ಲಖನೌ, ಮಾ 26: ಪೂರ್ವ ಉತ್ತರಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅಯೋಧ್ಯೆ ಭೇಟಿಯನ್ನು ಮುಂದೂಡಿದ್ದಾರೆ, ಹಾಗೂ ರೈಲು ಮಾರ್ಗವಾಗಿ ಫೈಜಾಬಾದ್ ತಲುಪುವ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ.
ಪ್ರಯಾಗ್ ರಾಜ್ ನಿಂದ ವಾರಾಣಸಿಯವರೆಗೆ ದೋಣಿ ಮೂಲಕ ಪ್ರಯಾಣ ಬೆಳೆಸಿ, ಗಂಗಾನದಿ ತೀರದ ಜನರನ್ನು ಭೇಟಿಯಾಗಿ ಕಾಂಗ್ರೆಸ್ ಪರ ಮತ ಯಾಚಿಸಿದ್ದ ಪ್ರಿಯಾಂಕಾ, ರೈಲು ಪ್ರಯಾಣದ ಯೋಜನೆ ಹಾಕಿಕೊಂಡಿದ್ದರು. ಆದರೆ ಬುಧವಾರ ಮಾ. 27ರಂದು ಫೈಜಾಬಾದ್ ಗೆ ರೈಲಿನಲ್ಲಿ ಪ್ರಯಾಣಿಸುವ ಬದಲು ವಿಮಾನದಲ್ಲಿ ತೆರಳಲಿದ್ದಾರೆ. ಅಲ್ಲದೆ ಅಯೋಧ್ಯೆ ಭೇಟಿಯನ್ನು ಮಾ. 29ಕ್ಕೆ ಮುಂದೂಡಿದ್ದಾರೆ.
ಭದ್ರತಾ ದೃಷ್ಟಿಯಿಂದ ರೈಲು ಪ್ರಯಾಣ ರದ್ದಾಗಿದೆ. ನಾಳೆಯಿಂದ ಮೂರು ದಿನಗಳ ಕಾಲ ಅಮೇಥಿ ಹಾಗೂ ರಾಯ್ ಬರೇಲಿಗೆ ಭೇಟಿಯಿತ್ತು, ತಾಯಿ ಸೋನಿಯಾ ಗಾಂಧಿ ಹಾಗೂ ಸೋದರ ರಾಹುಲ್ ಗಾಂಧಿ ಪರ ಪ್ರಚಾರ ನಡೆಸಲಿದ್ದಾರೆ. ಫೈಜಾಬಾದ್ ನಿಂದ ಅಮೇಥಿ ಹಾಗೂ ರಾಯ್ ಬರೇಲಿ ನಡುವಿನ ಪ್ರವಾಸದಲ್ಲಿ ಸುಮಾರು 32 ಕಡೆ ಅವರು ತಂಗಲಿದ್ದಾರೆ. ಮಾರ್ಚ್ 29ರಂದು ಅಯೋಧ್ಯೆಗೆ ಭೇಟಿ ನೀಡಲಿದ್ದು, ಹನುಮಾನ್ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ರೋಡ್ ಶೋದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಮನ ಅಸ್ತಿತ್ವ ಪ್ರಶ್ನಿಸುವವರಿಗೆ ಅಯೋಧ್ಯೆಯಲ್ಲೇನು ಕೆಲಸ: ಬಿಜೆಪಿ ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡ ಬಳಿಕ ವಾರಾಣಸಿ ಹಾಗೂ ಪ್ರಯಾಗ್ ರಾಜ್ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇದೀಗ ಮಾ. 29ರಂದು ಅಯೋಧ್ಯೆಗೆ ಭೇಟಿ ನೀಡುತ್ತಿರುವುದರ ಕುರಿತು ಬಿಜೆಪಿ ಪ್ರಶ್ನಿಸಿದೆ.
“ಶ್ರೀರಾಮ ಎಂಬ ವ್ಯಕ್ತಿ ಅಯೋಧ್ಯೆಯ ರಾಜನಾಗಿದ್ದ ಎಂಬ ನಂಬಿಕೆಯೇ ಇಲ್ಲದ, ರಾಮನ ಅಸ್ತಿತ್ವದ ಬಗ್ಗೆ ಪ್ರಶ್ನಿಸುವವರು ಅಯೋಧ್ಯೆಯಲ್ಲಿ ಏನನ್ನು ಹುಡುಕಲು ಹೊರಟಿದ್ದಾರೆ” ಎಂದು ಉತ್ತರಪ್ರದೇಶದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮೊಹಸೀನ್ ರಝಾ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನವರು ಪ್ರಯಾಗ್ ರಾಜ್ ನ ಕುಂಭಮೇಳಕ್ಕೆ ಹೋಗುವುದಿಲ್ಲ. ಅಯೋಧ್ಯೆಯ ‘ದೀಪೋತ್ಸವ’ದಲ್ಲೂ ಭಾಗಿಯಾಗುವುದಿಲ್ಲ. ಹೀಗಿರುವಾಗ ಅಯೋಧ್ಯೆಯಲ್ಲೇನು ಕೆಲಸ? ಬಹುಶಃ ಮೊಘಲರ ದೊರೆ ಬಾಬರನನ್ನು ನೆನೆಸಿಕೊಳ್ಳಲು ಅವನ ಬಗೆಗಿನ ಪುರಾವೆಗಳನ್ನು ಹುಡಕಲು ಹೊರಟಿರಬಹುದು” ಎಂದು ವ್ಯಂಗ್ಯವಾಡಿದ್ದಾರೆ.
ಪ್ರಿಯಾಂಕಾ ‘ಸೈಬೀರಿಯನ್ ಹಕ್ಕಿ’ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ‘ಸೈಬೀರಿಯನ್ ಹಕ್ಕಿ’ ಎಂದು ಮೊಹಸೀನ್ ರಝಾ ಕುಟುಕಿದ್ದಾರೆ. “ಪ್ರಿಯಾಂಕಾ ಗಾಂಧಿ ಹವಾಮಾನ ಪರಿಸ್ಥಿತಿಯನ್ನು ನೋಡಿಕೊಂಡು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುವ ಸೈಬೀರಿಯನ್ ಹಕ್ಕಿಯಂತೆ” ಎಂದಿದ್ದಾರೆ,
ಉತ್ತರಪ್ರದೇಶದ ಬಿಜೆಪಿ ವಕ್ತಾರ ಚಂದ್ರಮೋಹನ್ ಕೂಡ ಪ್ರಿಯಾಂಕಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, “ರಾಮ ಮಂದಿರ ನಿರ್ಮಾಣಕ್ಕೆ ತಡೆಯೊಡ್ಡಿದ ಕಾಂಗ್ರೆಸ್ ಪಕ್ಷ ಕ್ಷಮೆ ಕೋರಬೇಕು. ಪವಿತ್ರ ಸರಯೂ ನದಿಯ ನೀರನ್ನು ಬೊಗಸೆಯಲ್ಲಿ ಹಿಡಿದು ಕಾಂಗ್ರೆಸ್ ಮಾಡಿದ ಪಾಪಗಳನ್ನು ಪ್ರಿಯಾಂಕಾ ತೊಳೆಯುತ್ತಾರೆಯೇ” ಎಂದು ಪ್ರಶ್ನಿಸಿದ್ದಾರೆ.
ಉತ್ತರಪ್ರದೇಶದ 80 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 11 ರಿಂದ ಮೇ 19ರ ವರೆಗೆ 7 ಹಂತದಲ್ಲಿ ಮತದಾನವಾಗಲಿದೆ.