“ಉದ್ಯೋಗಸ್ಥ ಮಹಿಳೆಯರ ವೃತ್ತಿ ಮತ್ತು ಜೀವನದ ಸಮತೋಲನ”

“ಉದ್ಯೋಗಸ್ಥ ಮಹಿಳೆಯರ ವೃತ್ತಿ ಮತ್ತು ಜೀವನದ ಸಮತೋಲನ” “Work-life balance for working women”

                  ವಿಜಯಪುರ 18: ಇಂದಿನ ಒತ್ತಡ ಭರಿತ ಸಮಾಜದಲ್ಲಿ ವೃತ್ತಿ ನಿರತ ಮಹಿಳೆಯರು ಮನೆ ಮತ್ತು ವೃತ್ತಿ ಎರಡನ್ನೂ ಸಮತೋಲನಗೊಳಿಸಲು ಜಾಣ್ಮೆ ಬೆಳೆಸಿಕೊಳ್ಳುವುದು ಅನಿವಾರ್ಯ ಎಂದು ಅಲ್‌-ಅಮೀನ್ ವೈದ್ಯಕೀಯ ಮಹಾವಿದ್ಯಾಲಯದ ಮಾನಸಿಕ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಸೌಮ್ಯ ನಾಯ್ಕ ಹೇಳಿದರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ, ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗ ಮತ್ತು ದೈಹಿಕ ಶಿಕ್ಷಣ ನಿರ್ದೆಶನಾಲಯದ ವತಿಯಿಂದ ಇತ್ತೀಚಿಗೆ ಹಮ್ಮಿಕೊಂಡಿದ್ದ  “ಉದ್ಯೋಗಸ್ಥ ಮಹಿಳೆಯರ ವೃತ್ತಿ ಮತ್ತು ಜೀವನದ ಸಮತೋಲನ” ಕುರಿತು  ಒಂದು ದಿನದ ಕಾರ್ಯಾಗಾರವನ್ನು  ಉದ್ಘಾಟಿಸಿ ಮಾತನಾಡಿದರು. 

                  ಉದ್ಯೋಗ ಮತ್ತು ಕುಟುಂಬ ಜವಾಬ್ದಾರಿಯನ್ನು ಒಂದೇ ವೇಳೆ ನಿಭಾಯಿಸುವಾಗ ಮಹಿಳೆಯರು ಹೆಚ್ಚಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಮಾನಸಿಕ ಸಮತೋಲನವನ್ನು ಬೆಳೆಸಿಕೊಳ್ಳುವುದು ಅತ್ಯಂತ ಅವಶ್ಯಕ. ಸಮಯ ನಿರ್ವಹಣೆ, ಆತ್ಮವಿಶ್ವಾಸ ಮತ್ತು ಭಾವನಾತ್ಮಕ ದೃಢತೆ ವೃತ್ತಿ ಹಾಗೂ ವೈಯಕ್ತಿಕ ಬದುಕನ್ನು ಸಮತೋಲನಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಅಷ್ಟೇ ಅಲ್ಲದೇ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡರೆ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಹೊರಹೊಮ್ಮಲು ಸಾಧ್ಯವಿದೆ ಎಂದರು.ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ, ಉದಯಕುಮಾರ ಕುಲಕರ್ಣಿ ಮಾತನಾಡಿ, ವೃತ್ತಿಜೀವನವನ್ನು ವೈಯಕ್ತಿಕ ಬದುಕಿನಂತೆ ಪ್ರೀತಿಯಿಂದ ಮತ್ತು ನಿಷ್ಠೆಯಿಂದ ನಡೆಸಿದಲ್ಲಿ ವೃತ್ತಿಯಲ್ಲಿ ಒತ್ತಡ ಎದುರಾಗುವುದಿಲ್ಲ. ವೃತ್ತಿ ಮತ್ತು ವೈಯಕ್ತಿಕ ಜೀವನ ಎರಡನ್ನೂ ಸಮಾನವಾಗಿ ಗೌರವಿಸಿ, ಪ್ರೀತಿಯಿಂದ ನಿಭಾಯಿಸಿದಾಗ ಸಮತೋಲನ ಸಾಧಿಸಲು ಸಾಧ್ಯವೆಂದರು.

             ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕಿ ಪ್ರೊ.ಜ್ಯೋತಿ ಉಪಾಧ್ಯ ಮಾತನಾಡಿ, ಇಂದಿನ ದಿನಮಾನದಲ್ಲಿ ಸ್ತ್ರೀಯರು ಕುಟುಂಬ, ವೃತ್ತಿ, ಕೆಲಸದ ಸ್ಥಳ ಹಾಗೂ ಸಮಾಜದಲ್ಲಿ ಅನೇಕ ಒತ್ತಡಗಳನ್ನು ಎದುರಿಸುತ್ತಿದ್ದಾರೆ. ಈ ಒತ್ತಡವನ್ನು ಸಮತೋಲನಗೊಳಿಸಲು ವೃತ್ತಿಗೆ ಅಗತ್ಯವಾದ ಕೌಶಲ್ಯ, ಹೊಣೆಗಾರಿಕೆಯನ್ನು ನಿಭಾಯಿಸುವ ಆರೋಗ್ಯಕರ ಮನೋಭಾವ ಹಾಗೂ ವೃತ್ತಿ-ವೈಯಕ್ತಿಕ ಜೀವನದ ಬಗ್ಗೆ ಸರಿಯಾದ ದೃಷ್ಟಿಕೋನ ಮಹಿಳೆಯರಿಗೆ ಅವಶ್ಯಕ, ಕುಟುಂಬದಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಹೊರಗೆ ತಂದುಕೊಳ್ಳದೆ ಮನೆಮಟ್ಟದಲ್ಲಿಯೇ ಸಮರ​‍್ಕವಾಗಿ ಬಗೆಹರಿಸುವ ಜಾಣ್ಮೆ ಬೆಳೆಸಿಕೊಂಡರೆ, ವೃತ್ತಿ ಮತ್ತು ಜೀವನ ಎರಡನ್ನೂ ಸಮತೋಲನಗೊಳಿಸಿ ಯಶಸ್ವಿಯಾಗಿ ಮುಂದೆ ಸಾಗಲು ಸಾಧ್ಯ ಎಂದು ಹೇಳಿದರು. 

                ಇದೇ ಸಂದರ್ಭದಲ್ಲಿ ಪ್ರೊ. ಶ್ರೀನಿವಾಸ ಮಾತನಾಡಿ, ಈ ಕಾರ್ಯಾಗಾರವು ವೃತ್ತಿನಿರತ ಮಹಿಳೆಯರಿಗೆ ಅಗತ್ಯವಾದ ಜ್ಞಾನ ಮತ್ತು ಮಾರ್ಗದರ್ಶನ ನೀಡುವಂತಿದ್ದು, ಅವರ ವೃತ್ತಿ ಹಾಗೂ ವೈಯಕ್ತಿಕ ಬದುಕಿನ ಸಮತೋಲನ ಸಾಧಿಸಲು ಸಹಕಾರಿಯಾಗಲಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೀಡಾ ವಿಭಾಗದ ನಿರ್ದೇಶಕ ಪ್ರೊ. ಹನುಮಂತಯ್ಯ ಪೂಜಾರಿ ಮಾತನಾಡಿ, ವೃತ್ತಿ ಮತ್ತು ವೈಯಕ್ತಿಕ ಜೀವನ ಎರಡೂ ಒಬ್ಬರದೇ ಆಗಿರುವುದರಿಂದ ಅವುಗಳನ್ನು ಸಮಾನವಾಗಿ ನೋಡಬೇಕು. ವೃತ್ತಿಯಲ್ಲಿ ಅಗತ್ಯವಾದ ಕೌಶಲ್ಯಗಳನ್ನು ಕಲಿತು ಉತ್ತಮ ವೃತ್ತಿಪರತೆ ಹೊಂದುವಂತೆ, ಕುಟುಂಬದಲ್ಲಿಯೂ ಕುಟುಂಬನಿರ್ವಹಣೆಗೆ ಬೇಕಾದ ಕೌಶಲ್ಯಗಳನ್ನು ಕಲಿತು ಜ್ಞಾನವನ್ನು ಹೊಂದುವುದು ಇಂದಿನ ಕಾಲದಲ್ಲಿ ಅತ್ಯವಶ್ಯಕವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಡಾ. ವಿಶ್ವನಾಥ ನಡಕಟ್ಟಿ ಹಾಗೂ ವಿವಿಯ 40ಕ್ಕೂ ಹೆಚ್ಚು ವಿಭಾಗಗಳ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿನಿಯರು, ಬೋಧಕೇತರ ಸಿಬ್ಬಂದಿಗಳು ಮತ್ತೀತರಿದ್ದರು. ಅತಿಥಿ ಉಪನ್ಯಾಸಕಿ ಡಾ.ಕಸ್ತೂರಿ ರಜಪೂತ ಸ್ವಾಗತಿಸಿದರು, ಅತಿಥಿ ಉಪನ್ಯಾಸಕಿ ಡಾ.ಜ್ಯೋತಿ ಅವಟಿ ಅತಿಥಿಗಳನ್ನು ಪರಿಚಯಿಸಿದರು, ಸುನಿತಾ ಶಿವಮಂದಿರ ನಿರೂಪಿಸಿ, ವಂದಿಸಿದರು.