‘ನರ್ಸಿಂಗ್ ವೃತ್ತಿ ಸೇವಾ ಮನೋಭಾವದ ಪವಿತ್ರ ಕಾಯಕ’

‘ನರ್ಸಿಂಗ್ ವೃತ್ತಿ ಸೇವಾ ಮನೋಭಾವದ ಪವಿತ್ರ ಕಾಯಕ’ ‘Nursing is a sacred profession with a spirit of service’

ಗದಗ 12: ಮದರ್ ತೆರೇಸಾ ಇನ್ಸಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ಈಶ್ವರೀಯ ವಿಶ್ವವಿದ್ಯಾಲಯದಿಂದ ವಿಶ್ವ ದಾದಿಯರ ದಿನ ಆಚರಿಸಲಾಯಿತು.  ನರ್ಸಿಂಗ್ ವೃತ್ತಿಯು ಕೇವಲ ವೇತನಕ್ಕಾಗಿ ಮಾಡುವ ಕೆಲಸವಲ್ಲ, ಅದು ಸೇವಾ ಮನೋಭಾವದ ಪವಿತ್ರ ಕಾಯಕ. ನರ್ಸಿಂಗ್ ವೃತ್ತಿಯಲ್ಲಿ ಮಾನವೀಯ ಮೌಲ್ಯಗಳ ಮಹತ್ವ ವಿಷಯದ ಕುರಿತು ವಿಶ್ವ ದಾದಿಯರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಗದುಗಿನ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕನವರು ಮಾತನಾಡಿದರು.            

"ಫ್ಲಾರೆನ್ಸ್‌ ನೈಟಿಂಗೇಲ್ ಅವರು ಯಾವುದೇ ಆಧುನಿಕ ಸೌಲಭ್ಯಗಳಿಲ್ಲದಿದ್ದರೂ,ಯುದ್ಧಭೂಮಿಯಲ್ಲಿ ಲಾಟಿನು ಹಿಡಿದು ಗಾಯಗೊಂಡ ಸೈನಿಕರಿಗೆ ನಿಸ್ವಾರ್ಥವಾಗಿ ಸೇವೆಸಲ್ಲಿಸುವ ಮೂಲಕ ಜಗತ್ತಿಗೆ ಮಾದರಿಯಾಗಿದ್ದಾರೆ. ಅವರ ಅಪ್ರತಿಮ ಸೇವಾ ಗುಣವನ್ನು ದಾದಿಯರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದಿನ ದಿನಗಳಲ್ಲಿ ವೃತ್ತಿಯನ್ನು ಕೇವಲ ಆರ್ಥಿಕ ಲಾಭ ಅಥವಾ ಕುಟುಂಬ ನಿರ್ವಹಣೆಗಾಗಿ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ.ನರ್ಸಿಂಗ್ ಕಲಿಯುತ್ತಿರುವ ವಿದ್ಯಾರ್ಥಿಗಳು ಕೇವಲ ಅಂಕಗಳಿಗಾಗಿ ಈ ವೃತ್ತಿಗೆ ಬರುವ ಬದಲು,ರೋಗಿಗಳ ಸೇವೆಯ ನೈಜ ಉದ್ದೇಶ ಹೊಂದಿರಬೇಕು ಎಂದು ಕರೆ ನೀಡಿದರು.           

ನರ್ಸಿಂಗ್ ಕಾಲೇಜುಗಳು ವೈದ್ಯಕೀಯ ತಾಂತ್ರಿಕತೆ ಮತ್ತು ಓಷಧಿಗಳ ಬಗ್ಗೆ ಶಿಕ್ಷಣ ನೀಡಿದರೆ, ಈಶ್ವರೀಯ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಮಾನಸಿಕ ಶಕ್ತಿ, ಸ್ವಯಂ ಪ್ರೇರಣೆ ಮತ್ತುನೈತಿಕ ಮೌಲ್ಯಗಳನ್ನು ಕಲಿಸಿಕೊಡುತ್ತದೆ. ದಾದಿಯರು ರೋಗಿಗಳ ಮುಂದೆ ಹೋದಾಗ ಪ್ರೀತಿ, ಸ್ನೇಹ, ಮಾತೃವಾತ್ಸಲ್ಯ ಮತ್ತು ತ್ಯಾಗದ ಮನೋಭಾವವನ್ನು ಹೊಂದಿರಬೇಕು. ವೃತ್ತಿಯಲ್ಲಿ ಏಕಾಗ್ರತೆ ಮತ್ತು ತಾಳ್ಮೆ ಹೊಂದಲು ಧ್ಯಾನವು ಅತ್ಯಗತ್ಯ. ಧ್ಯಾನದಿಂದ ಸಿಗುವ ಸ್ವಯಂ ಪ್ರೇರಣೆಯು ದಾದಿಯರನ್ನು ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರೇರೇಪಿಸುತ್ತದೆ.”ಎಂದು ನುಡಿದರು.           

ಈ ಕಾರ್ಯಕ್ರಮದಲ್ಲಿ ನರ್ಸಿಂಗ್ ಕಾಲೇಜಿನ ಉಪಪ್ರಾಚಾರ್ಯರಾದ  ಸಂತೋಷ್, ಉಪನ್ಯಾಸಕಿಯರಾದ ಪ್ರೇಮಾ, ಅಂಬಿಕಾ, ತೇಜಸ್ವಿನಿ ಹೇಮಲತಾ ಹಾಗೂ ವಿದ್ಯಾರ್ಥಿಗಳು ಮತ್ತು ಈಶ್ವರೀಯ ವಿಶ್ವ ವಿದ್ಯಾಲಯದ ಸಹೋದರಿಯರುಭಾಗವಹಿಸಿದ್ದರು.   ಫ್ಲಾರೆನ್ಸ್‌ ನೈಟಿಂಗೇಲ್ ಅವರಂತೆ ಗುಪ್ತವಾಗಿ ಮತ್ತು ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಗುಣವನ್ನು ಬೆಳೆಸಿಕೊಳ್ಳಲು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರೇರೇಪಿಸಲಾಯಿತು.