ರಾಜಕೀಯ ಪ್ರಯೋಜನ ಪಡೆಯಲೋಸುಗುವೇ ಜೇನುಗೂದಿಗೆ ಕಲ್ಲು

- ಭಾರತಿ ತೊರಗಲ್ಲ
ಹೆಣ್ಣು ಮಕ್ಕಳಿಗೆ ಪ್ರವೇಶ ನಿಷಿದ್ಧ ಎನ್ನುವ ಧಾರ್ಮಿಕ ಸ್ಥಳಗಳೇ ಇರಲಿ, ಲಿಂಗಾಯತ-ವೀರಶೈವ ಎಂಬ ಜಂಟಿ ಧರ್ಮವೇ ಇರಲಿ, ಕಳೆದ ಅನೇಕ ದಶಕಗಳಿಂದ ಯಾವುದೇ ವಿವಾದಗಳಿಲ್ಲದೇ ಶಾಂತ ರೀತಿಯಿಂದ ಜೀವನ ನಡೆಸುತ್ತಿದ್ದವು. ಇಂಥ ಜೇನುಗೂಡಿಗೆ ಕಲ್ಲೊಗೆದದ್ದು ಅದರ ರಾಜಕೀಯ ಪ್ರಯೋಜನ ಪಡೆಯಲೋಸುಗ ಎನ್ನುವುದು ನಿರ್ವಿವಾದ.
ಹೆಣ್ಣುಮಕ್ಕಳಿಗೆ ಭಾರತದಲ್ಲಷ್ಟೇ ಅಲ್ಲ,ಇಡೀ ಜಗತ್ತಿನಲ್ಲೇ ಅನ್ಯಾಯವಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಅಮೆರಿಕದಂಥ ಪ್ರಗತಿ ಹೊಂದಿದ ರಾಷ್ಟ್ರದಲ್ಲಿ ಕೂಡ ಇನ್ನೂವರೆಗೂ ಒಬ್ಬ ಹೆಣ್ಣುಮಗಳೂ ರಾಷ್ಟ್ರಾಧ್ಯಕ್ಷ ಪಟ್ಟಕ್ಕೇರಿಲ್ಲ. ಅಂದಮೇಲೆ ಹೆಣ್ಣುಮಕ್ಕಳಿಗೆ ಅನ್ಯಾಯವಾಗುತ್ತಿರುವ ವಿಷಯ ಭಾರತಕ್ಕಷ್ಟೇ ಸೀಮಿತವಲ್ಲ. ಅವನ್ನೆಲ್ಲ ಪರಿಗಣಿಸಿದಾಗ ಧಾರ್ಮಿಕ ಪವಿತ್ರ ಸ್ಥಳಗಳಿಗೆ ಹೆಣ್ಣುಮಕ್ಕಳ ಪ್ರವೇಶ ಅತ್ಯಂತ ಕಡೆಯದಾಗಿ ಕೈಗೆತ್ತಿಕೊಳ್ಳುವ ವಿಷಯ. ಇದಕ್ಕೆ ಇಷ್ಟೊಂದು ಪ್ರಾಧಾನ್ಯತೆ ಕೊಟ್ಟು ಆ ವಿಷಯವನ್ನು ಹೋರಾಟದ ಮುಂಚೂಣಿಯಲ್ಲಿರುವಂತೆ ಮಾಡಿದ್ದು ವಿಷಾದನೀಯ.
ಈ ತಾರತಮ್ಯ ಅವಳು ಗರ್ಭದಲ್ಲಿ ಮೂಡಿದಾಗಿನಿಂದಲೇ ಪ್ರಾರಂಭವಾಗುತ್ತದೆ. ಗರ್ಭದಲ್ಲಿದ್ದದ್ದು ಹೆಣ್ಣು ಭ್ರೂಣ ಎಂದು ಗೊತ್ತಾದ ತಕ್ಷಣ ತೆಗೆದು ಹಾಕುವುದು, ಇಲ್ಲವೇ ಆ ಗರ್ಭ ಹೊತ್ತ ತಾಯಿಗೆ ಅಷ್ಟೇನೂ ಪೋಷಕಾಂಶಗಳನ್ನು ಕೊಡದಿರುವುದು. ಹುಟ್ಟಿದ ಮೇಲೆ ಹೆಣ್ಣು ಮಗುವಿಗೆ ಸರಕಾರೀ ಶಾಲೆ, ಗಂಡು ಮಗುವಿಗೆ ಖಾಸಗಿ ಶಾಲೆ. ಹೆಚ್ಚಿನ ಶಿಕ್ಷಣಕ್ಕೆ ಅವನಿಗೆ ವಂತಿಗೆ, ಅವಳಿಗೆ ತನ್ನ ಪರಿಶ್ರಮದಿಂದ ಪಡೆದುಕೊಂಡ ಅಂಕಗಳು. ಕನ್ಯಾಹೊರೆ ಇಳಿಸುವ ಯಾವನೇ ಇದ್ದರೂ ಅವನೊಂದಿಗೆ ಮಗಳ ಮದುವೆ- ಕೆಲಸಲ ಮಾರಾಟ-, ಅವಳ ಹೊರೆಯನ್ನು ಹೊತ್ತು ಹೊರಗೆ ಹಾಕಿ ಮಗನ ಮದುವೆ ಎಂಬ ಹೊರೆಯನ್ನು ತಂದುಕೊಳ್ಳುವುದು. ಕೊನೆಗೆ ಹೆಣ್ಣುಮಗಳ ಮನೆಯಲ್ಲೇ ಬಿದ್ದು ಪ್ರಾಣ ಬಿಡುವುದು. ಜೀವನದ ಇಷ್ಟೊಂದು ಹಂತಗಳಲ್ಲಿ ತಾರತಮ್ಯವನ್ನು ಹೋಗಲಾಡಿಸಲು ಎಷ್ಟೊಂದೆಲ್ಲ ಇರುವಾಗ ಅವುಗಳಲ್ಲಿ ಯಾವ ಸಮಸ್ಯೆಯನ್ನೂ ಕೈಗೆತ್ತಿಕೊಳ್ಳದೇ ಇಲ್ಲದ ಯಾವುದೋ ಒಂದು ಸಮಸ್ಯೆಯನ್ನು ಕೆದಕಿ ತೆಗೆಯುವುದರ ಉದ್ದೇಶವೇನು?
ಇಷ್ಟಕ್ಕೂ ಶಬರಿಮಲೈಯಲ್ಲಿ ಹೆಣ್ಣುಮಕ್ಕಳ ಬಗೆಗೆ ತಾರತಮ್ಯ ಇಲ್ಲವೇ ಇಲ್ಲ. ಶನಿಶಿಂಗಣಾಪುರದಲ್ಲಿ ದೊರೆತ ವಿಜಯದಿಂದ ಉಬ್ಬಿ ಹೋದ ತೃಪ್ತಿ ದೇಸಾಯಿ ಹಾಗೂ ತಂಡದವರು ಇಲ್ಲಿಯೂ ಲಗ್ಗೆ ಹಾಕಿದರು. ಆದರೆ ಇಲ್ಲಿ ಆ ಸಮಸ್ಯೆಯೇ ಇಲ್ಲ. ಹತ್ತು ವರ್ಷದ ಒಳಗಿನವರಿಗೆ, ಐವತ್ತು ವರ್ಷದ ಹೊರಗಿನವರಿಗೆ ದೇವಸ್ಥಾನದಲ್ಲಿ ಪ್ರವೇಶ ಇದ್ದೇ ಇದೆ. ಇದನ್ನು ಬಿಟ್ಟು ಉಳಿದವರು ಬರಬೇಕೆನ್ನುತ್ತಿರುವುದು ಕೇವಲ ಧಾರ್ಮಿಕ ಭಾವನೆಯನ್ನು ಕೆಣಕುವುದಕ್ಕೋಸ್ಕರ. ಹಾಗಾಗಿ ಸ್ಥಳೀಯ ಮಹಿಳೆಯರೇ ಇದನ್ನು ಉಗ್ರವಾಗಿ ವಿರೋಧಿಸುತ್ತಿದ್ದಾರೆ. ದರ್ಶನಕ್ಕಾಗಿ ಐವತ್ತು ವರ್ಷ ಕಾಯಲು ನಿಜವಾದ ಭಕ್ತ ಮಹಿಳೆಯರು ಸಿದ್ಧರಿದ್ದಾರೆ. ಹೊರಗಿನ ಹೆಂಗಳೆಯರನ್ನು ಅದರಲ್ಲೂ ಮಂಡಲ ಕಾಲದ ವ್ರತದ ಅರಿವೇ ಇರದ ಹೆಂಗಳೆಯರನ್ನುದೇವಸ್ಥಾನದೊಳಗೆ ಬರದಂತೆ ಮಾಡಲು ಅಹೋರಾತ್ರಿ ಕಾವಲಿದ್ದವರೂ ಮಹಿಳೆಯರೇ.
ಅಯ್ಯಪ್ಪನ ಭಕ್ತರಿಗೇ ಇದರ ಬಗ್ಗೆ ತಕರಾರು ಇಲ್ಲವೆಂದಮೇಲೆ ಇದನ್ನು ಲಿಂಗತಾರತಮ್ಯದ ಕದನವೆನ್ನಲು ಬಾರದು. ಇದು ಶ್ರದ್ಧಾಳುಗಳು ಹಾಗೂ ಹೋರಾಟದ ಚಟವಿರುವವರ ನಡುವಿನ ಕದನ. ಇದನ್ನು ಈ ದೃಷ್ಟಿಯಿಂದ ನೋಡಬೇಕೇ ಹೊರತು ಲಿಂಗತಾರತಮ್ಯವೆಂದು ಪರಿಗಣಿಸಬಾರದು.
ಇಲ್ಲಿಯ ದೇವತೆ ಅಯ್ಯಪ್ಪಸ್ವಾಮಿ ನೈಷ್ಠಿಕ ಬ್ರಹ್ಮಚಾರಿ. ಅಲ್ಲದೇ ಯೋಗಪದ್ಮಾಸನದಲ್ಲಿ ಕುಳಿತಿದ್ದು ಅದು ಬ್ರಹ್ಮಚರ್ಯೆಗೆ ಅನುಕೂಲವಾದಂಥಹದ್ದು. ಅಂಥ ದೇವತೆಯೆದುರು ಯೌವನಸ್ಥೆಯರು ಹೋಗಬಾರದು ಎನ್ನುವುದು ಸ್ಥಳೀಯರ ವಾದ. ಈ ವಾದವನ್ನು ಎಲ್ಲರೂ ನಂಬಬೇಕು ಎಂದೇನಿಲ್ಲ.
ಆದರೆ ಶಬರಿಮಲೈ ಒಂದೇ ಅಲ್ಲ, ಯಾವುದೇ ದೇವಸ್ಥಾನದಲ್ಲೂ ಋತುಸ್ರಾವವಾಗುವ ದಿನಗಳಲ್ಲಿ ಹೆಣ್ಣುಮಕ್ಕಳು ಒಳಗೆ ಹೋಗುವುದಿಲ್ಲ. ಇದು ಎಂದಿನಿಂದ ನಡೆದು ಬಂದ ಪದ್ಧತಿ. ಆ ಪದ್ಧತಿಯನ್ನು ನಮ್ಮ ಪೂರ್ವಜರು ಏಕೆ ರೂಢಿಯಲ್ಲಿ ತಂದಿದ್ದಾರೋ ಗೊತ್ತಿಲ್ಲ. ಆದರೆ ಎಲ್ಲ ಹೆಣ್ಣುಮಕ್ಕಳೂ ತಪ್ಪದೆ ಅದನ್ನು ಪಾಲಿಸುತ್ತಿರುವುದಂತೂ ಸತ್ಯ. ಈಗಿನವರು ಅದಕ್ಕೆ ತಮ್ಮ ವಿವರಣೆಯನ್ನೂ ಕೊಡುತ್ತಾರೆ. ಅದೆಂದರೆ,
ಉಳಿದ ಧರ್ಮದ ಪವಿತ್ರ ಪೂಜಾ ಸ್ಥಳಗಳಂತಲ್ಲದೇ ಹಿಂದೂ ದೇವಾಲಯಗಳು ಸ್ಥಾಪನೆಯಾಗುವುದೇ ಆಯಸ್ಕಾoತೀಯ ಕ್ಷೇತ್ರದ ಮಧ್ಯದಲ್ಲಿ. ಅಂದರೆ ಅತಿ ಹೆಚ್ಚಿನ ಕಾಂತಕ್ಷೇತ್ರವಿರುವಲ್ಲಿ. ಅದರ ಮಧ್ಯದಲ್ಲಿ ದೇವರ ಮೂರ್ತಿ ಪ್ರತಿಷ್ಠಾಪನೆಯಾಗುತ್ತದೆ. ಪೂಜಾರಿಯ ಪ್ರವೇಶದೊಂದಿಗೆ ಗರ್ಭಗುಡಿಯಲ್ಲಿ ಪ್ರಾಣಶಕ್ತಿ ಹರಿದು ಅಲ್ಲೊಂದು ಅಲೌಕಿಕ ವಾತಾವರಣಉಂಟಾಗುತ್ತದೆ. ಅಂದರೆ ದೇಹದಲ್ಲಿಯ ನರವ್ಯೂಹದಂತೆ ೭೨,೦೦೦ ನಾಡಿಗಳ ಮುಖಾಂತರ ಪ್ರಾಣಶಕ್ತಿಯ ಸಂಚಾರವಾಗುತ್ತದೆ. ಈ ಶಕ್ತಿಯನ್ನು ಇದ್ದುದಕ್ಕಿಂತ ಮೇಲ್ಮಟ್ಟಕ್ಕೆ ಒಯ್ಯುವ ಉದ್ದೇಶದಿಂದ ನಾವು ದೇವಾಲಯವನ್ನು ಪ್ರವೇಶಿಸುತ್ತೇವೆ. ಮನುಷ್ಯನ ದೇಹದಲ್ಲಿಯ ಐದು ಪ್ರಾಣ ಸಂಚಾರ (ಪ್ರಾಣ, ಸಮಾನ, ಅಪಾನ, ವ್ಯಾನ, ಉದಾನ ) ಗಳ ಹೊರತಾಗಿ ಮಹಿಳೆಯರಲ್ಲಿ ಪ್ರಸೂತಿವಾಯು ಎಂಬ ಇನ್ನೊಂದು ಉಪಪ್ರಾಣ ಸಂಚಾರವಾಗುತ್ತಿರುತ್ತದೆ. ಇದು ಪ್ರಸವದ ಸಮಯದಲ್ಲಿ ಸಹಾಯ ಮಾಡುತ್ತದೆ. ಋತುಸ್ರಾವದ ಸಮಯದಲ್ಲಿ ಈ ಶಕ್ತಿ ಅಧೋಮುಖವಾಗಿ ಹರಿಯುತ್ತಿರುತ್ತದೆ. ಆದರೆ ದೇವಾಲಯಗಳಲ್ಲಿ ಪ್ರಾಣಶಕ್ತಿಯನ್ನು ಮೇಲ್ಮುಖವಾಗಿ ಸೆಳೆಯಲಾಗುತ್ತಿರುತ್ತದೆ. ಈ ವಿರುದ್ಧ ಬಲಗಳಿಂದಾಗಿ ಋತು ದೇಹದಲ್ಲಿ ಊರ್ಧ್ವಮುಖವಾಗಿ ಹರಿದು ಗರ್ಭಾಶಯವನ್ನು ಮುಚ್ಚಿಬಿಡುವ ಸಾಧ್ಯತೆಗಳಿರುತ್ತವೆ. ಅಂದರೆ ಇದು ಬಂಜೆತನಕ್ಕೆ ಕಾರಣವಾಗುತ್ತದೆ.
ಇದಲ್ಲದೇ ಶಬರಿಮಲೈಗೆ ಹೋಗುವ ಪೂರ್ವದಲ್ಲಿ ೪೧ ದಿನಗಳ ವ್ರತವನ್ನು ಕೈಗೊಳ್ಳಬೇಕಾಗುತ್ತದೆ. ಇದೊಂದು ಚಿಕ್ಕ ತಪಸ್ಸು. ಈ ಅವಧಿಗೆ ಮಂಡಲಕಾಲ ಎನ್ನುತ್ತಾರೆ. ದೇಹದ ಕೋಶ ತನ್ನ ಒಂದು ಚಕ್ರವನ್ನು ಪೂರ್ಣಗೊಳಿಸಲು ೨೧ ದಿನಗಳನ್ನು ತೆಗೆದುಕೊಳ್ಳುತ್ತದೆ. ಹಾಗೆ ಎರಡು ಚಕ್ರಗಳ ಕಾಲಾವಧಿಯಲ್ಲಿ ದೇಹದ ಸಮಸ್ತ ಕೋಶಗಳು ಸಂಪೂರ್ಣವಾಗಿ ಮರು ಉತ್ಪಾದನೆಯಾಗಿರುತ್ತವೆ. ಅಂದರೆ ಮಂಡಲಕಾಲದ ತಪಸ್ಸಿನ ಅವಧಿಯಲ್ಲಿ ನಮ್ಮ ಮನಸ್ಸು ವಿಚಾರಗಳು ಸಂಪೂರ್ಣ ಶುದ್ಧವಾಗುತ್ತವೆ. ಧನಾತ್ಮಕ ಶಕ್ತಿಯು ಊರ್ಧ್ವಮುಖವಾಗಿರುತ್ತದೆ. ಆದ್ದರಿಂದ ಇದು ಹೆಣ್ಣುಮಕ್ಕಳಿಗೆ ಸೂಕ್ತವಲ್ಲ. ಯಾಕೆಂದರೆ ಪ್ರಸೂತಿವಾಯು ಅಧೋಮುಖವಾಗಿ ವರ್ತಿಸುತ್ತಿರುತ್ತದೆ.
ಅಂದರೆ ಮಹಿಳೆಯರ ಪ್ರವೇಶದಿಂದ ತನ್ನ ಪಾವಿತ್ರ್ಯ ಹಾಳಾಗುವುದೆಂದು ಅಯ್ಯಪ್ಪ ಚಿಂತಿಸುವುದಿಲ್ಲ. ಬದಲು ಇಲ್ಲಿ ಅದರಿಂದ ಅವರು ದೈಹಿಕ ತೊಂದರೆಗೊಳಗಾಗುವರು ಎಂಬ ಚಿಂತನೆಯಿದೆ.
ಈಗ ಮಹಿಳೆಯರ ಪ್ರವೇಶವನ್ನು ತಡೆಗಟ್ಟುತ್ತಿರುವ ಸ್ಥಳೀಯ ಮಹಿಳೆಯರಿಗೆ ಇಷ್ಟೆಲ್ಲ ಗೊತ್ತಿರಲಿಕ್ಕಿಲ್ಲ. ಆದರೆ ಚಳುವಳಿಯ ಮುಖಂಡತ್ವ ವಹಿಸಿದ ಹೋರಾಟಗಾರರು ಇದನ್ನೆಲ್ಲ ತಿಳಿದುಕೊಂಡಿರಬೇಕು.
ಇಷ್ಟೆಲ್ಲ ವಿಧಿಗಳಿದ್ದಾಗ್ಯೂ ಒಂದು ವೇಳೆ ಪ್ರವೇಶ ಸಾಧ್ಯವಾದರೆ ಇದು ಲಿಂಗ ತಾರತಮ್ಯವನ್ನು ಯಾವರೀತಿಯಿಂದ ಹೋಗಲಾಡಿಸಿದಂತೆ? ಇದರಿಂದ ಹೆಣ್ಣು ಭ್ರೂಣ ಹತ್ಯೆ ನಿಲ್ಲುತ್ತದೆಯೇ? ಬಲಾತ್ಕಾರಗಳು ನಿಲ್ಲುತ್ತವೆಯೇ? ಮಹಿಳಾ ಶಿಕ್ಷಣಕ್ಕೆ ಪುಷ್ಟಿ ದೊರಕಿದಂತಾಯಿತೇ? ಏನು ಸಾಧಿಸುತ್ತದೆ?
ಅದೇ ರೀತಿ ಒಟ್ಟಾಗಿ ಒಂದು ಬಲಾಢ್ಯ ಜಾತಿಯಾಗಿ ಒಕ್ಕಟ್ಟಿನಲ್ಲಿ ಬಲವಿದೆ ಎಂದು ನೆಮ್ಮದಿಯಿಂದ ಇದ್ದ ಲಿಂಗಾಯಿತ - ವೀರಶೈವರನ್ನು 'ಒಡೆದು ಆಳುವ ನೀತಿಯನ್ನು' ಬಳುವಳಿಯಾಗಿ ಪಡೆದ ಸರಕಾರ ತನ್ನ ರಾಜಕೀಯ ಲಾಭಕ್ಕಾಗಿ ಒಡೆಯಿತು. ಲಾಭ ಪಡೆಯಿತು. ಅಧಿಕಾರಕ್ಕೆ ಬಂದಿತು. ಈಗ ಮತ್ತೆ ಅಧಿಕಾರ ಬೇಕಾಗಿದೆ. ಆದ್ದರಿಂದ 'ನೀನು ಅತ್ತಂತೆ ಮಾಡು, ನಾನು ಸತ್ತಂತೆ ಮಾಡುತ್ತೇನೆ ' ಎಂದು ಈಗ ಅವರಲ್ಲಿ ಕ್ಷಮೆ ಕೇಳುತ್ತಿದೆ. ಆದರೆ ಒಡೆದ ಹಾಲು ಮತ್ತೆ ಕೂಡುವುದೇ? ರಾಜಕೀಯ ಕಾರಣಕ್ಕಾಗಿ ತಮ್ಮಲ್ಲಿಯ ಒಕ್ಕಟ್ಟನ್ನು ಮುರಿಯಲಾಗುತ್ತಿದೆ ಎಂಬ ತಥ್ಯವನ್ನು ಅವರ ಕುತಂತ್ರಕ್ಕೆ ಬಲಿಯಾಗುವುದಕ್ಕಿಂತ ಮೊದಲು ಇವರು ಅರಿತುಕೊಳ್ಳಬೇಕಾಗಿತ್ತು. ಆದರೆ ಅದೀಗ ಮಿಂಚಿಹೋದ ಮಾತು. ಈ ಒಡೆಯುವಿಕೆಯಿಂದ ಲಿಂಗಾಯಿತರಿಗೇ ಆಗಲಿ, ವೀರಶೈವರಿಗೇ ಆಗಲಿ ಯಾವ ವಿಶೇಷ ಲಾಭವೂ ಆಗಿಲ್ಲ. ಆದದ್ದೆಲ್ಲ ರಾಜಕೀಯ ಲಾಭ.
ಅಯ್ಯಪ್ಪ ಸ್ವಾಮಿಯ ದೇಗುಲವನ್ನು ಪ್ರವೇಶಿಸಲು ಹಟ ತೊಟ್ಟವರಾರೂ ಸ್ವಾಮಿಯ ಭಕ್ತರಲ್ಲ. ಸ್ವಾಮಿಗೆ ನಡೆದುಕೊಳ್ಳುವವರೂ ಅಲ್ಲ. ಲಿಂಗಾಯಿತ ಧರ್ಮವನ್ನೊಡೆದವರಾರೂ ಆ ಧರ್ಮದಲ್ಲಿ ವಿಶ್ವಾಸವುಳ್ಳವರಲ್ಲ.
ಧಾರ್ಮಿಕ ನಂಬಿಕೆ ಎನ್ನುವುದು ಬಹಳ ಸೂಕ್ಷ್ಮ ವಿಷಯ. ಸುಖಾಸುಮ್ಮನೇ ಅದರ ಮೇಲೆ ದಾಳಿ ಮಾಡಲು ಬಂದವರ ಉದ್ದೇಶವನ್ನರಿತು ಅದಕ್ಕೆ ಬಲಿಯಾಗುವುದೋ ಬೇಡವೋ ಎಂದು ವಿಚಾರ ಮಾಡುವುದು ಸೂಕ್ಷ್ಮಮತಿಗಳ ಕರ್ತವ್ಯ.