ದಾಂಡೇಲಿಯಲ್ಲಿ 90 ದಿನಗಳು ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ ಅಭಿಯಾನ: ನ್ಯಾ. ಸೊಗಲದ

ದಾಂಡೇಲಿಯಲ್ಲಿ 90 ದಿನಗಳು ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ ಅಭಿಯಾನ: ನ್ಯಾ. ಸೊಗಲದ 90 days of mediation campaign for the nation in Dandeli: Justice Sogalada

 ಕಾರವಾರ  31: ಜನೇವರಿ 2 ರಿಂದ ದಾಂಡೇಲಿಯಲ್ಲಿ 90 ದಿನಗಳವರೆಗೆ ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ ಅಭಿಯಾನ ಆರಂಭವಾಗಲಿದ್ದು, ಪ್ರಯೋಜನ ಪಡೆಯಲು ದಾಂಡೇಲಿ ಜೆಎಂಎಫ್‌ಸಿ ನ್ಯಾಯಾಧೀಶೆ ತೇಜಸ್ವಿನಿ ಸೊಗಲದ ಸೂಚಿಸಿದ್ದಾರೆ. 

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಉತ್ತರ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ರಾಜ್ಯದಾದ್ಯಂತ 90 ದಿನಗಳು, ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಾಂಡೇಲಿ ನ್ಯಾಯಾಲಯದ ನ್ಯಾಯಾಧೀಶೆ  ಮತ್ತು  ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ  ತೇಜಸ್ವಿನಿ ಸೊಗಲದ ತಿಳಿಸಿದ್ದಾರೆ. 

ಅವರು ಈ ಕುರಿತು ಪ್ರಕಟಣೆ ನೀಡಿ ತಿಳಿಸಿದ್ದು, 2026ರ ಜನವರಿ 2 ರಿಂದ 90 ದಿನಗಳ ಕಾಲ ಆಯೋಜಿಸಿರುವ ಈ ಅಭಿಯಾನದಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣವನ್ನು ಮಧ್ಯಸ್ಥಿಕೆ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ತಕ್ಷಣ ಪರಿಹಾರ ಪಡೆದುಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ ಎಂದು ತಿಳಿಸಿದ್ದಾರೆ.         

ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಕಾರ್ಮಿಕ ವಿವಾದಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಷೇಮುಗಳು, ಭೂ ಸ್ವಾಧೀನ ಪ್ರಕರಣಗಳು, ಚೆಕ್ ಅಮಾನ್ಯ ದ ಪ್ರಕರಣಗಳು, ರಾಜಿಯಾಗಬಲ್ಲ ಸಿವಿಲ್ ಮತ್ತು ಇತರೆ ಪ್ರಕರಣಗಳು, ವೈವಾಹಿಕ, ಕುಟುಂಬ ನ್ಯಾಯಾಲಯದ ಪ್ರಕರಣಗಳು,( ವಿಚ್ಚೇದನ ಹೊರತು ಪಡಿಸಿ) ನ್ಯಾಯಾಲಯಗಳಲ್ಲಿ ಉಭಯ ಪಕ್ಷಗಾರರು ರಾಜಿ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ಮಾಡಲಾಗುವದು. ಇಬ್ಬರಿಗೂ ಒಪ್ಪಿಗೆಯಾಗುವಂತೆ ಪ್ರಕರಣವು ತೀರ್ಮಾನವಾಗುವುದರಿಂದ ಬಾಂಧವ್ಯ ಉಳಿದು ವಿವಾದ ಬಗೆಹರಿಯುತ್ತದೆ. ಸಂಧಾನಕಾರರು ಸೂಚಿಸಿದ ಪರಿಹಾರ ಒಪ್ಪಿಗೆಯಾದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದು.  

ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನಕ್ಕಾಗಿ ಇದೊಂದು ವಿಶೇಷ ಅವಕಾಶವಾಗಿದೆ ಎಂದು ತಿಳಿಸಿರುವ ಅವರು ಹೆಚ್ಚಿನ ಮಾಹಿತಿಗಾಗಿ ದಾಂಡೇಲಿ ತಾಲೂಕು ಕಾನೂನು ಸೇವಾ ಸಮಿತಿ, ದಾಂಡೇಲಿ ಕಾರ್ಯಾಲಯ ಸಂಪರ್ಕಿಸುವಂತೆ  ಕೋರಲಾಗಿದೆ.