ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯದಲ್ಲಿ ನಡೆದ 12ನೇ ಘಟಿಕೋತ್ಸವ

12th Convocation held at BLDE Deemed University

ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯದಲ್ಲಿ ನಡೆದ 12ನೇ ಘಟಿಕೋತ್ಸವ

ವಿಜಯಪುರ  21: ಭಾರತ ಶೀಘ್ರದಲ್ಲಿ ವೈದ್ಯಕೀಯ ಮತ್ತು ಉತ್ಪಾದನೆ ಕ್ಷೇತ್ರಗಳಲ್ಲಿ ಜಗತ್ತಿನ ಹಬ್ ಆಗಲಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ನಗರದ ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯದಲ್ಲಿ ನಡೆದ 12ನೇ ಘಟಿಕೋತ್ಸವದಲ್ಲಿ ಅವರು ಭಾಷಣ ಮಾಡಿದರು.  ಭಾರತದಲ್ಲಿ ಹೇರಳವಾದ ಪ್ರಾಕೃತಿಕ ಮತ್ತು ಮಾನವ ಸಂಪನ್ಮೂಲವಿದೆ.  ಪ್ರಾಚೀನ ಭಾರತದ ಆರ್ಯಭಟರಿಂದ ಹಿಡಿದು ಶಲ್ಯರ ವರೆಗೆ ಮತ್ತು ಇಂದಿನ ಯುವ ವೃತ್ತಿಪರ, ಪ್ರಾಮಾಣಿಕ ಮತ್ತು ಕೌಶಲ್ಯಯುತ ಯುವಕರು ದೇಶದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತಿದ್ದಾರೆ.  ನಮ್ಮ ದೇಶದಲ್ಲಿ ಮೂಲಭೂತ ಸೌಕರ್ಯಗಳು ಹೆಚ್ಚಾಗುತ್ತಿರುವ ಪರಿಣಾಮ ಇಲ್ಲಿಗೆ ಹೂಡಿಕೆ ಮಾಡಲು ವಿದೇಶಿಗರೂ ಉಳಿದ ದೇಶಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.  ಭಾರತ ಈಗ ಪ್ರತಿಯೊಂದು ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗುತ್ತಿದ್ದು, ಜಗತ್ತಿಗೆ ನಾನಾ ವಸ್ತುಗಳನ್ನು ಸರಬರಾಜು ಮಾಡುವಲ್ಲಿ ಮುಂಚೂಣಿಯಲ್ಲಿದೆ.  ಇಲ್ಲಿರುವ ವೈದ್ಯಕೀಯ ಶಿಕ್ಷಣ, ಆರೋಗ್ಯ ಸೇವೆಗಳು, ಹೂಡಿಕೆಗಳಿಗೆ ಇರುವ ಅವಕಾಶಗಳನ್ನು ವಿದೇಶಿಗರನ್ನು ಆಕರ್ಷಿಸುತ್ತಿದ್ದು, ಶೀಘ್ರದಲ್ಲಿ ಭಾರತ ಜಗತ್ತಿನ ವೈದ್ಯಕೀಯ ಮತ್ತು ಉತ್ಪಾದನೆ ಕ್ಷೇತ್ರಗಳ ಹಬ್ ಆಗಲಿದೆ ಎಂದು ಅವರು ಹೇಳಿದರು. ಉತ್ತರ ಕರ್ನಾಟಕದಲ್ಲಿ ವಿಜಯಪುರದ ಬಿ.ಎಲ್‌.ಡಿ.ಇ ಸಂಸ್ಥೆಯಯನ್ನು ಕಟ್ಟಿದ ಫ. ಗು. ಹಳಕಟ್ಟಿ, ಬಂಥನಾಳ ಶ್ರೀಗಳು, ಶ್ರೀ ಬಿ. ಎಂ. ಪಾಟೀಲರು ಮತ್ತು ಈಗ ಅಧ್ಯಕ್ಷರಾಗಿರುವ ಎಂ. ಬಿ.ಪಾಟೀಲರು ಈ ಭಾಗದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ್ದಾರೆ.  ಸಚಿವ ಎಂ. ಬಿ. ಪಾಟೀಲ ಅವರ ಕೆಲಸ ಕಾರ್ಯಗಳು ಜನಮೆಚ್ಚುಗೆಗೆ ಪಾತ್ರವಾಗಿವೆ.  ಅಲ್ಲದೇ, ಈ ಶಿಕ್ಷಣ ಸಂಸ್ಥೆಯಲ್ಲಿ ಓದಿರುವ ಜನ ನಾನಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಲು ಅವರು ಕಾರಣರಾಗಿದ್ದಾರೆ.  ಮುಂಬರುವ ದಿನಗಳಲ್ಲಿ ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯ ವಿಶ್ವದ ಶ್ರೇಷ್ಠ ವಿದ್ಯಾಲಯಗಳಲ್ಲಿ ಒಂದಾಗಲಿ.  ಇಲ್ಲಿನ ಕ್ರೀಡಾಪಟುಗಳು ಓಲಂಪಿಕ್ಸ್‌ ನಲ್ಲಿ ಪ್ರತಿನಿಧಿಸಿ ಬಸವನಾಡಿನ ಹೆಮ್ಮೆಯ ಕೀರ್ತಿಯನ್ನು ಬೆಳಗುವಂತಾಗಲಿ ಎಂದು ಹೇಳಿದರು. ಈ ಘಟಿಕೋತ್ಸವದಲ್ಲಿ ಅಮೇರಿಕಾದ ಟೆಕ್ಸಾಸ್ ನಲ್ಲಿ ಏಕಸ್ ಸ್ಪ್ರಿಂಗ್ ಸಂಸ್ಥೆಯ ಮುಖ್ಯಸ್ಥ ಮತ್ತು ಸಿಇಓ ಆಗಿರುವ ಅರವಿಂದ ಮೆಳ್ಳಿಗೇರಿ ಮತ್ತು ಬೆಂಗಳೂರಿನ ಕಿರ್ಕೊಸ್ಕರ್ ಸಿಸ್ಟಮ್ಸ್‌ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥೆ ಮತ್ತು ಸಿಇಓ ಆಗಿರುವ ಗೀತಾಂಜಲಿ ಕಿರ್ಲೊಸ್ಕರ್ ಅವರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ವಿಜಯಪುರ ನಗರದ ಶುಭಂ ಹಿಮಾಂಶು ಶಹಾ ಆರು ಚಿನ್ನದ ಪದಕ ಮತ್ತು ದೆಹಲಿಯ ಇಶಾ ಶೈಲೇಂದ್ರ ದೀಕ್ಷಿತ ಅವರಿಗೆ 5 ಚಿನ್ನದ ಪದಕ ಮತ್ತು ಎರಡು ನಗದು ಪ್ರಶಸ್ತಿ ಪ್ರಧಾನ ಮಾಡಲಾಯಿತು.  ಈ ಸಂದರ್ಭದಲ್ಲಿ ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ, ವಿವಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಡಾ. ಆರ್‌. ಎಸ್‌. ಮುಧೋಳ, ಸಮಕುಲಪತಿ ಡಾ. ಅರುಣ ಚಂ. ಇನಾಮದಾರ, ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ರಜಿಸ್ಚ್ರಾರ್ ಡಾ. ಆರ್‌. ವಿ. ಕುಲಕರ್ಣಿ, ವೈದ್ಯಕೀಯ ನಾನಾ ವಿಭಾಗಗಳ ಡಾ. ತೇಜಸ್ವಿನಿ ವಲ್ಲಭ, ಡಾ. ಎಸ್‌. ವಿ. ಪಾಟೀಲ, ಡಾ. ಚಂದ್ರಿಕಾ ದೊಡ್ಡಿಹಾಳ, ಡಾ. ಎಸ್‌. ಎಸ್‌. ದೇವರಮನಿ, ಡಾ. ಮಲ್ಲಪ್ಪ ಹುಗ್ಗಿ ಮುಂತಾದವರು ಉಪಸ್ಥಿತರಿದ್ದರು.