ಲೋಕದರ್ಶನವರದಿ
ರಾಣೇಬೆನ್ನೂರು15: ಇಲ್ಲಿನ ಸಿದ್ದೇಶ್ವರ ನಗರದಲ್ಲಿರುವ ವಾಣಿಜ್ಯ ನಗರಕ್ಕೆ ನೀರು ಪೂರೈಸುವ ಟ್ಯಾಂಕುಗಳನ್ನು ಸ್ವಚ್ಛಗೊಳಿಸುವಂತೆ ಆಗ್ರಹಿಸಿ ಸಾಮಾಜಿಕ ಚಿಂತಕ, ಬ್ರಷ್ಟಾಚರ ವಿರೋಧಿ ಜನಾಂದೋಲನ ನ್ಯಾಸ ಸಂಸ್ಥೆಯ ಜಿಲ್ಲಾ ಸಂಚಾಲಕ ಎಮ್.ಡಿ.ಚಿಕ್ಕಣ್ಣನವರ ಮತ್ತು ರೈತ ಮುಖಂಡ ಹನುಮಂತಪ್ಪ ಕಬ್ಬಾರ ಹಾಗೂ ಸಂಘಟನೆಯ ಪದಾಧಿಕಾರಿಗಳು ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು.
ಮನವಿಗೆ ಸ್ಪಂದಿಸಿ ಎಚ್ಚೆತ್ತುಕೊಂಡ ನಗರಸಭೆ ಪೌರಾಯುಕ್ತರು ಇಲ್ಲಿನ ಭಾರಿ ಗಾತ್ರದ ಶುದ್ಧ ಕುಡಿಯುವ ನೀರು ಪೂರೈಸುವ ಟ್ಯಾಂಕ್ಗಳನ್ನು ಸ್ವಚ್ಛತೆಗೊಳಿಸಲು ಮುಂದಾಗಿರುವ ಕ್ರಮ ಸ್ವಾಗತಾರ್ಹವಾಗಿದೆ ಎಂದು ಹೋರಾಟಗಾರರು ಹರ್ಷ ವ್ಯಕ್ತಪಡಿಸಿದ್ದಾರೆ.
ಸೋಮವಾರ ಮುಂಜಾನೆಯಿಂದ ತುಮಕೂರಿನ ಭಾಗದ ಸಿಬ್ಬಂದಿಗಳು ಈ ಬೃಹತ್ ಗಾತ್ರದ ನೀರು ಸಂಗ್ರಾಲಯದಲ್ಲಿ ಇಳಿದು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ. ಅದರಲ್ಲಿ ಭಾರಿ ಪ್ರಮಾಣದಲ್ಲಿ ಕಸ, ಕಡ್ಡಿ, ಮಣ್ಣು, ಹುಳು-ಹುಪ್ಪಡಿಗಳು ಇರುವುದು ಕಂಡುಬಂದಿತು. ನಗರಸಭೆಯ ನಿಯಮಾನುಸಾರ ಪ್ರತಿ ಆರು ತಿಂಗಳಿಗೊಂದು ಸಾರೆ ನೀರಿನ ಟ್ಯಾಂಕುಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುವ ಮೂಲಕ ನಗರದ ನಾಗರೀಕರಿಗೆ ವಿಷ ರಹಿತ ಶುದ್ಧ ಕುಡಿಯುವ ನೀರು ಪೂರೈಸಲು ಮುಂದಾಗಬೇಕು ಎಂದು ಚಿಕ್ಕಣ್ಣನವರ ಮತ್ತು ಕಬ್ಬಾರ ಅವರು ನಗರಸಭೆಗೆ ಕೊರಿಕೊಂಡಿದ್ದಾರೆ