ಭಾರತೀಯ ಚಿತ್ರರಂಗಕ್ಕೆ ಬೆಸ್ಟ್ ಆಕ್ಷನ್ ಸಿನಿಮಾ ಆಗಬಲ್ಲ '45'; ಶಿವರಾಜ್ ಕುಮಾರ್

106 ದಿನ ಶೂಟಿಂಗ್ ಮಾಡಿದ ಕಲಾವಿದ, ತಂತ್ರಜ್ಞರಿಗೆ ಸನ್ಮಾನ

ಹ್ಯಾಟ್ರಿಕ್ ಹೀರೋ ಶಿವರಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಬಹು ನಿರೀಕ್ಷಿತ '45' ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ಒಟ್ಟು106 ದಿನಗಳ ಕಾಲ ಬೆಂಗಳೂರು, ಮೈಸೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದ್ದು, ನಿನ್ನೇಯಷ್ಟೇ (ಸೆ. 28) ಬೆಂಗಳೂರಿನಲ್ಲಿ ಚಿತ್ರಕ್ಕೆ ಕುಂಬಳಕಾಯಿ ಒಡೆಯಲಾಯಿತು. ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಟರಾದ ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ, ಛಾಯಾಗ್ರಾಹಕ ಸತ್ಯ ಹೆಗಡೆ ನಿರ್ಮಾಪಕ ರಮೇಶ್ ರೆಡ್ಡಿ ಅವರುಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜಕುಮಾರ್ 'ಇದರಲ್ಲಿ ಒಳ್ಳೆಯ ಪಾತ್ರವಿದೆ. ಎಲ್ಲಾ ಪಾತ್ರಗಳು ಅಷ್ಟೇ ಚನ್ನಾಗಿ ಬಂದಿವೆ. ಅರ್ಜುನ್ ಈ ಕಥೆ ಹೇಳಿ ಬೇರೆದವರಿಗೆ ಕೊಡುತ್ತೇನೆ ಎಂದಾಗ ನಾನು ನೀವೆ ಮಾಡಿ ಎಂದಿದ್ದೆ. ಸಿನಿಮಾ ನೋಡಿದಾಗ ಅರ್ಜುನ ಮೊದಲ ನಿರ್ದೇಶನದ ಸಿನಿಮಾ ಎನಿಸಲ್ಲ. ಇದು ಭಾರತೀಯ ಚಿತ್ರರಂಗದಲ್ಲಿ ಬೆಸ್ಟ್ ಆ್ಯಕ್ಷನ್ ಸಿನಿಮಾ ಆಗುತ್ತದೆ ಎಂದು ಹೇಳಬಲ್ಲೆ. ತಂಡದ ಸಹಕಾರದಿಂದ ಚಿತ್ರ ಅದ್ಭುತವಾಗಿ ಬಂದಿದೆ' ಎಂದರು. ನಂತರ ಮಾತನಾಡಿದ ಉಪೇಂದ್ರ 'ಒಂದು ವರ್ಷ ಆಯ್ತು ನಾನು 'ಯುಐ' ಶೂಟಿಂಗ್ ಮುಗಿಸಿ. ಇನ್ನು ಕುಂಬಳಕಾಯಿ ಒಡೆದಿಲ್ಲ. ಇವರು ಎಲ್ಲದರಲ್ಲೂ ಫಾಸ್ಟ್ ಇದ್ದು, ಪ್ಲ್ಯಾನ್ ಮಾಡಿಕೊಂಡು ಅರ್ಜುನ್ ಸಿನಿಮಾ ಮಾಡಿದ್ದಾರೆ. ವಿಭಿನ್ನವಾದ, ಅದ್ಭುತವಾದ ಒಳ್ಳೆಯ ತಾಟ್ ಇದೆ ಕಥೆಯಲ್ಲಿ. ಶಿವಣ್ಣನ ಜೊತೆ ಕೆಲಸ ಮಾಡಲು ಖುಷಿ ಆಗುತ್ತದೆ' ಎನ್ನುವರು. 

ರಾಜ್ ಬಿ ಶೆಟ್ಟಿ ಮಾತನಾಡಿ 'ಇದು ನನ್ನ ಭಾಗ್ಯ. ಶಿವಣ್ಣ, ಉಪೇಂದ್ರ ಅಭಿಮಾನಿಯಾದ ನಾನು ಅವರ ಜೊತೆ ನಟಿಸುತ್ತೇನೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಇದೊಂದು ಕನ್ನಡಿಗರ ಹೆಮ್ಮೆಯ ಸಿನಿಮಾ ಆಗುತ್ತದೆ. ಕನಸು ಕಂಡಂತೆ ನಿರ್ದೇಶಕರು ಸಿನಿಮಾ ಮಾಡಿದ್ದಾರೆ' ಎಂದರು. ಛಾಯಾಗ್ರಾಹಕ ಸತ್ಯ ಹೆಗಡೆ 'ತಾಂತ್ರಿಕವಾಗಿ ಸಿನಿಮಾ ಶ್ರೀಮಂತವಾಗಿ ಇರಲಿದೆ. ಈ ತರ ತಯಾರಿ ಮಾಡಿಕೊಂಡು ಬಂದರೆ ಒಳ್ಳೆಯ ಸಿನಿಮಾ ಆಗುತ್ತವೆ ಎನ್ನಬಹುದು. ಇಂಡಸ್ಟ್ರಿಗೆ ಒಳ್ಳೆ ಚಿತ್ರ ಇದಾಗಲಿದೆ' ಎನ್ನುವರು. ಇನ್ನು ಚಿತ್ರಕ್ಕೆ ಕಥೆ ಬರೆದು ನಿರ್ದೇಶನದ ಜೊತೆಗೆ ಸಂಗೀತ ಸಂಯೋಜಿಸಿರುವ ಅರ್ಜುನ್ ಜನ್ಯ ಮಾತನಾಡುತ್ತಾ 'ಮೂರು ಜನ ನನ್ನ ಚಿತ್ರಕ್ಕೆ ಬ್ರಹ್ಮ, ವಿಷ್ಣು, ಮಹೇಶ್ವರ ಇದ್ದಂಗೆ. ಈ ಮೂವರ ದೇವಸ್ಥಾನ ಕಟ್ಟಿ ಕೊಟ್ಟಿರುವುದು ನಿರ್ಮಾಪಕರಾದ ರಮೇಶ್ ರೆಡ್ಡಿ. ಪ್ರಧಾನ ಅರ್ಚಕ ಸತ್ಯ ಹೆಗಡೆ ಎನ್ನಬಹುದು' ಎಂದಷ್ಟೇ ಹೇಳಿದರು. ಕೊನೆಯಲ್ಲಿ ಮಾತನಾಡಿದ ನಿರ್ಮಾಪಕರು 'ಈ ಕಥೆಯನ್ನು ಆನಿಮೇಷನ್‌ ಮಾಡಿಕೊಂಡು ಬಂದು ಎರಡುವರೆ ಗಂಟೆ ಸಿನಿಮಾ ತೋರಿಸಿದ್ದರು. ಅದು ರಾಜಕುಮಾರ ಸಿನಿಮಾ ನೋಡಿದಂತೆ ಆಯ್ತು. ಸಿನಿಮಾ ಶುರು ಮಾಡಿ 10 ದಿನ ಆಗುವ ವರೆಗೆ ನಿರ್ದೇಶಕರ ಮೇಲೆ ಕಾನ್ಫಿಡೆನ್ಸ್ ಇರಲಿಲ್ಲ. ನಂತರ ಔಟ್ ಫುಟ್ ನೋಡಿ ಅವರು ಕೇಳಿದ್ದೆಲ್ಲವನ್ನು ಕೊಟ್ಟೆ. ಇದು ಕನ್ನಡ ಅಷ್ಟೇ ಅಲ್ಲ ಇಡೀ ಭಾರತ ಹೆಮ್ಮೆ ಪಡುವಂತ ಸಿನಿಮಾ ಆಗುವ ನಿರೀಕ್ಷೆ ಇದೆ. ನ್ಯಾಚುರಲ್ ಆಗಿ ಚಿತ್ರ ತಯಾರಾಗಿದ್ದು, ಇಂಡಿಯಾದಲ್ಲೇ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುವ ವಿಶ್ವಾಸವಿದೆ. ಇದು ಶಿವಣ್ಣನ ಸಿನಿಮಾ ಅಲ್ಲ. ರಾಜ್ ಕುಮಾರ್ ಸಿನಿಮಾ ತರಾ ಇದೆ' ಎನ್ನುವರು. ಸೂರಜ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣವಾದ ಈ ಚಿತ್ರ ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತಯಾರಾಗುತ್ತಿದೆ.