ಮಾರ್ಚ 9 ರಂದು ಧಾರವಾಡದಲ್ಲಿ ಉದ್ಯೋಗ ಮೇಳ 90 ಕೈಗಾರಿಕೆ,ಮಾನವ ಸಂಪನ್ಮೂಲ ಸಂಸ್ಥೆಗಳು ಭಾಗಿ

90 industrial, human resource organizations to participate in job fair in Dharwad on March 9

ಮಾರ್ಚ 9 ರಂದು ಧಾರವಾಡದಲ್ಲಿ ಉದ್ಯೋಗ ಮೇಳ 90 ಕೈಗಾರಿಕೆ,ಮಾನವ ಸಂಪನ್ಮೂಲ ಸಂಸ್ಥೆಗಳು ಭಾಗಿ

ಧಾರವಾಡ 06: ಸರಕಾರದ ನಿರ್ದೇಶನದಂತೆ ಮಾರ್ಚ 9 ರಂದು ಧಾರವಾಡ ನಗರದ ಕೆಸಿಡಿ ಆವರಣದಲ್ಲಿ ಕೌಶಲ್ಯ ರೋಜ್ ಗಾರ - ಉದ್ಯೋಗಮೇಳವನ್ನು ಹಮ್ಮಿಕೋಳ್ಳಲಾಗಿದ್ದು, ಅಗತ್ಯ ಸಿದ್ಧತೆಗಳು ಆರಂಭವಾಗಿವೆ ಎಂದು ಜಿಲ್ಲಾ ಕೌಶಲ್ಯ ಮಿಷನ್ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.ಅವರು ಇಂದು ಮಧ್ಯಾಹ್ನ  ಕೆಸಿಡಿ ಆವರಣಕ್ಕೆ ಭೇಟಿ ನೀಡಿ, ಉದ್ಯೋಗಮೇಳದ ಸಿದ್ದತೆಗಳನ್ನು ಪರಿಶಿಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮಾಹಿತಿ ನೀಡಿದರು.ಉದ್ಯೋಗಮೇಳದ ನೋಂದಣಿ ಪ್ರಕ್ರಿಯೆ ಫೆಬ್ರವರಿ 25 ರಿಂದ ಆರಂಭಿಸಲಾಗಿದೆ. ಇಲ್ಲಿಯವರೆಗೆ ನಾಲ್ಕು ಸಾವಿರ ಜನ ಉದ್ಯೋಗ ಆಕಾಂಕ್ಷಿಗಳು ಆನ್ ಲೈನ್ ನೋಂದಣಿ ಪಡೆದಿದ್ದಾರೆ. ಆನ್ ಲೈನ್ ನೋಂದಣಿಗೆ ಮಾರ್ಚ 7 ಕೊನೆಯ ದಿನವಾಗಿದೆ. ಆದರೂ ಮಾರ್ಚ 9 ರಂದು ಸ್ಥಳದಲ್ಲಿ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡು ಸಂದರ್ಶನಕ್ಕೆ ಹಾಜರಾಗಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಉದ್ಯೋಗ ನೀಡುವ ಕಂಪನಿಗಳು ತಮ್ಮ ಬೇಡಿಕೆಗಳಿಗೆ ಅನುಗುಣವಾಗಿ ಇವತ್ತಿನವರೆಗೆ 65 ಕೈಗಾರಿಕೆಗಳು, 25 ಮಾನವ ಸಂಪನ್ಮೂಲ ಸಂಸ್ಥೆಗಳು ಉದ್ಯೋಗಮೇಳದಲ್ಲಿ ಭಾಗಿ ಆಗಲು ನೋಂದಾಯಿಸಿಕೊಂಡಿದ್ದು, ವಿವಿಧ ಕೌಶಲ್ಯ ಹಾಗೂ ಶೈಕ್ಷಣಿಕ ಹಿನ್ನಲೆಯುಳ್ಳ ಸುಮಾರು 3000  ಜನ ಉದ್ಯೋಗಿಗಳ ಅಗತ್ಯವಿದ್ದು, ಉದ್ಯೋಗ ನೀಡುವ ಭರವಸೆ ನೀಡಿವೆ ಎಂದು ಅವರು ಹೇಳಿದರು.ಮಾರ್ಚ 9 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟಯವರೆಗೆ ಉದ್ಯೋಗ ಮೇಳ ಮಾಡುವುದಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಇಲ್ಲಿ ಬರುವ ವಿದ್ಯಾರ್ಥಿ ವಿದ್ಯಾರ್ಥಿನೀಯರಿಗೆ ಅಗತ್ಯವಿರುವ  ಎಲ್ಲ ಅನುಕೂಲಗಳನ್ನು ಮಾಡಿದ್ದೇವೆ. ಕೆಸಿಡಿ ಪ್ರವಾಸೋಧ್ಯಮ ವಿಭಾಗ, ಡಾ.ವಿ.ಕೃ.ಗೋಕಾಕ ಗ್ರಂಥಾಲಯ ಸೇರಿದಂತೆ ಕಾಲೇಜಿನ ವಿವಿದೆಡೆ ಉದ್ಯೋಗ ಆಕಾಂಕ್ಷಿಗಳ ಸಂದರ್ಶನಕ್ಕೆ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಸಂದರ್ಶನಕ್ಕಾಗಿ ಐಟಿಐ, ಡಿಪ್ಲೋಮಾ, ಎಸ್ ಎಸ್ ಎಲ್ ಸಿ, ಪಿಯುಸಿ ಮಾಡಿದವರಿಗೆ ಪ್ರತ್ಯೇಕ ಕೊಠಡಿ ಮತ್ತು ಇಂಜಿನಿಯರಿಂಗ್ ಮತ್ತು ಸ್ನಾತಕೋತ್ತರ ಪದವಿ ಮಾಡಿದವರಿಗೆ ಪ್ರತ್ಯೇಕ ಕೊಠಡಿ ರೂಪಿಸಲಾಗುತ್ತಿದೆ. ಹಾಗೂ  ವಿಕಲಚೇತನರಿಗೆ ಪ್ರತ್ಯೇಕವಾಗಿ  ಕೊಠಡಿಗಳನ್ನು ಮಾಡಿದ್ದೇವೆ.  ಉದ್ಯೋಗ ಬಯಸಿ ಬರುವ ಯುವಸಮುದಾಯಕ್ಕೆ ಸರಿಯಾದ ಮಾಹಿತಿ, ಮಾರ್ಗದರ್ಶನ  ನೀಡಲು ಸುಮಾರು 20 ರಿಂದ 25 ಹೆಲ್ಪ್‌ ಡೆಸ್ಕ್‌ ತೆರೆಯಲಾಗುತ್ತದೆ. ಸಂದರ್ಶನ ಸಮಯದಲ್ಲಿ ಅಗತ್ಯ ಮಾಹಿತಿ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಕೆಲವು ಕೈಗಾರಿಕೆಗಳು, ಗಾರ್ಮೆಂಟ್ಸ್‌ ಇಂಡಸ್ಟ್ರಿಯಲ್ ದವರು ಉದ್ಯೋಗ ಮೇಳದಲ್ಲಿ ಇರುವುದರಿಂದ ಬೇರೆ ಬೇರೆ ವಿದ್ಯಾರ್ಹತೆ ಹೊಂದಿದವರಿಗೆ ಅವಕಾಶ ಇರುತ್ತದೆ. ಕಂಪನಿಯವರು ವಿದ್ಯಾರ್ಥಿಗಳಿಗೆ ಸಂವಾದ, ಕೌನ್ಸಿಲಿಂಗ್ ದಲ್ಲಿ ಹುದ್ದೆ, ವೇತನ ಮತ್ತು ಇತರೆ ವಿಷಯದ ಕುರಿತು ಮಾಹಿತಿ ನೀಡುತ್ತಾರೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.ಉದ್ಯೋಗ ಮೇಳದ ಯಶಸ್ವಿ ಆಯೋಜನೆಗಾಗಿ ವಿವಿಧ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ.  ನೂರು ಜನ ಸ್ವಯಂಸೇವಕರನ್ನು  ಸಹ ನೇಮಿಸಲಾಗುತ್ತದೆ.ಕುಡಿಯುವ ನೀರು, ಶೌಚಾಲಯ, ವೇಟಿಂಗ್ ಸ್ಥಳ, ಎಲ್ಲ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಉದ್ಯೋಗಮೇಳದ ಶಿಸ್ತುಬದ್ದ ಸಂಘಟಿಸಲು ಉಪವಿಭಾಗಾಧಿಕಾರಿಗಳನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದ್ದು, ಜಿಲ್ಲಾ ಕೌಶಲ್ಯ ಅಧಿಕಾರಿ, ಜಿ.ಪಂ.ಯೋಜನಾ ನಿರ್ದೇಶಕರು ಸೇರಿದಂತೆ ಇತರ ಅಧಿಕಾರಿಗಳು ಉದ್ಯೋಗಮೇಳದ ಸಿದ್ದತೆ ಮಾಡುತ್ತಿದ್ದಾರೆ. ಉದ್ಯೋಗ ಮೇಳದಲ್ಲಿ ಪೇ ಆಧಾರಿತ ಉಪಹಾರ, ಊಟದ ಸೌಲಭ್ಯವಿರಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಜಿ.ಪಂ.ಸಿಇಓ ಭುವನೇಶ ಪಾಟೀಲ ಅವರು ಮಾತನಾಡಿ, ಉದ್ಯೋಗಮೇಳಕ್ಕೆ ಬರುವ ಎಲ್ಲ ಉದ್ಯೋಗ ಆಕಾಂಕ್ಷಿಗಳಿಗೆ ಸಮಗ್ರ ಮಾಹಿತಿ ಸೀಗುವಂತೆ ಮಾಹಿತಿ ಫಲಕ ಹಾಗೂ ಧ್ವನಿವರ್ಧಕದ ಮೂಲಕ ಅನೌನ್ಸಮೆಂಟ್ ಮಾಡಲಾಗುತ್ತದೆ. ಕೈಗಾರಿಕೆಗಳ ಬೇಡಿಕೆಗೆ ಅನುಗುಣವಾಗಿ ಉದ್ಯೋಗಾಕಾಂಕ್ಷಿಗಳ ಸಂದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.ಮಹಾನಗರ ಪೊಲೀಸ್ ಆಯುಕ್ತ ಎನ್‌.ಶಶಿಕುಮಾರ ಅವರು ಮಾತನಾಡಿ, ಉದ್ಯೋಗಮೇಳಕ್ಕೆ ಆಗಿಮಿಸುವ ಪ್ರತಿಯೊಬ್ಬರಿಗೂ ಯಾವುದೇ ತೊಂದರೆ ಆಗದಂತೆ ಸಂಚಾರ ಮಾರ್ಗ, ಪ್ರತ್ಯೇಕವಾಗಿ ವಾಹನಗಳ ನಿಲುಗಡೆಗೆ ಸ್ಥಳ ಗುರುತಿಸಲಾಗಿದೆ. ಕೆಸಿಡಿ ಮುಖ್ಯದ್ವಾರದ ಹತ್ತಿರದ ಮೈದಾನದಲ್ಲಿ ವಾಹನ ಪಾರ್ಕಿಂಗ್ ಗೆ ಸ್ಥಳ ನಿಗದಿಗೊಳಿಸಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಉಪ ಪೊಲೀಸ್ ಆಯುಕ್ತ ರವೀಶ ಸಿ.ಆರ್, ಸಹಾಯಕ ಪೊಲೀಸ ಆಯುಕ್ತ ಪ್ರಶಾಂತ ಸಿದ್ದನಗೌಡರ, ಧಾರವಾಡ ತಹಶಿಲ್ದಾರ ಡಿ.ಎಚ್‌.ಹೂಗಾರ ಜಿ.ಪಂ.ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನವರ, ಜಿಲ್ಲಾ ಕೌಶಲ್ಯಭಿವೃದ್ಧಿ ಅಧಿಕಾರಿ ರವೀಂದ್ರ ದ್ಯಾಬೇರಿ, ಕೆಸಿಡಿ ಪ್ರಾಚಾರ್ಯ ಡಾ.ಡಿ.ಬಿ.ಕರಡೋಣಿ, ಪ್ರವಾಸೋಧ್ಯಮ ವಿಭಾಗದ ಸಂಯೋಜಕ ಡಾ.ಜಗದೀಶ ಕಿವಡಣ್ಣವರ, ಆರ್‌.ಐ ಗುರು ಸುಣಗಾರ ಸೇರಿದಂತೆ ಇತರ ಅಧಿಕಾರಿಗಳು ಇದ್ದರು’