರಂಭಗೊಳ್ಳಲಿದೆ.  

ಹೆಬ್ಬಳ್ಳಿ ಶಿವಾನಂದಮಠದ ಪ್ರಸ್ತುತ ಶ್ರೀಗಳಾದ ಬ್ರಹ್ಮಾನಂದ ಸ್ವಾಮೀಜಿ ಹಾಗೂ ಹಳಕಟ್ಟಿ ಬ್ರಹ್ಮವಿದ್ಯಾಶ್ರಮದ ನಿಜಗುಣ ಸ್ವಾಮೀಜಿ ನೇತೃತ್ವದಲ್ಲ್ಲಿ ಗದಗ ಶಿವಾನಂದಮಠದ ಪೀಠಾಧಿಪತಿ ಜಗದ್ಗುರು ಅಭಿನವ ಶಿವಾನಂದ ಸ್ವಾಮೀಜಿ ಸೋಮವಾರ ಮುಂಜಾನೆ 8 ಗಂಟೆಗೆ ಪ್ರಣವ ಧ್ವಜಾರೋಹಣ ಮಾಡಿ ಈ ಧರ್ಮ ಸಮಾವೇಶವನ್ನು ಉದ್ಘಾಟಿಸುವರು. ಇನಾಂಹನಮನೇರಿ ಶಾಂತಮಠದ ಶಿವಾನಂದ ಸ್ವಾಮೀಜಿ ಹಾಗೂ ಬೆಳಗಾವಿ ಸಮೀಪದ ಹೊನ್ನಿಹಾಳ ಸಂತೋಷಕುಮಾರ ಶಾಸ್ತ್ರೀಗಳು ಜ.20 ರಿಂದ 30 ರವರೆಗೆ ನಿತ್ಯ ಪ್ರಾತಃಕಾಲ 8 ರಿಂದ 10 ಗಂಟೆಯವೆರೆಗೆ ಹಾಗೂ ಸಂಜೆ 7 ರಿಂದ ರಾತ್ರಿ 10 ಗಂಟೆಯವರೆಗೆ ಕ್ರಮವಾಗಿ ಪ್ರವಚನ-ಕೀರ್ತನ ನೀಡುವರು.  

ಉಪದೇಶಾಮೃತ : ಹೆಬ್ಬಳ್ಳಿ ಚೈತನ್ಯಾಶ್ರಮದ ದತ್ತಾವಧೂತ ಶ್ರೀಗಳು, ಯೋಗಾನಂದ ಸ್ವಾಮೀಜಿ, ಶರಣೆ ಅನಸಮ್ಮತಾಯಿ ಹಾಗೂ ಶರಣೆ ಬಸಮ್ಮತಾಯಿ ಜೊತೆಗೆ ಕಾಡರಕೊಪ್ಪ, ಇಬ್ರಾಹಿಂಪೂರ, ನಿರ್ವಾಣಹಟ್ಟಿ, ಕುಸೂಗಲ್ಲ, ರನ್ನತಿಮ್ಮಾಪೂರ, ದಾದನಟ್ಟಿ, ಲೋಕಾಪೂರ, ಬೈಲಹೊಂಗಲ, ಹರಳಕಟ್ಟಿ, ಸಂಗಳ, ಪರಮಾನಂದವಾಡಿ, ಹಳಕಟ್ಟಿ,  ಗದಗ ನಗರದ ವಿವಿಧ ಅದ್ವೈತಮಠಗಳ ಸ್ವಾಮೀಜಿಯವರು, ಶಿವಶರಣೆಯರು, ವಿವಿಧ ಸಾಧಕ ಶ್ರೀಗಳು 10 ದಿನಗಳ ಸಮಾವೇಶದಲ್ಲಿ ಪಾಲ್ಗೊಂಡು ಉಪದೇಶಾಮೃತ ನೀಡುವರು.  

ಮಠದ ರಥೋತ್ಸವ : ಹೆಬ್ಬಳ್ಳಿ ಶಿವಾನಂದಮಠದ ಪ್ರಸ್ತುತ ಶ್ರೀಗಳಾದ ಬ್ರಹ್ಮಾನಂದ ಸ್ವಾಮೀಜಿ ಸೇರಿದಂತೆ ನಾಡಿನ ಅನೇಕ ಭಾಗಗಳ ಹರ-ಗುರು ಚರಮೂರ್ತಿಗಳ ನೇತೃತ್ವದಲ್ಲಿ ಜ.30 ರಂದು ಸಂಜೆ 5 ಗಂಟೆಗೆ ವಿವಿಧ ಜನಪದ ವಾದ್ಯ-ಮೇಳಗಳೊಂದಿಗೆ ರಥೋತ್ಸವ ಜರುಗುವುದು. ಅದೇ ದಿನ ಪ್ರಾತಃಕಾಲದಲ್ಲಿ ಲಿಂಗೈಕ್ಯ ಶ್ರೀವಾಸುದೇವ ಸ್ವಾಮೀಜಿ ಹಾಗೂ ಲಿಂಗೈಕ್ಯ ಶ್ರೀಬಸವರಾಜ ಸ್ವಾಮೀಜಿಯವರ ಗದ್ದುಗೆಗಳಿಗೆ ರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ ಜರುಗುದು. ಅಪರಾಹ್ನ ಪ್ರಸಾದ ವಿತರಣೆ ನಡೆಯುವುದು. ಅಮ್ಮಿನಬಾವಿಯ ರುದ್ರಮ್ಮ ಬಸಯ್ಯ ಗುಡಿ ಸೇರಿದಂತೆ ಅನೇಕ ಸೇವಾಕರ್ತರನ್ನು ಶ್ರೀಮಠದ ಪರವಾಗಿ ಗೌರವಿಸಲಾಗುವುದು. ಕರೀಕಟ್ಟಿಯ ರುದ್ರ​‍್ಪ ಹೂಗಾರ, ಮಲ್ಲಿಕಾರ್ಜುನ ತೆಗ್ಗಿನಕೇರಿ,  ಹೊಳೆಹೊಸೂರಿನ ಗಂಗಾಧರ ಕುಂಬಾರ ಹಾಗೂ ಸಂಗಡಿಗರಿಂದ ನಿತ್ಯವೂ ಸಂಗೀತಸೇವೆ ನಡೆಯಲಿದೆ ಎಂದು ಸಮಾವೇಶದ ಗೌರವ ಸಂಚಾಲಕ ಎಸ್‌. ಪಿ. ಹೂಗಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.