ಬೆಂಗಳೂರು: ಅರುಣ್ ಜೇಟ್ಲಿ ಜನರ ನಡುವೆ ನಿಂತು ಹೋರಾಡಿ, ಗುದ್ದಾಡಿ ಅವರೊಂದಿಗೆ ಎತ್ತರಕ್ಕೆ ಬೆಳೆದ ಜನ ನಾಯಕರಲ್ಲ ಎಂಬುದೇನೋ ನಿಜ. ಒಪ್ಪಲೇ ಬೇಕಾದ ಮಾತು. ಆದರೆ ಅವರು ಸಮರ್ಥ ವಿಚಾರಧಾರೆ ಮತ್ತು ಸಿದ್ಧಾಂತ ಪ್ರತಿಪಾದನೆಯ ಮೂಲಕವೇ ಭಾರತೀಯ ರಾಜಕೀಯ, ರಾಜಕಾರಣದ ಪುಟಗಳಲ್ಲಿ ಅಳಿಸಲಾಗದ ಹೆಜ್ಜೆ ಗುರುತು, ಅಸ್ತಿತ್ವ ಬಿಟ್ಟು ಹೋಗಿದ್ದಾರೆ.
ಅವರ ವಿಚಾರಧಾರೆ ಒಪ್ಪುವುದು, ಬಿಡುವುದು ಬೇರೆ ಮಾತು, ಅದರೆ ವಿಷಯ ಮಂಡನೆ, ಪ್ರತಿಪಾದನೆ ಮಾಡುತ್ತಿದ್ದ ರೀತಿಗೆ ಅವರ ರಾಜಕೀಯ ವಿರೋಧಿಗಳು ಈ ವಿಚಾರದಲ್ಲಿ ಮಾತ್ರ ಜೇಟ್ಲಿ ಅವರ ಬಗ್ಗೆ ಎಂದೂ ಕೊಂಕು ತೆಗೆದವರಲ್ಲ, ಕೀಳಾಗಿ ನೋಡಿದವರಲ್ಲ. ಹೀಗಾಗಿ ರಾಜಕಾರಣದಲ್ಲಿ ಅವರೊಬ್ಬ ನಿಜವಾದ ಅಜಾತಶತ್ರು ಎಂದರೂ ಅತಿಶೊಯೋಕ್ತಿಯೇನಲ್ಲ.
ಅವರ ನಿಧನದಿಂದ ದೇಶಕ್ಕೆ ನಷ್ಟವಾಯಿತೋ ಇಲ್ಲವೋ ಬೇರೆ ಮಾತು ಅದರೆ ಬಿಜೆಪಿ ಮತ್ತು ಆರ್ ಎಸ್ ಎಸ್ ಗೆ ಮಾತ್ರ ಇದು ಭರಿಸಲಾಗದ ದೊಡ್ಡ ಹೊಡೆತ ಎಂಬುದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ ಇದನ್ನು ಅವರ ವಿರೋಧಿಗಳು ಸಹ ಒಪ್ಪಿಕೊಳ್ಳುತ್ತಾರೆ !
ಸಂಘ ಪರಿವಾರದ ಗರಡಿಯಲ್ಲಿ ಬೆಳೆಯದೆ ಕೇವಲ ವಿದ್ಯಾರ್ಥಿ ಸಂಘಟನೆಯ ಮೂಲಕವೇ ಬೆಳೆದ ಅವರು ಹಿಂದುತ್ವದ ವಿಚಾರಧಾರೆಗಳು ಹೇಗೆ ದೇಶಕ್ಕೆ ಪೂರಕ ಎಂಬುದನ್ನು ದೇಶದ ಒಳಗೆ ಮತ್ತು ದೇಶದ ಹೊರಗೆ ಅತ್ಯಂತ ಪ್ರಬಲ ಮತ್ತು ಪರಿಣಾಮಕಾರಿಯಾಗಿ ಬಿಂಬಿಸಿ ಆ ಮೂಲಕವೇ ಜನ ಮಾನಸದಲ್ಲಿ ನೆಲೆನಿಂತು ಗೌರವ ಮೂಡಿಸಿಕೊಂಡು ಸಜ್ಜನ, ಸಂಭಾವಿತ, ಸಂಯಮ ರಾಜಕಾರಣಿ ಎಂಬ ಕೀರ್ತಿ ಗಳಿಸಿಕೊಂಡು ತಮ್ಮ ವ್ಯಕ್ತಿತ್ವಕ್ಕೆ ಮೆರಗು ತಂದುಕೊಂಡವರು.
ಕಾವಿ ಹಾಕಲಿಲ್ಲ, ನಾಮ ಬಳಿದುಕೊಳ್ಳಲಿಲ್ಲ ಆದರೆ ಅವರುಗಳು ನಾಚಿಸುವ ರೀತಿಯಲ್ಲಿ ಹಿಂದುತ್ವದ ವಿಚಾರಧಾರೆಗಳನ್ನು ಸಮರ್ಥವಾಗಿ , ತಲೆದೂಗುವಂತೆ ಮಂಡಿಸಿ ಸೈ ಎನಿಸಿಕೊಂಡವರು.
ಹಣಕಾಸು ಸಚಿವರಾಗಿ ಅವರು ಸಾಧನೆ ಮಾಡಿದರೊ ಬಿಟ್ಟರೊ ಬೇರೆ ವಿಷಯ. ಅವರು ಕೊಟ್ಟ ಕೆಲಸವನ್ನು ಸಮರ್ಥವಾಗಿ ಮಾಡಿ, ಎಲ್ಲಕ್ಕಿಂತ ಮೇಲಾಗಿ ಯಾವುದೇ ಹಗರಣಕ್ಕೆ ಅವಕಾಶ ಕೊಡದೆ ಬಹಳ ಅಚ್ಚುಕಟ್ಟಾಗಿ ಖಾತೆ ನಿರ್ವಹಣೆ ಮಾಡಿದ್ದಾರೆ ಎಂಬುದು ಸತ್ಯ
ಬಿಜೆಪಿಯ ನಿಜವಾದ ಟ್ರಬಲ್ ಶೂಟರ್ ತೀರಿಹೋಗಿದ್ದಾರೆ ಎಲ್ಲಕಿಂತ ಮುಖ್ಯವಾಗಿ ಭಾರತೀಯ ರಾಜಕಾರಣದಲ್ಲಿ ಸಜ್ಜನರು , ಸಂಭಾವಿತರು ಬೇಕು ಎಂದು ಮನಸುಗಳು ತುಡಿಯುತ್ತಿರುವ ಹಾತೊರೆಯುತ್ತಿರುವ ಸಮಯದಲ್ಲಿ ಜೇಟ್ಲಿಯಂತಹ ಸಂಭಾವಿತರು ಮೊದಲು ನೆನಪಿಗೆ ಬರುತ್ತಾರೆ. ಅಷ್ಟರ ಮಟ್ಟಿಗೆ ಅವರು ಸಾರ್ವಜನಿಕ ಜೀವನದಲ್ಲಿ ಮೇಲು, ಮೇರು ಪಂಕ್ತಿ ಬಿಟ್ಟುಹೋಗಿದ್ದಾರೆ. ಅವರು ಸಾರ್ವಜನಿಕ, ರಾಜಕೀಯ ಬದುಕಿನಲ್ಲಿ ಗಾಯ ನಿವಾರಿಸುವ ಮುಲಾಮಿನಂತೆ ಕೆಲಸ ಮಾಡಿದರೆ ಹೊರತು ಕೆರೆದು ದೊಡ್ಡ ಹುಣ್ಣು ಮಾಡುವ ರೀತಿಯಲ್ಲಿ ಎಂದೂ ವರ್ತಿಸಲಿಲ್ಲ, ನಡೆದುಕೊಳ್ಳಲಿಲ್ಲ. ಬದುಕಲಿಲ್ಲ.