47ರ ವಸಂತಕ್ಕೆ ಕಾಲಿಟ್ಟ 'ದಿ ವಾಲ್' ರಾಹುಲ್ ದ್ರಾವಿಡ್ ಟೆಸ್ಟ್ ಕ್ರಿಕೆಟ್ ನ ಶ್ರೇಷ್ಠ ಇನಿಂಗ್ಸ್ ಗಳಿವು !

ನವದೆಹಲಿ, ಜ 11, ಭಾರತ ಕ್ರಿಕೆಟ್ ನ ಮರೆಯಾಗದ ನಕ್ಷತ್ರ ಹಾಗೂ 'ಭಾರತದ ಗೋಡೆ' ಖ್ಯಾತಿಯ ರಾಹುಲ್ ದ್ರಾವಿಡ್ ಅವರು 47ನೇ ವಸಂತಕ್ಕೆ ಪದಾರ್ಪಣೆ ಮಾಡಿದ್ದಾರೆ. ಇವರ ಹುಟ್ಟು ಹಬ್ಬದ ದಿನದಂದು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ದ್ರಾವಿಡ್ ಅವರಿಂದ ಮೂಡಿ ಬಂದಿರುವ ಅತ್ಯದ್ಭುತ ಇನಿಂಗ್ಸ್ ಗಳನ್ನು ನಾವು ಮೆಲುಕು ಹಾಕೋಣ.2001 ರಲ್ಲಿ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ 180 ರನ್ ಗಳಿಸಿದ್ದ  ರಾಹುಲ್ ದ್ರಾವಿಡ್ ಅವರ ಇನಿಂಗ್ಸ್ ಅತ್ಯಂತ ಶ್ರೇಷ್ಠವಾದದ್ದು.  ಟೆಸ್ಟ್ ಕ್ರಿಕೆಟ್ ನಲ್ಲಿಯೇ ಮಾಜಿ ನಾಯಕನ ಈ ಇನಿಂಗ್ಸ್ ಅದ್ಭುತವಾದದ್ದು.

ಮೊದಲನೇ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಭಾರತಕ್ಕೆ ಎರಡನೇ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿತ್ತು. ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ತಂಡ 445 ರನ್ ಗಳಿಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಭಾರತ ಮೊದಲ ಇನಿಂಗ್ಸ್‌ ನಲ್ಲಿ 171 ರನ್ ಗಳಿಗೆ ಆಲೌಟ್ ಆಗಿತ್ತು. ಭಾರತಕ್ಕೆ ಪಾಲೋ ಆನ್ ನೀಡುವ ಮೂಲಕ ಆಸ್ಟ್ರೇಲಿಯಾ ತಂಡ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು.ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ಆರಂಭಿಕರನ್ನು ಬಹುಬೇಗ ಕಳೆದುಕೊಂಡಿತು. ನಂತರ, ಜತೆಯಾದ ವಿವಿಎಸ್ ಲಕ್ಷ್ಮಣ್ ಹಾಗೂ ರಾಹುಲ್ ದ್ರಾವಿಡ್ ಭಾರತಕ್ಕೆ ಆಧಾರ ಸ್ಥಂಭವಾದರು. ಶೇನ್ ವಾರ್ನ್ ಹಾಗೂ ಮೆಕ್ ಗ್ರಾಥ್ ಅವರನ್ನೊಳಗೊಂಡ ಆಸೀಸ್ ಮಾರಕ ದಾಳಿಯನ್ನು ಮೆಟ್ಟಿ ನಿಲ್ಲುವಲ್ಲಿ ಈ ಜೋಡಿ ಯಶಸ್ವಿಯಾಯಿತು. ಈ ಜೋಡಿ 376 ರನ್ ಜತೆಯಾಟವಾಡುವ ಮೂಲಕ ಭಾರತವನ್ನು ಅಪಾಯದಿಂದ ಪಾರು ಮಾಡಿತ್ತು. ದ್ರಾವಿಡ್ 180 ರನ್ ಗಳಿಸಿದ್ದರು.  

2004ರಲ್ಲಿ ಪಾಕಿಸ್ತಾನದ ವಿರುದ್ಧ 270 ರನ್ ಗಳಿಸಿದ್ದರು. ಮೂರು ಪಂದ್ಯಗಳ ಟೆಸ್ಟ್ ಸರಣಿ ಇದಾಗಿತ್ತು. ಮೊದಲ ಎರಡು ಪಂದ್ಯಗಳ ಬಳಿಕ ಉಭಯ ತಂಡಗಳು ೧1-1 ಸಮಬಲ ಸಾಧಿಸಿದ್ದವು. ಮೊದಲೆರಡು ಪಂದ್ಯಗಳಲ್ಲಿ ನಾಯಕನಾಗಿದ್ದ ದ್ರಾವಿಡ್, ನಿಯಮಿತ ನಾಯಕ ಸೌರವ್ ಗಂಗೂಲಿ ತಂಡಕ್ಕೆ ಮರಳಿದ ಬಳಿಕ ಅವರೇ ತಂಡವನ್ನು ಮುನ್ನಡೆಸಿದರು. ಪಾಕಿಸ್ತಾನದ ವಿರುದ್ಧ ಮೊದಲ ಟೆಸ್ಟ್‌ ಸರಣಿ ಜಯ ಕೂಡ ಇದಾಗಿತ್ತು.ಮೊದಲೆರಡು ಪಂದ್ಯಗಳಲ್ಲಿ ಬಹುಬೇಗ ವಿಕೆಟ್ ಒಪ್ಪಿಸಿದ್ದ ರಾಹುಲ್ ದ್ರಾವಿಡ್, ಮೂರನೇ ಪಂದ್ಯದಲ್ಲಿ ದ್ವಿಶತಕ ಬಾರಿಸಿದರು. ಆರಂಭಿಕ ವಿರೇಂದ್ರ ಸೆಹ್ವಾಗ್ ಬೇಗ ವಿಕೆಟ್ ಒಪ್ಪಿಸಿದ ಬಳಿಕ ತಂಡದ ಜವಾಬ್ದಾರಿ ಹೊತ್ತ ದ್ರಾವಿಡ್, ಪಾಕಿಸ್ತಾನದ ಬೌಲರ್ ಗಳನ್ನು ದಿಟವಾಗಿ ದಂಡಿಸಿದರು. ದ್ರಾವಿಡ್ ಬ್ಯಾಟಿಂಗ್ ನೆರವಿನಿಂದ ಭಾರತ ಪಂದ್ಯದಲ್ಲಿ ಜಯ ಸಾಧಿಸಿತು.

2011 ರಲ್ಲಿ ದಿ ಓವಲ್ ಕ್ರೀಡಾಂಗಣದಲ್ಲಿ 146 ರನ್ ಗಳಿಸಿದ್ದು ದ್ರಾವಿಡ್ ಅವರ ಮತ್ತೊದು ಅದ್ಭುತ ಇನಿಂಗ್ಸ್. ಭಾರತದ ಬ್ಯಾಟ್ಸ್‌ಮನ್ ಗಳು ವೈಫಲ್ಯ ಅನುಭವಿಸಿದ್ದರು. ಇದರ ಪರಿಣಾಮ ಭಾರತ ಕೊನೆಯ ಪಂದ್ಯದ ಮೂಲಕ 0-3 ಸೋಲಿನಂಚಿಲ್ಲಿತ್ತು. ಇದೇ ವೇಳೆ ನಿಯಮಿತ ಆರಂಭಿಕ ಗೌತಮ್ ಗಂಭೀರ್ ಅವರು ಗಾಯಕ್ಕೆ ಒಳಗಾದರು. ಈ ವೇಳೆ ಗಂಭೀರ್ ಸ್ಥಾನಕ್ಕೆ ಆರಂಭಿಕರಾಗಿ ದ್ರಾವಿಡ್ ಕಣಕ್ಕೆ ಇಳಿದರು.ಈ ಪಂದ್ಯದಲ್ಲಿಯೂ ಒಂದು ತುದಿಯಲ್ಲಿ ವಿಕೆಟ್ ಉರುಳುತ್ತಿತ್ತು. ಆದರೆ, ಮತ್ತೊಂದು ತುದಿಯಲ್ಲಿ ಏಕಾಂಗಿಯಾಗಿ ಬ್ಯಾಟಿಂಗ್ ಮಾಡಿದ ದ್ರಾವಿಡ್ ಅಜೇಯ 146 ರನ್ ಗಳಿಸಿದರು. ಪಂದ್ಯ ಸೋತರೂ ಕೂಡ ಭಾರತದ ಪರ ಈ ಸರಣಿಯಲ್ಲಿ ದ್ರಾವಿಡ್ ಹೆಚ್ಚು ರನ್ ಗಳಿಸಿದರು.ರಾಹುಲ್ ದ್ರಾವಿಡ್ ಭಾರತದ ಪರ 164 ಟೆಸ್ಟ್, 344 ಏಕದಿನ ಹಾಗೂ ಒಂದೇ-ಒಂದು ಟಿ-20 ಪಂದ್ಯವಾಡಿದ್ದಾರೆ. 2012ರ ಮಾರ್ಚ್ ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದರು. ಒಟ್ಟಾರೆ, ದ್ರಾವಿಡ್ ವೃತ್ತಿ ಜೀವನದಲ್ಲಿ 48 ಶತಕಗಳನ್ನು ಬಾರಿಸಿದ್ದಾರೆ.