ಬೆಂಗಳೂರು, ಜೂ. 8,ತೀವ್ರ ಹೃದಯಾಘಾತದಿಂದ ಭಾನುವಾರ ಉಸಿರು ನಿಲ್ಲಿಸಿದ ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ಇಂದು ಬೆಂಗಳೂರು ದಕ್ಷಿಣ ತಾಲೂಕಿನ ನೆಲಗುಳಿ ಗ್ರಾಮದಲ್ಲಿರುವ ಫಾರ್ಮ್ ಹೌಸ್ ನಲ್ಲಿ ಜರುಗಲಿದೆ.‘ಅಣ್ಣ ಸದಾ ನನ್ನ ಜೊತೆಗಿರಬೇಕು. ನನ್ನ ಫಾರ್ಮ್ ಹೌಸ್‍ನಲ್ಲೇ ಅಣ್ಣನ ಅಂತ್ಯಕ್ರಿಯೆ ನೆರವೇರಲಿ’ ಎಂದು ಸಹೋದರ ಧ್ರುವ ಸರ್ಜಾ ಆಸೆ ಪಟ್ಟಿದ್ದರು. ಈ ಹಿನ್ನಲೆಯಲ್ಲಿ ಕನಕಪುರ ರಸ್ತೆ ಬಳಿಯ ನೆಲಗೂಳಿ ಗ್ರಾಮದಲ್ಲಿರುವ ಅವರ ಫಾರ್ಮ್ ಹೌಸ್‍ನಲ್ಲಿ ಚಿರಂಜೀವಿ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಧ್ರುವ ಅವರ ನಿರ್ಧಾರಕ್ಕೆ ಕುಟುಂಬಸ್ಥರು ಸಮ್ಮತಿ ಸೂಚಿಸಿದ್ದಾರೆ.ಬಸವನಗುಡಿಯಲ್ಲಿರುವ ಚಿರು ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಇಂದು ಬೆಳಗ್ಗೆ 6.30ರಿಂದಲೇ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು, ರಾಜಕೀಯ ದುರೀಣರು ಬಂದು ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಮಧ್ಯಾಹ್ನ 12ರವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಅಧಿಕ ಜನ ಸೇರಿದರೇ 1 ಗಂಟೆಯವರೆಗೂ ಅಂತಿಮ ದರ್ಶನ ಮುಂದುವರಿಯಲಿದೆ ಎಂದು ತಿಳಿದು ಬಂದಿದೆ.ಬಳಿಕ ಧ್ರುವ ಅವರ ಫಾರ್ಮ್ ಹೌಸ್‌ಗೆ ಪಾರ್ಥಿವ ಶರೀರ ರವಾನೆ ಆಗಲಿದೆ. ಈಗಾಗಲೇ ಅಂತ್ಯಕ್ರಿಯೆ ನೇರವೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮಧ್ಯಾಹ್ನ 2ರಿಂದ 3 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ.ಈಗಾಗಲೇ ಸ್ಯಾಂಡಲ್ ವುಡ್ ನಟರಾದ ದರ್ಶನ್, ಸುದೀಪ್, ಜಗ್ಗೇಶ್, ಯಶ್, ಗಣೇಶ್, ಸೃಜನ್ ಲೋಕೇಶ್, ಸುಮಲತಾ ಅಂಬರೀಶ್, ಉಪೇಂದ್ರ, ಸುಧಾರಾಣಿ ಮಂತಾದವರು ಚಿರು ಅವರ ಅಂತಿಮ ದರ್ಶನ ಪಡೆದು, ಅವರ ಪತ್ನಿ ಮೇಘನಾ ರಾಜ್ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.ಚಿರಂಜೀವಿ ಅವರು ಸಹೋದರ ಧ್ರುವ ಸರ್ಜಾ, ಸಹೋದರ ಸಂಬಂಧಿ ಅರ್ಜುನ್ ಸರ್ಜಾ ಹಾಗೂ ಪತ್ನಿ ಮೇಘನಾ, ಮಾವ ಸುಂದರ್ ರಾಜ್ ಅತ್ತೆ ಪ್ರಮೀಣಾ ಜೋಶಿ ಸೇರಿ ಅಪಾರ ಅಭಿಮಾನಿ ಬಂಧುಗಳನ್ನು ಅಗಲಿದ್ದಾರೆ.ಭಾನುವಾರ ಮಧ್ಯಾಹ್ನ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ನಗರದ ಜಯನಗರದಲ್ಲಿರುವ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.ಕೇವಲ 39 ವಯಸ್ಸಿನಲ್ಲಿಯೇ ಚಿರಂಜೀವಿ ಸರ್ಜಾ ತಮ್ಮ ಉಸಿರಾಟ ನಿಲ್ಲಿಸಿದ್ದು, ಕರುನಾಡಿನ ಮೇಲೆ ಕಪ್ಪು ಛಾಯೆ ಆವರಿಸಿತು.ಚಿರಂಜೀವಿ ಸರ್ಜಾ ಅವರು 'ವಾಯುಪುತ್ರ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದು, ಸಿಂಗ, ಅಮ್ಮಾ ಐ ಲವ್ ಯೂ, ಆಟಗಾರ, ದಂಡಂ ದಶಗುಣಂ, ವರದ ನಾಯಕ್, ರುದ್ರ ತಾಂಡವ ಸೇರಿ 22ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು.ಚಿರಂಜೀವಿ ಅವರ ಏಕಾಏಕೀ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಯಾಂಡಲ್ ವುಡ್ ಕಂಬನಿ ಮಿಡಿದಿದೆ.