ನವದೆಹಲಿ, ಫೆ 3 ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸರ್ಕಾರ ಜನರಿಗೆ ಉದ್ಯೋಗ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 'ವಿತ್ತ ಸಚಿವರೆ, ನೀವು ನನ್ನ ಪ್ರಶ್ನೆಗಳಿಗೆ ಹೆದರಬೇಡಿ. ನಾನು ದೇಶದ ಯುವಜನತೆಯ ಪರವಾಗಿ ಪ್ರಶ್ನೆ ಕೇಳುತ್ತಿದ್ದೇನೆ. ಅವರಿಗೆ ನೀವು ಉತ್ತರದಾಯಿಯಾಗಿದ್ದೀರಿ' ಎಂದಿದ್ದಾರೆ. 'ದೇಶದ ಯುವಜನತೆಗೆ ಉದ್ಯೋಗದ ಅವಶ್ಯಕತೆಯಿದೆ ಮತ್ತು ನಿಮ್ಮ ಸರ್ಕಾರ ಅದನ್ನು ಒದಗಿಸುವಲ್ಲಿ ವಿಫಲವಾಗಿದೆ' ಎಂದು ಅವರು ಆರೋಪಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಪ್ರತಿಕ್ರಿಯೆಯಲ್ಲಿ, ತಾವು ಒಂದು ಕೋಟಿ ಉದ್ಯೋಗ ಸೃಷ್ಟಿಯ ಸಂಖ್ಯೆ ನೀಡಿದರೂ, ಆ ಉದ್ಯೋಗಗಳು ಎಲ್ಲಿವೆ ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡುತ್ತಾರೆ. ಆದ್ದರಿಂದ ನಾವು ಸಂಖ್ಯೆಗಳನ್ನು ನೀಡಿಲ್ಲ ಎಂದಿದ್ದರು. ಈ ವರದಿಯನ್ನು ಟ್ವೀಟ್ ನಲ್ಲಿ ರಾಹುಲ್, 'ಉತ್ತರ ನೀಡಿ ಮಂತ್ರೀಜಿ' ಎಂದು ಹ್ಯಾಷ್ ಟ್ಯಾಗ್ ನೊಂದಿಗೆ ಹಂಚಿಕೊಂಡಿದ್ದಾರೆ.
ಇದಕ್ಕೂ ಶನಿವಾರ ಮಂಡನೆಯಾದ ಕೇಂದ್ರ ಬಜೆಟ್ ಅನ್ನು ಅಸಂಬದ್ಧ ಹಾಗೂ ಅಸ್ಪಷ್ಟ ಎಂದು ಟೀಕಿಸಿದ್ದ ರಾಹುಲ್, ಆರ್ಥಿಕತೆ ಎದುರಿಸುತ್ತಿರುವ ಪ್ರಮುಖ ಸಮಸ್ಯೆಯೆಂದರೆ ನಿರುದ್ಯೋಗ. ಆದರೆ, ಬಜೆಟ್ ನಲ್ಲಿ ಯುವಕರಿಗೆ ಉದ್ಯೋಗ ಒದಗಿಸುವ ಯಾವುದೇ ಸಮಗ್ರ ಯೋಜನೆ ಕಾಣಿಸಲಿಲ್ಲ. ಇದು ಸರ್ಕಾರದ ಕೇವಲ ಮಾತನಾಡುವ, ಯಾವುದೇ ಕೆಲಸ ಮಾಡದ ಮನಸ್ಥಿತಿಯನ್ನು ತೋರಿಸುತ್ತದೆ. ಅದರಲ್ಲಿ ತುಂಬಾ ಪುನರಾವರ್ತನೆಗಳಿವೆ ಎಂದಿದ್ದರು.