ಚಿಕ್ಕೋಡಿ: ರೈತನ ಕುಟುಂಬಕ್ಕೆ 5 ಲಕ್ಷ ರೂ. ಚೆಕ್ ವಿತರಣೆ

ಲೋಕದರ್ಶನ ವರದಿ

ಚಿಕ್ಕೋಡಿ 02:  ಕಳೆದ ಆಗಸ್ಟ್ ತಿಂಗಳಲ್ಲಿ ಪ್ರವಾಹದಿಂದಾಗಿ ಮನೆ ಮತ್ತು ಬೆಳೆಯನ್ನು ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಕಲ್ಲೋಳ ಗ್ರಾಮದ ರೈತನ ಪುತ್ರನಿಗೆ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. 

ಕಳೆದ ಆಗಸ್ಟ್ ತಿಂಗಳಲ್ಲಿ ಪ್ರವಾಹಬಂದಾಗ ಕಲ್ಲೋಳಿಯ ರೈತ ಅಪ್ಪಾಸಾಬ ಕಲ್ಲಪ್ಪಾ ಮಂಗವತಿ (48) ತನ್ನ ಸಂಬಂಧಿಕರ ಮನೆಗೆ ಹೋಗಿ ಆಶ್ರಯ ಪಡೆದಿದ್ದ. ಪ್ರವಾಹ ಕಡಿಮೆಯಾದಾಗ ಬಂದು ನೋಡಿದರೆ ಮನೆ ಬಿದ್ದು ಹೋಗಿತ್ತು. ಅಲ್ಲದೆ 4.32 ಎಕರೆ ಹೊಲದಲ್ಲಿ ಬೆಳೆದಿದ್ದ ಕಬ್ಬು ಸಹ ಪ್ರವಾಹದಿಂದಾಗಿ ನಾಶವಾಗಿತ್ತು. 

ಅಪ್ಪಾಸಾಬ್ ತನ್ನ ಸಂಬಂಧಿಕರು ಹಾಗೂ ಪರಿಚಯಸ್ಥರ ಬಳಿ 1.52 ಲಕ್ಷ ರೂ. ಸಾಲಮಾಡಿಕೊಂಡಿದ್ದ. ಪ್ರವಾಹದಿಂದ ಮನೆ ಹಾಗೂ ಬೆಳೆ ನಾಶವಾಗಿದ್ದರಿಂದ ಸಾಲ ತೀರಿಸುವುದು ಹೇಗೆ ಎನ್ನುವ ಚಿಂತೆಗೆ ಒಳಗಾಗಿದ್ದ. 

ಇದೇ ಚಿಂತೆಯಲ್ಲಿ ಆಗಸ್ಟ್ 12ರಂದು ಮಧ್ಯಾಹ್ನ 2.30ರ ಹೊತ್ತಿಗೆ ಚಿಕ್ಕೋಡಿ ಪ್ರವಾಸಿ ಮಂದಿರದ ಎದುರು ಕ್ರಿಮಿನಾಶಕ ಸೇವಿಸಿದ್ದ. ಸ್ಥಳದಲ್ಲಿದ್ದವರು ಆತನನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ ಅದೇ ದಿನ ಸಂಜೆ ಮೃತಪಟ್ಟಿದ್ದ.  

ಮೃತ ರೈತನ ಪುತ್ರನಿಗೆ ಪರಿಹಾರ ನೀಡುವಂತೆ ಶಾಸಕ ಗಣೇಶ ಹುಕ್ಕೇರಿ ಪ್ರಯತ್ನಿಸಿದ್ದರು.  ಈ ಬಗ್ಗೆ ತನಿಖೆ ನಡೆಸಿದ ನಂತರ ಪರಿಹಾರ ಮಂಜೂರಾಗಿದ್ದು, ಶಾಸಕ ಗಣೇಶ ಹುಕ್ಕೇರಿ ಭಾನುವಾರ ಕಲ್ಲೋಳ ಗ್ರಾಮಕ್ಕೆ ತೆರಳಿ ಮೃತ ರೈತನ ಪುತ್ರ ಭೂಪಾಲ ಅಪ್ಪಾಸಾಬ್ ಮಂಗಾವತಿ ಅವರಿಗೆ ಹಣ ಮಂಜೂರಾತಿ ಆದೇಶ ಪತ್ರ ನೀಡಿದರು.  

ಮೃತನ ಪತ್ನಿ ಈ ಹಿಂದೆಯೇ ಮೃತಪಟ್ಟಿದ್ದು, ಮಗ ಮಾತ್ರ ಇದ್ದಾನೆ. ಭೂಪಾಲನಿಗೆ ಧೈರ್ಯ ತುಂಬಿದ ಗಣೇಶ ಹುಕ್ಕೇರಿ, ಆತನ ಕಷ್ಟದಲ್ಲಿ ಭಾಗಿಯಾಗುವುದಾಗಿ ಭರವಸೆ ನೀಡಿದರು. ಯಾವುದೇ ಸಂದರ್ಭದಲ್ಲಿ ರೈತರು ಆತ್ಮಹತ್ಯೆಯಂತಹ ಕೃತ್ಯಕ್ಕೆ ಇಳಿಯಬಾರದೆಂದು ಗಣೇಶ ಹುಕ್ಕೇರಿ ವಿನಂತಿಸಿದರು.