ಧಾರವಾಡ 24: 11-ಧಾರವಾಡ ಲೋಕಸಭಾ ಕ್ಷೇತ್ರದ ಎಲ್ಲಾ 1872 ಮತಗಟ್ಟೆಗಳ ಮತಯಂತ್ರಗಳು ಇಂದು ಬೆಳಗಿನ ಜಾವ ಕೃಷಿವಿಶ್ವವಿದ್ಯಾಲಯದ ಮತ ಎಣಿಕೆ ಕೇಂದ್ರಕ್ಕೆ ತಲುಪಿದವು. ಮಧ್ಯಾಹ್ನದವರೆಗೂ ಅವುಗಳನ್ನು ಭದ್ರತಾ ಕೊಠಡಿಯಲ್ಲಿರಿಸಿ ಬೀಗಮುದ್ರೆ ಹಾಕುವ ಕಾರ್ಯ ಕೇಂದ್ರ ಚುನಾವಣಾ ಆಯೋಗದ ವೀಕ್ಷಕ ಭಾನುಪ್ರಕಾಶ ಏಟೂರು ಹಾಗೂ ಅಭ್ಯಥರ್ಿಗಳು ಮತ್ತು ಅವರ ಏಜೆಂಟರ್ಗಳ ಸಮ್ಮುಖದಲ್ಲಿ ಜರುಗಿತು.
ಲೋಕಸಭಾ ಕ್ಷೇತ್ರವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಪ್ರತ್ಯೇಕವಾಗಿ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ಈ ಕೊಠಡಿಗಳ ಪಕ್ಕದಲ್ಲಿಯೇ ಆಯಾ ಕ್ಷೇತ್ರಗಳ ಮತ ಎಣಿಕೆ ಕೊಠಡಿಗಳನ್ನು ಗುರುತಿಸಲಾಗಿದೆ. ಚುನಾವಣೆ ಕಾರ್ಯಕ್ಕೆ ಒಟ್ಟು 2208 ಕಂಟ್ರೋಲ್ ಯೂನಿಟ್ಗಳು, 2820 ವಿವಿಪ್ಯಾಟ್ಗಳು, 4408 ಬ್ಯಾಲೆಟ್ ಯೂನಿಟ್ಗಳನ್ನು ಬಳಸಿಕೊಳ್ಳಲಾಗಿದೆ. ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ 234, ಕುಂದಗೋಳ-214, ಧಾರವಾಡ -231, ಹುಬ್ಬಳ್ಳಿ-ಧಾರವಾಡ ಪೂರ್ವ-210, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್-253, ಹುಬ್ಬಳ್ಳಿ-ಧಾರವಾಡ ಪಶ್ಚಿಮ-266, ಕಲಘಟಗಿ-226, ಶಿಗ್ಗಾಂವ-238 ಮತಗಟ್ಟೆಗಳಲ್ಲಿ ನಿನ್ನೆ ಏಪ್ರಿಲ್ 23 ರಂದು ಶಾಂತಿಯುತವಾಗಿ ಮತದಾನ ನಡೆಯಿತು. ಮತದಾನದ ನಂತರ ಕರ್ತವ್ಯನಿರತ ಸಿಬ್ಬಂದಿ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಾಪಿಸಲಾಗಿದ್ದ ಡಿಮಸ್ಟರಿಂಗ್ ಕೇಂದ್ರಗಳಿಗೆ ಮತಯಂತ್ರಗಳನ್ನು ತಲುಪಿಸಿದರು. ಡಿಮಸ್ಟರಿಂಗ್ ಕೇಂದ್ರಗಳಿಂದ ಕೃಷಿವಿಶ್ವವಿದ್ಯಾಲಯದ ಮತಎಣಿಕಾ ಕೇಂದ್ರಕ್ಕೆ ಸೂಕ್ತ ಭದ್ರತೆಯೊಂದಿಗೆ ಮತಯಂತ್ರಗಳನ್ನು ಕಳುಹಿಸಿಕೊಡಲಾಯಿತು. ಇಂದು ಬೆಳಗಿನ ಜಾವ 3 ಗಂಟೆಯಿಂದ 6 ಗಂಟೆಯವರೆಗೂ ಕೃಷಿ ವಿಶ್ವವಿದ್ಯಾಲಯಕ್ಕೆ ವಿವಿಧ ವಿಧಾನಸಭಾ ಕ್ಷೇತ್ರಗಳಿಂದ ಬಂದ ಮತಯಂತ್ರಗಳನ್ನು ಸ್ವೀಕರಿಸುವ ಕಾರ್ಯ ನಡೆಯಿತು. ಮತಯಂತ್ರಗಳನ್ನು ಭದ್ರತಾ ಕೊಠಡಿಗಳಲ್ಲಿರಿಸಿ ಬೀಗಮುದ್ರೆ ಹಾಕಲಾಯಿತು. ಮೇ 23 ರಂದು ಮತಎಣಿಕೆ ಕಾರ್ಯ ನಡೆಯಲಿದೆ. ಅಲ್ಲಿಯವರೆಗೂ ಭದ್ರತಾ ಕೊಠಡಿಗಳಿಗೆ ಬಿಗಿಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.
ಜಿಲ್ಲಾಧಿಕಾರಿಗಳ ಕೃತಜ್ಞತೆ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಕ್ರಿಯೆಯು ಸಂಪೂರ್ಣವಾಗಿ ಶಾಂತಿಯುತವಾಗಿ ನಡೆದು ಯಶಸ್ವಿಯಾಗಿದೆ. ಈ ಮಹತ್ವದ ಕಾರ್ಯಕ್ಕೆ ಸಹಕರಿಸಿದ ಜಿಲ್ಲೆಯ ಸಾರ್ವಜನಿಕರು, ಪೊಲೀಸ್, ಅರೆಸೇನಾಪಡೆ, ಜಿಲ್ಲಾ ಸ್ವೀಪ್ ಸಮಿತಿ, ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜಿಲ್ಲಾಧಿಕಾರಿ ದೀಪಾ ಚೋಳನ್ ಕೃತಜ್ಞತೆ ಸಲ್ಲಿಸಿದ್ದಾರೆ.