ಕುರುಗೋಡಿನಲ್ಲಿ ‘ಅಂಬೇಡ್ಕರ್ ಓದು’ ಕಾರ್ಯಕ್ರಮ

ಕುರುಗೋಡಿನಲ್ಲಿ ‘ಅಂಬೇಡ್ಕರ್ ಓದು’ ಕಾರ್ಯಕ್ರಮ  ‘Ambedkar Odu’ (Reading Ambedkar) program in Kurugodu

ಲೋಕದರ್ಶನ ವರದಿ 

ಅಂಬೇಡ್ಕರ್ ಚಿಂತನೆಗಳು ಸಾರ್ವಕಾಲಿಕ ಪ್ರಸ್ತುತ: ನಾಗರಾಜ ಮಸೂತಿ  

ಬಳ್ಳಾರಿ, ಸೆ. 9: ಭಾರತರತ್ನ ಡಾ. ಬಿ.ಆರ್‌. ಅಂಬೇಡ್ಕರ್ ಅವರ ಚಿಂತನೆಗಳು ಹಾಗೂ ಸಿದ್ಧಾಂತಗಳು ಸಾರ್ವಕಾಲಿಕವಾಗಿ ಪ್ರಸ್ತುತವಾಗಿವೆ. ವಿದ್ಯಾರ್ಥಿಗಳು ಅವರ ಕೃತಿಗಳು, ಭಾಷಣಗಳು ಹಾಗೂ ವಿಚಾರಧಾರೆಗಳನ್ನು ಆಳವಾಗಿ ಅಧ್ಯಯನ ಮಾಡಿ ವಿಚಾರವಂತರಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕುರುಗೋಡು ತಾಲೂಕು ಅಧ್ಯಕ್ಷ ನಾಗರಾಜ ಮಸೂತಿ ಹೇಳಿದರು.  

ಕುರುಗೋಡು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬುಧವಾರ ಆಯೋಜಿಸಿದ್ದ ‘ಅಂಬೇಡ್ಕರ್ ಓದು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಭಾರತರತ್ನ ಡಾ. ಬಿ.ಆರ್‌. ಅಂಬೇಡ್ಕರ್ ಅವರ ಜೀವನ ಹಾಗೂ ಸಾಧನೆಗಳನ್ನು ಯುವ ಪೀಳಿಗೆಗೆ ಪರಿಚಯಿಸುವುದು ಇಂದಿನ ಅಗತ್ಯವಾಗಿದೆ. ಅವರ ಆದರ್ಶಗಳು ಮತ್ತು ವಿಚಾರಗಳನ್ನು ಅರಿತು ಸಮಾಜದಲ್ಲಿ ಸಮಾನತೆ ಹಾಗೂ ನ್ಯಾಯದ ಮೌಲ್ಯಗಳನ್ನು ಬೆಳೆಸಬೇಕು ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಮುಖ್ಯೋಪಾಧ್ಯಾಯ ಮೆಹತಾಬ್ ಅವರು, ಅಂಬೇಡ್ಕರ್ ಅವರ ಜೀವನ ಹೋರಾಟ, ಶಿಕ್ಷಣದ ಮಹತ್ವ, ಸಾಮಾಜಿಕ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಹಾಗೂ ಭಾರತೀಯ ಸಂವಿಧಾನದ ಮೂಲ ಆಶಯಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದರು.  

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಶಾಂತಲಾ ಮಾತನಾಡಿ, ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಸಾಮಾಜಿಕ ಪರಿವರ್ತನೆ ಸಾಧ್ಯ ಎಂಬುದನ್ನು ಅಂಬೇಡ್ಕರ್ ಅವರ ಬದುಕು ತೋರಿಸಿಕೊಟ್ಟಿದೆ. ಅವರ ವಿಚಾರಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಯುವಜನತೆಯ ಜವಾಬ್ದಾರಿ ಎಂದರು.  

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಓದುವ ಸಂಸ್ಕೃತಿ, ಸಂವಿಧಾನದ ಮೌಲ್ಯಗಳು ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಲು ‘ಅಂಬೇಡ್ಕರ್ ಓದು’ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.  

ಇದೇ ಸಂದರ್ಭದಲ್ಲಿ ‘ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ’ ಕುರಿತು ನಡೆದ ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಬಹುಮಾನವಾಗಿ ವಿತರಿಸಲಾಯಿತು. ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಲಾಯಿತು.  

ವೇದಿಕೆಯಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಮಧುಸೂದನ್ ಎಸ್‌., ಕನ್ನಡ ವಿಭಾಗದ ಮುಖ್ಯಸ್ಥ ಡಾ. ತಿಪ್ಪೇರುದ್ರ ಸಂಡೂರು, ಉಪನ್ಯಾಸಕರಾದ ಡಾ. ಚನ್ನಬಸವಯ್ಯ, ಪಂಪನಗೌಡ, ಮಂಜುನಾಥ ಸ್ವಾಮಿ, ಮಹಾಂತೇಶ ಟಿ., ಡಾ. ಹನುಮಂತಮ್ಮ ಎಚ್‌. ಸೇರಿದಂತೆ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  

ವಿಜಯಾ ಎಂ.ಪಿ. ಪ್ರಾರ್ಥಿಸಿದರು. ಎಚ್‌. ಹುಲಿಗೆಪ್ಪ ಕಾರ್ಯಕ್ರಮ ನಿರೂಪಿಸಿದರು.