ನಿಜಶರಣ ಅಂಬಿಗರ ಚೌಡಯ್ಯ ನವರ 905ನೇ ಜಯಂತೋತ್ಸವ
ಬಳ್ಳಾರಿ,21: 12ನೇ ಶತಮಾನದ ಬಸವಣ್ಣನವರ ಸಮಕಾಲಿನರಾಗಿದ್ದ, ನಿಜಶರಣ ಅಂಬಿಗರ ಚೌಡಯ್ಯ ನವರ 905ನೇ ಜಯಂತೋತ್ಸವವನ್ನು ಇಂದು ವಿಜಯನಗರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕರಾದ ಬಿ.ಕೊಟ್ರೇಶ್ ಮುಖ್ಯ ಉಪನ್ಯಾಸ ನೀಡಿ ಚೌಡಯ್ಯನವರು ಶಿವಶರಣ ಹಾಗೂ ವಚನಕಾರರು ಉಳಿದೆಲ್ಲಾ ವಚನಕಾರರಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದು. ವೃತ್ತಿಯಿಂದ ಅಂಬಿಗ ಪ್ರವೃತ್ತಿಯಲ್ಲಿ ಅನುಭಾವಿ. ನೇರ ನಿರ್ಭೀತ ನುಡಿಗಳಿಂದ ವಚನಗಳನ್ನು ಬರೆದಿದ್ದಾರೆ. ಚೌಡಯ್ಯನವರಲ್ಲಿ ಬಸವಣ್ಣನವರ ವೈಚಾರಿಕತೆ, ಅಲ್ಲಮಪ್ರಭುವಿನ ಅನುಭಾವಿಕ ನಿಲುವು, ಬೆರೆತು ವಿಶಿಷ್ಟ ಅನುಭವ ಮತ್ತು ಅನುಭಾವಗಳೆರಡು ಇವೆ. ಆ ಮೂಲಕ ಸಮ ಸಮಾಜ ನಿರ್ಮಾಣವಾಗಬೇಕೆಂದು ಚೌಡಯ್ಯನವರು ಬಯಸಿದ್ದರು. 12ನೇ ಶತಮಾನದ ಸಮಾಜದಲ್ಲಿದ್ದ ತಾರತಮ್ಯ ನೀತಿಯ ವಿರುದ್ದ ಹೋರಾಡಿ ಹೊಸ ವ್ಯವಸ್ಥೆಯ ಸಮಸಮಾಜಕ್ಕೆ ಸೈದ್ದಾಂತಿಕ ನೆಲೆಗಟ್ಟನ್ನು ಒದಗಿಸುವುದರಲ್ಲಿ ಪ್ರಮುಖ ಪಾತ್ರವಹಿಸಿದರು. ಅನುಭವ ಮಂಟಪದಲ್ಲಿ ಯಾರ ಮುಲಾಜಿಗೂ ಒಳಗಾಗದೆ ತನ್ನ ಅಭಿಪ್ರಾಯವನ್ನು ನೇರವಾಗಿ ನಿರ್ಭಯವಾಗಿ ವ್ಯಕ್ತಪಡಿಸಿದರು. ಕಾಯಕ ಜೀವಿಗಳಾದ ವಚನಕಾರರು ಜಾತಿ ವ್ಯವಸ್ಥೆ, ಪುರೋಹಿತ ಶಾಹಿ, ಉಳ್ಳವರು ನಡೆಸುತ್ತಿದ್ದ ಶೋಷಣೆಯನ್ನು ವಿರೋಧಿಸಿ ಎಲ್ಲಾ ಅಸಮಾನತೆ ತೊಲಗಿ, ಸಮಾನತೆಯ ಸಮಾಜ ನಿರ್ಮಾಣವಾಗಬೇಕೆಂಬುದು ಚೌಡಯ್ಯನವರ ಆಶಯವಾಗಿತ್ತು ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ಅಪರ ಜಿಲ್ಲಾಧಿಕಾರಿಗಳಾದ ಈ.ಬಾಲಕೃಷ್ಣಪ್ಪ, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಸಿದ್ದಲಿಂಗೇಶ ರಂಗಣ್ಣನವರ್, ಯೋಜನಾ ನಿರ್ದೇಶಕರಾದ ಅನ್ನದಾನಸ್ವಾಮಿ, ಹಾಗೂ ಗಂಗಾಮತ ಸಮಾಜದ ಜಿಲ್ಲಾಧ್ಯಕ್ಷರಾದ ಅಂಬಾಡಿ ನಾಗರಾಜ, ಸಮಾಜದ ಮುಖಂಡರಾದ ವೈ.ಯಮುನೇಶ್, ಎಸ್.ಗಾಳೆಪ್ಪ, ಬಾರಕೀರ ನಾಗರಾಜ, ಕೂಡ್ಲಿಗಿ ಪಕ್ಕೀರ್ಪ, ಕಂಪ್ಲಿ ಹನುಮಂತಪ್ಪ, ಮಡ್ಡಿ ಸಣ್ಣೆಕ್ಕೆಪ್ಪ, ಬೆಳಗೋಡು ಹುಲುಗಪ್ಪ, ಮಡ್ಡಿ ಹನುಮಂತಪ್ಪ, ಕಂಪ್ಲಿ ಅಶೋಕ, ಶ್ರೀನಿವಾಸ್ ಕಬ್ಬೇರ್, ನಾರಾಯಣಪ್ಪ, ಅಂಬಿಗರ ಮಂಜುನಾಥ, ಡಾ.ಲಕ್ಷ್ಮಣ ಕರಿಭೀಮಣ್ಣನವರ್, ಮಾರುತಿ, ಭುವನಹಳ್ಳಿ ಯರಿಸ್ವಾಮಿ, ಗೋವಿಂದಪ್ಪ, ಮುಂತಾದವರು ಉಪಸ್ಥಿತರಿದ್ದರು.