ನ್ಯಾಯಾಧೀಶರು ರಾಷ್ಟ್ರೀಯ ಲೋಕ್ ಅದಾಲತ್ ಮೂಲಕ ಜಿಲ್ಲೆಯಲ್ಲಿ 5340 ಪ್ರಕರಣಗಳ ಇತ್ಯರ್ಥ ಮಾಡಲಾಗಿದೆ

5340 cases have been disposed of in the district by the judges of Rashtriya Lok Adalat


 ನ್ಯಾಯಾಧೀಶರು ರಾಷ್ಟ್ರೀಯ ಲೋಕ್ ಅದಾಲತ್ ಮೂಲಕ ಜಿಲ್ಲೆಯಲ್ಲಿ  5340 ಪ್ರಕರಣಗಳ ಇತ್ಯರ್ಥ ಮಾಡಲಾಗಿದೆ

ಕೊಪ್ಪಳ  16:  ಡಿಸೆಂಬರ್ 14ರಂದು ಜಿಲ್ಲೆಯಾದ್ಯಂತ ಆಯೋಜಿಸಲಾಗಿದ್ದ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ರಾಜೀ ಸಂಧಾನದ ಮೂಲಕ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 5340 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್ ದರಗದ ಹೇಳಿದರು. 

ಅವರು ಸೋಮವಾರ ಕೊಪ್ಪಳ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. 

ಕೊಪ್ಪಳ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಶೇಖರ ಸಿ ರವರ ವಿಶೇಷ ಮುತುವರ್ಜಿಯಿಂದಾಗಿ ಜಿಲ್ಲೆಯಲ್ಲಿ ನಡೆದ ಲೋಕ್ ಅದಾಲತ್‌ನಲ್ಲಿ ವಿಮೆ, ನೀರಿನ ಬಿಲ್, ಬ್ಯಾಂಕ್ ಸಾಲ, ಮನೆ ಕರ, ಕೌಟುಂಬಿಕ ದೌರ್ಜನ್ಯ, ಜೀವನಾಂಶ, ಚೆಕ್ ಬೌನ್ಸ್‌ ಪ್ರಕರಣಗಳು, ಜನನ ಮರಣ, ಸಿವಿಲ್ ಕೇಸ್, ಕ್ರಿಮಿನಲ್ ಕೇಸ್, ಮೋಟಾರ್ ವಾಹನ ಅಪಘಾತ, ಎಂ.ಎ.ಓ.ಆರ್‌.ಡಿ ಪ್ರಕರಣಗಳು ಸೇರಿದಂತೆ ಕೊಪ್ಪಳ, ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾ ನ್ಯಾಯಾಲಯಗಳಲ್ಲಿನ 7006 ಪ್ರಕರಣಗಳ ಪೈಕಿ 5340 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ ಎಂದರು.  

ದಾಖಲೆ ಮೊತ್ತದ ಹಣ ವಸೂಲಾತಿ: ವಿಮೆ, ನೀರಿನ ಬಿಲ್, ಮೋಟಾರ್ ವಾಹನ ಅಪಘಾತ ಸೇರಿದಂತೆ ವಿವಿಧ ಪ್ರಕರಣಗಳ ಇತ್ಯರ್ಥ ಮಾಡಲಾದ ಒಟ್ಟು ಮೌಲ್ಯ 37,85,04,906 ರೂ. ಆಗಿರುತ್ತದೆ ಹಾಗೂ ಪೂರ್ವ ದಾವೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 48,637 ಪ್ರಕರಣಗಳ ಪೈಕಿ 41,801 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಇತ್ಯರ್ಥ ಪಡಿಸಲಾದ ಒಟ್ಟು ಮೌಲ್ಯ 2,05,86,528 ರೂ. ಆಗಿದೆ. ಒಟ್ಟಾರೆ ಒಂದೇ ದಿನದಲ್ಲಿ ಒಟ್ಟು 55,643 ಪ್ರಕರಣಗಳ ಪೈಕಿ 47,141 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇತ್ಯರ್ಥಪಡಿಸಲಾದ ಒಟ್ಟು ಮೌಲ್ಯ 39,92,01,241 ಇರುತ್ತದೆ ಎಂದು ಹೇಳಿದರು. 

ರಾಜೀ ಸಂಧಾನದ ಮೂಲಕ ಇಬ್ಬರೂ ಪಕ್ಷಗಾರರಿಗೂ ನ್ಯಾಯ ಸಿಕ್ಕಿದೆ. ಇದರ ಜೊತೆಗೆ ಇಬ್ಬರ ಮಧ್ಯದಲ್ಲಿ ಬಾಂದವ್ಯ ಮುಂದುವರೆಯುತ್ತದೆ. ಸಿವಿಲ್ ಪ್ರಕರಣಗಳಲ್ಲಿ ನ್ಯಾಯಾಲಯದ ಶುಲ್ಕ ವಾಪಸ್ ಸಿಗುತ್ತಿದೆ. ರಾಜೀ ಆಗದ ಪ್ರಕರಣಗಳಿಗೆ ಮೇಲ್ಮನವಿ ಸಲ್ಲಿಸಬಹುದು. ಲೋಕ್ ಅದಾಲತ್ ಮೂಲಕ ಪ್ರಕರಣಗಳು ತ್ವರಿತವಾಗಿ ಇತ್ಯರ್ಥವಾಗುವುದರಿಂದ ಜನರ ಸಮಯ ಮತ್ತು ಹಣದ ಉಳಿತಾಯವಾಗುವುದರ ಜೊತೆಗೆ ಪರಸ್ಪರ ಸ್ನೇಹ ಭಾವನೆಯಿಂದಿರುತ್ತಾರೆ ಎಂದರು. 

ನ್ಯಾಯಾಧೀಶರ ವಿಶೇಷ ಕಾಳಜಿ: ಕೊಪ್ಪಳ ಜಿಲ್ಲೆಯಲ್ಲಿ ಬಾಕಿಯಿದ್ದ ಜೀವನಾಂಶ ಪ್ರಕರಣಗಳ ಪೈಕಿ ಕೌಟುಂಬಿಕ ಭಿನ್ನಾಭಿಪ್ರಾಯ, ವಿವಿಧ ಕಾರಣಕ್ಕೆ ಕೌಟುಂಬಿಕ ಸಮಸ್ಯೆಯಿಂದ ವಿಚ್ಛೇಧನ ಕೋರಿ ನ್ಯಾಯಾಲಯದ ಮೆಟ್ಟಿಲು ಏರಿದ್ದ ಏಳು ಜೋಡಿಗಳನ್ನು ರಾಜೀ ಸಂಧಾನ ಮೂಲಕ ಮತ್ತೆ ಒಂದಾಗಿಸಲಾಗಿದೆ. ಇದರ ಜೊತೆಗೆ ದಾಖಲಾದ ಜೀವನಾಂಶ ಪ್ರಕರಣಗಳಲ್ಲಿ ನ್ಯಾಯಾಧೀಶರ ವಿಶೇಷ ಕಾಳಜಿಯಿಂದಾಗಿ ತಾಯಿ ಮಕ್ಕಳ ಮತ್ತು ತಂದೆ ಮಗನ ವೈಮನಸ್ಸುಗಳನ್ನು ಸಹ ದೂರ ಮಾಡಲಾಗಿದೆ ಎಂದು ತಿಳಿಸಿದರು.  

ಈ ಬಾರಿ ಅತಿ ಹೆಚ್ಚು ಸಂಖ್ಯೆಯ ಪ್ರಕರಣಗಳು ಇತ್ಯರ್ಥವಾಗಿದ್ದು, ಇದಕ್ಕೆ ಕಾರಣ ಲೋಕ್ ಅದಾಲತ್ ಬಗ್ಗೆ ನಮ್ಮ ಜನರಿಗೆ ಅರಿವಾಗುತ್ತಿದೆ. ಜನರು ಪ್ರಕರಣಗಳ ಇತ್ಯರ್ಥಕ್ಕೆ ಮುಂದೆ ಬರುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆಯ ಜೊತೆಗೆ ಜಿಲ್ಲೆಯ ಜನರಿಗೆ ಲೋಕ್ ಅದಾಲತ್‌ದಿಂದ ಅನುಕೂಲವಾಗುತ್ತಿದೆ. ಲೋಕ್ ಅದಾಲತ್‌ಗೆ ಸಹಕರಿಸಿದ ಜಿಲ್ಲೆಯ ಎಲ್ಲಾ ನ್ಯಾಯಾಧೀಶರುಗಳಿಗೆ, ಸಂಧಾನಕಾರರಿಗೆ, ವಕೀಲರು, ಕಕ್ಷಿದಾರರಿಗೆ ಸೇರಿದಂತೆ ಇತರರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಅಭಿನಂದಿಸಿದೆ. ವಿಶೇಷವಾಗಿ ಲೋಕ್ ಅದಾಲತ್ ಕಾರ್ಯಕ್ರಮಕ್ಕೆ ಹೆಚ್ಚು ಪ್ರಚಾರ ನೀಡಿ ಜನರಿಗೆ ಅರಿವು ಮೂಡಿಸಿದ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.  

ಡಿ.17ಕ್ಕೆ ಮಹಿಳೆಯರಿಗಾಗಿ ಕಾನೂನು ಅರಿವು ಕಾರ್ಯಕ್ರಮ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ನವ ದೆಹಲಿ, ರಾಷ್ಟ್ರೀಯ ಮಹಿಳಾ ಆಯೋಗ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿ, ಕೊಪ್ಪಳ ಇವರ ಸಹಯೋಗದಲ್ಲಿ “ವಿಧಾನ ಸೆ ಸಮಾಧಾನ'' ಎಂಬ ಮಹಿಳೆಯರಿಗಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಡಿಸೆಂಬರ್ 17ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ನಗರಸಭೆ ಹಿಂದುಗಡೆಯ ಕ್ರಿಸ್ತ ಜ್ಯೋತಿ ಚರ್ಚ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.  

ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯ ಸಿಬ್ಬಂದಿಗಳು, ಜಿಲ್ಲೆಯ ವಿವಿಧ ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.