ಬಳ್ಳಾರಿಯಲ್ಲಿ ಸಂಭ್ರಮದ 76ನೇ ಗಣರಾಜ್ಯೋತ್ಸವ ದಿನಾಚರಣೆಸಂವಿಧಾನದಿಂದ ದೇಶ ಸದೃಢ: ಸಚಿವ ರಹೀಂ ಖಾನ್‌

76th Republic Day celebrations in Bellary made country stronger by constitution: Minister Rahim Kha

ಬಳ್ಳಾರಿಯಲ್ಲಿ ಸಂಭ್ರಮದ 76ನೇ ಗಣರಾಜ್ಯೋತ್ಸವ ದಿನಾಚರಣೆಸಂವಿಧಾನದಿಂದ ದೇಶ ಸದೃಢ: ಸಚಿವ ರಹೀಂ ಖಾನ್‌

ಬಳ್ಳಾರಿ 26: ಸಂವಿಧಾನದಿಂದ ನಮ್ಮ ದೇಶವು ಸದೃಢವಾಗಿ ನಿಂತಿದೆ ಎಂದು ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಅವರು ಹೇಳಿದರು. 

ಜಿಲ್ಲಾಡಳಿತ ವತಿಯಿಂದ ನಗರದ ಬಿಮ್ಸ್‌ ಮೈದಾನದ ಆವರಣದಲ್ಲಿ ಭಾನುವಾರ ಏರಿ​‍್ಡಸಿದ್ದ 76ನೇ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಬಳಿಕ ಅವರು ಮಾತನಾಡಿದರು.ನಮ್ಮ ದೇಶವು ವಿವಿಧತೆಯಲ್ಲಿ ಏಕತೆ ಹೊಂದಿದ ರಾಷ್ಟ್ರವಾಗಿದೆ. ದೇಶದಲ್ಲಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಭಾವನೆಗಳು ಇವೆ ಎಂದರೆ ಅದು ಸಂವಿಧಾನ ನಮಗೆ ನೀಡಿರುವ ಕೊಡುಗೆಯಾಗಿದೆ ಎಂದರು.ಸ್ವಾತಂತ್ರ್ಯ ಮುನ್ನ ಬಹಳ ಕಷ್ಟವಿತ್ತು. ಒಂದು ಸೂಜಿಯನ್ನು ತಯಾರಿಸಲು ಸಾಕಷ್ಟು ಅಡೆ-ತಡೆಗಳು ಎದುರಾಗುತ್ತಿದ್ದವು. ಸ್ವಾತಂತ್ಯದ ನಂತರ ಸಂವಿಧಾನ ಆಶಯಗಳಿಂದ ಸರ್ಕಾರದ ಮೂಲಕ ಎಲ್ಲವೂ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.ಈ ಹಿಂದೆ ರಾಜನ ಮಗ ರಾಜ ಆಗುತ್ತಿದ್ದನು. ಆದರೆ ಸಂವಿಧಾನ ಜಾರಿಗೆ ಬಂದ ನಂತರ ಪ್ರತಿಯೊಬ್ಬರೂ ದೇಶ ಆಳುವ ನಾಯಕನಾಗುವ ಅವಕಾಶ ಕಲ್ಪಿಸಿಕೊಟ್ಟಿದೆ. ಇದರಿಂದ ಸರ್ಕಾರ ರಚಿಸುವ ಮೂಲಕ ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಇದರಿಂದ ಪಡೆದುಕೊಳ್ಳಬಹುದಾಗಿದೆ. ನಮ್ಮ ಸರ್ಕಾರವು ಬಡವರು, ರೈತರ ಪರವಾಗಿದೆ. ಎಲ್ಲರಿಗೂ ಸಮಾನತೆ ಕಲ್ಪಿಸಿದೆ ಎಂದು ಸಚಿವರು ನುಡಿದರು.ಪ್ರಪಂಚದಲ್ಲಿಯೇ ಅತ್ಯಂತ ಜೀವಂತವೆನಿಸಿದ ಹಾಗೂ ಅತೀ ದೊಡ್ಡದಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ನಮ್ಮ ದೇಶವು ಪ್ರಜಾತಂತ್ರ ಗಣತಂತ್ರದ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಇದಕ್ಕಾಗಿ ಭಾರತದ ಸಂವಿಧಾನ ಶಿಲ್ಪಿ, ಮಹಾನ್ ಮಾನವತಾವಾದಿ, ಭಾರತರತ್ನ ಡಾ.ಬಿ.ಆರ್‌.ಅಂಬೇಡ್ಕರ್ ಅವರನ್ನು ಸದಾ ಸ್ಮರಿಸಲೇಬೇಕು ಎಂದು ಅವರು ಹೇಳಿದರು. 

*ರಾಜ್ಯದಲ್ಲಿ ಗಾರಂಟಿ ಯೋಜನೆಗಳು ಯಶಸ್ವಿ ಅನುಷ್ಠಾನ:* 

ನಮ್ಮ ಸರ್ಕಾರವು ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದು, ಸಾಕಷ್ಟು ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಂಡಿದ್ದಾರೆ.ಗೃಹಲಕ್ಷ್ಮಿ ಯೋಜನೆಯ ಹಣದಿಂದ ವಿವಿಧ ರೀತಿಯಲ್ಲಿ ಉಪಯೋಗವಾಗುತ್ತಿದೆ. ಬಡ ಕುಟುಂಬದ ಮಕ್ಕಳಿಗೆ ಶಾಲಾ-ಕಾಲೇಜು ಶುಲ್ಕ, ಟ್ಯೂಷನ್ ಫೀಜ್, ದಿನಸಿ ಸಾಮಾನುಗಳು ಖರೀದಿಸಲು ಸಹಾಯವಾಗುತ್ತಿದೆ. ಒಟ್ಟಾರೆಯಾಗಿ ಮಹಿಳಾ ವರ್ಗವು ಸಬಲೀಕರಣದತ್ತ ಸಾಗುತ್ತಿದೆ ಎಂದರು.ಗೃಹ ಜ್ಯೋತಿ ಯೋಜನೆಯಡಿ ಬಡ ಕುಟುಂಬಗಳ ಮನೆ-ಮನಗಳು ಇಂದು ಬೆಳಗುತ್ತಿವೆ. ಶಕ್ತಿ ಯೋಜನೆಯಡಿ ದುಡಿಯುವ ಮಹಿಳೆಯರಿಗೆ, ಶಾಲಾ-ಕಾಲೇಜು ಹೆಣ್ಣು ಮಕ್ಕಳಿಗೆ ಸಾಕಷ್ಟು ಉಪಯುಕ್ತವಾಗಿದೆ. ಅನ್ನ ಭಾಗ್ಯ ಯೋಜನೆಯಡಿ ಪಡಿತರ ಬದಲಾಗಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗಿದೆ.ಯುವನಿಧಿ ಯೋಜನೆಯಡಿ ಪದವಿ ತೇರ್ಗಡೆ ಹೊಂದಿದ ನಂತರ ಯುವಕ-ಯುವತಿಯರ ಅಸಹಾಯಕತೆ ನಿವಾರಿಸಲಿ ಪ್ರತಿ ತಿಂಗಳು ರೂ.3000 ಹಾಗು ರೂ.1500 ರಂತೆ ಸಹಾಯಧನ ನೀಡಲಾಗುತ್ತಿದೆ ಎಂದರು.ನಗರಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ, ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ, ಸ್ವಚ್ಛ ಭಾರತ್ ಮಿಷನ್, ಅಮೃತ 2.0 ಯೋಜನೆ ಮತ್ತು 15ನೇ ಹಣಕಾಸು ಯೋಜನೆಗಳ ಮೂಲಕ ಪ್ರಗತಿ ಸಾಧಿಸಲಾಗಿದೆ. ನಮ್ಮ ಸರ್ಕಾರ ಕೂಲಿ ಕಾರ್ಮಿಕರ, ರೈತರ, ನಗರ ಬಡಜನರ, ಬಡವಿದ್ಯಾರ್ಥಿಗಳ ಹಸಿವು ನೀಗಿಸಲು ಹೆಚ್ಚುವರಿ 188 ಇಂದಿರಾ ಕ್ಯಾಂಟಿನ್‌ಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಚಿವ ರಹೀಂ ಖಾನ್ ಅವರು ತಿಳಿಸಿದರು.ಕಲ್ಯಾಣ ಕರ್ನಾಟಕ ಭಾಗದಲ್ಲಿ 371 (ಜೆ) ನಿಂದ ಸಾಕಷ್ಟು ಸೌಲಭ್ಯಗಳು ಸಿಗುತ್ತಿವೆ. ರಾಜ್ಯ ಸರ್ಕಾರವು ಈ ಭಾಗದ ಜಿಲ್ಲೆಗಳ ಅಭಿವೃದ್ಧಿಗಾಗಿಯೇ ಸಾಕಷ್ಟು ವಿಶೇಷ ಅನುದಾನ ನೀಡುತ್ತಿದೆ. ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಇದರ ಸದ್ಬಳಕೆಯಾಗಬೇಕು ಎಂದರು.ಜಿಲ್ಲಾಡಳಿತದಿಂದ ಇಂದು ನಗರದ ಬಿಮ್ಸ್‌ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ, ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ ಮತ್ತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಮವಸ್ತ್ರದಲ್ಲಿ ಶಿಸ್ತುಬದ್ದ ಪಥಸಂಚಲನ ನಡೆಯಿತು.ಗಣರಾಜ್ಯೋತ್ಸವದ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ, ಗೌರವಿಸಲಾಯಿತು.ಬಳಿಕ ಶಾಲಾ ಶಿಕ್ಷಣ ಇಲಾಖೆಯ ವಿವಿಧ ಮಾಧ್ಯಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಗಣರಾಜ್ಯೋತ್ಸವದ ನಿಮಿತ್ತ ಸಾಮೂಹಿಕ ನೃತ್ಯ, ದೇಶ ಭಕ್ತಿಗೀತೆ, ಗಾಯನ ಮತ್ತು ವೇಷಧಾರಿಗಳಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ಮುಲ್ಲಂಗಿ ನಂದೀಶ್, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್‌.ಆಂಜನೇಯುಲು, ಪಾಲಿಕೆಯ ಉಪಮೇಯರ್ ಡಿ.ಸುಕುಂ, ಬಳ್ಳಾರಿ ವಲಯ ಪೊಲೀಸ್ ಮಹಾನೀರಿಕ್ಷಕರಾದ ಬಿ.ಎಸ್‌.ಲೋಕೇಶ್ ಕುಮಾರ್, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಸಹಾಯಕ ಆಯುಕ್ತ ಪ್ರಮೋದ್‌.ಪಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಶಾಲಾ-ಕಾಲೇಜು ಮಕ್ಕಳು, ಸಾರ್ವಜನಿಕರು ಉಪಸ್ಥಿತರಿದ್ದರು.